ಮಂಗಳೂರು: ಜಿಲ್ಲಾ ವಾರ್ಷಿಕ ಅಭಿವೃದ್ಧಿ ಯೋಜನೆಗೆ ಅನುಮೋದನೆ

ಮಂಗಳೂರು: 2026-27 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲೆಯ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆಗೆ ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ವಿವಿಧ ಇಲಾಖೆಗಳ ಒಟ್ಟು 256120 ಲಕ್ಷ ರೂ. ಅನುದಾನದ ಬೇಡಿಕೆಯನ್ನು ವಾರ್ಷಿಕ ಕರಡು ಅಭಿವೃದ್ಧಿ ಯೋಜನೆಯಲ್ಲಿ ಅನುಮೋದಿಸಲಾಗಿದೆ. ಈ ಪೈಕಿ 24437 ಲಕ್ಷ ರೂ. ಪರಿಶಿಷ್ಟ ಉಪ ಯೋಜನೆ ಹಾಗೂ 12021 ಲಕ್ಷ ರೂ. ಗಿರಿಜನ ಉಪಯೋಜನೆ ಅನುದಾನ ಒಳಗೊಂಡಿದೆ.

ಶಿಕ್ಷಣ ಇಲಾಖೆಯಲ್ಲಿ ಶಾಲಾ ಕೊಠಡಿಗಳ ನಿರ್ಮಾಣ, ದುರಸ್ತಿ, ಶೌಚಾಲಯ, ಆವರಣ ಗೋಡೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಒಟ್ಟು 9,187 ಲಕ್ಷ ರೂ. ಅನುದಾನ ಬೇಡಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ 4939 ಲಕ್ಷ ರೂ ಅನುದಾನ ಬೇಡಿಕೆ ಇಡಲಾಗಿದೆ.
ಸಮಗ್ರ ಬುಡಕಟ್ಟು ಯೋಜನೆಯಡಿ ಅಭಿವೃದ್ಧಿ ಮತ್ತು ದುರಸ್ತಿ ಕಾಮಗಾರಿಗೆ 5150 ಲಕ್ಷ ರೂ. ಅನುದಾನ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ 13957 ಲಕ್ಷ ರೂ. ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ 4250 ಲಕ್ಷ ರೂ. ಅನುದಾನದ ಬೇಡಿಕೆಯನ್ನು ಜಿಲ್ಲಾ ವಾರ್ಷಿಕ ಅಭಿವೃದ್ಧಿ ಯೋಜನೆ ಮಂಡಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಅಂಗನವಾಡಿಗಳ ಕಟ್ಟಡ ನಿರ್ಮಾಣ, ಶೌಚಾಲಯ, ಆವರಣ ಗೋಡೆ, ಮತ್ತಿತರ 247 ಕಾಮಗಾರಿಗಳಿಗೆ 2840 ಲಕ್ಷ ರೂ. ಅನುದಾನವನ್ನು ಅನುಮೋದಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಅನುದಾನಗಳನ್ನು ಬಳಕೆ ಮಾಡಿ ಅಭಿವೃದ್ಧಿ ಯೋಜನೆಗಳ ಪ್ರಯೋಜನವನ್ನು ಸಾರ್ವಜನಿಕರಿಗೆ ಒದಗಿಸಬೇಕು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದರ್ಶನ್ ಹೆಚ್. ವಿ, ದ.ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ ಕಾರ್ಬಾರಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಯೋಜನಾ ಸಮಿತಿ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *