ಶಕ್ತಿ ರೆಸಿಡೆನ್ಸಿಯಲ್ ಶಾಲೆಯಲ್ಲಿ ಶೈಕ್ಷಣಿಕ ಸಹಮಿಲನ ಕಾರ್ಯಕ್ರಮ

ಮಂಗಳೂರು: ಶಕ್ತಿನಗರದ ಶಕ್ತಿ ರೆಸಿಡೆನ್ಸಿಯಲ್ ಶಾಲೆಯ ಸಭಾಂಗಣದಲ್ಲಿ ವಿದ್ಯಾಭಾರತಿ ಕರ್ನಾಟಕ ದ.ಕ ಜಿಲ್ಲೆಯ ಮಂಗಳೂರಿನ ಶೈಕ್ಷಣಿಕ ಸಹಮಿಲನ ಆಯೋಜಿಸಲಾಗಿತು. ಈ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಅಜೆಕಾರಿನ ಪದ್ಮಗೋಪಾಲ್ ಎಜ್ಯುಕೇಶನ್‍ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿ ಉದ್ಪಾಟಿಸಿದರು.

ವಿದ್ಯಾಭಾರತಿಯ ಜಿಲ್ಲಾ ಅಧ್ಯಕ್ಷರಾದ ಲೋಕಯ್ಯಾ ಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ವಿದ್ಯಾಭಾರತಿ ದೇಶದಾದ್ಯಂತ ಅನೇಕ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದು, ಶಿಕ್ಷಣದಲ್ಲಿ ಭಾರತೀಯತೆಯನ್ನು ಅಳವಡಿಸುವ ಮಹತ್ತರ ಕಾರ್ಯವನ್ನು ಮಾಡುತ್ತಿದೆ ಎಂದು ತಿಳಿಸಿದರು. ಸಂಸ್ಕೃತಿ ಜ್ಞಾನ ಪರಿಚಯ ಪುಸ್ತಕದ ಮೂಲಕ ಮಕ್ಕಳಿಗೆ ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸುವ ಕಾರ್ಯ ನಡೆಯುತ್ತಿದೆ ಎಂದರು. ವಿದ್ಯಾಭಾರತಿಯ ಶಿಕ್ಷಣ ಪರಿಕಲ್ಪನೆಯಲ್ಲಿ ವ್ಯಕ್ತಿತ್ವ ವಿಕಾಸವು ಪಂಚಕೋಶಗಳ ಆಧಾರದಲ್ಲಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿಯೂ ವಿದ್ಯಾಭಾರತಿಯ ಪಂಚಪದಿ ಶಿಕ್ಷಣ ವಿಧಾನ ಅಳವಡಿಕೆಯಾಗಿರುವುದು ಸಂತಸದ ವಿಷಯವಾಗಿದೆ ಎಂದು ಹೇಳಿದರು.
ಉದ್ಘಾಟನಾ ಭಾಷಣ ಮಾಡಿದ ಸುಧಾಕರ ಶೆಟ್ಟಿ ಅವರು, ದೇಶಾದ್ಯಂತ ಸುಮಾರು 25 ಸಾವಿರ ಶಿಕ್ಷಣ ಸಂಸ್ಥೆಗಳನ್ನು ವಿದ್ಯಾಭಾರತಿ ನಡೆಸುತ್ತಿರುವುದು ದೇಶದ ಉಜ್ವಲ ಭವಿಷ್ಯದ ಸಂಕೇತವಾಗಿದೆ ಎಂದು ಅಭಿಪ್ರಾಯಪಟ್ಟರು. ನಮ್ಮ ಸನಾತನ ಧರ್ಮಕ್ಕೆಆದಿಯೂ ಇಲ್ಲ, ಅಂತ್ಯವೂ ಇಲ್ಲ. ಶಿಕ್ಷಕರು ಕೇವಲ ಪುಸ್ತಕದ ಜ್ಞಾನವನ್ನು ಬೋಧಿಸುವವರಲ್ಲ; ರಾಷ್ಟ್ರ ನಿರ್ಮಾಣದ ಹೊಣೆಗಾರಿಕೆಯನ್ನು ಹೊತ್ತವರಾಗಿದ್ದಾರೆ ಎಂದರು. ಮುಂದಿನ ಪೀಳಿಗೆಯನ್ನು ದೇಶದ ಅಭಿವೃದ್ಧಿಯ ಶಿಖರಕ್ಕೆ ಕೊಂಡೊಯ್ಯುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪ್ರತಿಯೊಬ್ಬರಲ್ಲಿರುವ ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಶಿಕ್ಷಕರು ಭಾವನೆಯೊಂದಿಗೆ ಕೆಲಸ ಮಾಡುವವರಾಗಿದ್ದು, ಒಂದು ಮಗುವಿನ ಎದುರು ಉಸಿರು ಮತ್ತು ದೇಶ ಎಂಬ ಆಯ್ಕೆ ಬಂದಾಗ ದೇಶವೇ ಮೊದಲು ಎಂಬ ಮನೋಭಾವ ಆ ಮಗುವಿನ ಮನದಲ್ಲಿ ಬರುವಂತೆ ಮಾಡುವುದರಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಹೇಳಿದರು.

ಅಧ್ಯಕ್ಷೀಯ ನುಡಿಗಳನ್ನಾಡಿದ ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ.ಎಂ.ಬಿ ಪುರಾಣಿಕ್ ಮಾತನಾಡಿ ಸಮಾಜ ಮತ್ತು ರಾಷ್ಟ್ರದಿಂದ ಅನೇಕ ಸೌಲಭ್ಯಗಳನ್ನು ಪಡೆದು ಶಿಕ್ಷಣ ಪೂರ್ಣಗೊಳಿಸಿದ ಮಕ್ಕಳನ್ನು ಕೇವಲ ಸಂಪಾದನೆಯ ದೃಷ್ಟಿಯಿಂದ ವಿದೇಶಕ್ಕೆ ಕಳುಹಿಸುವ ಮನೋಭಾವ ಸೂಕ್ತವಲ್ಲ ಎಂದು ಹೇಳಿದರು. ಶಿಕ್ಷಣವು ಕೇವಲ ಅಂಕಗಳಿಗೆ ಸೀಮಿತವಾಗದೆ ಉತ್ತಮ ಮೌಲ್ಯಗಳನ್ನು ಬೆಳೆಸುವಂತಿರಬೇಕು. ಆಧುನಿಕ ಶಿಕ್ಷಣದೊಂದಿಗೆ ಸನಾತನ ಜೀವನ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತುವ ಕಾರ್ಯವನ್ನು ವಿದ್ಯಾಭಾರತಿ ಯಶಸ್ವಿಯಾಗಿ ನಡೆಸುತ್ತಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಶಕ್ತಿ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಡಾ. ಕೆ. ಸಿ ನಾಯಕ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ 43 ಶಾಲೆಗಳ 700 ಕ್ಕೂ ಹೆಚ್ಚಿನ ಶಿಕ್ಷಕ-ಶಿಕ್ಷಕೇತರರು ಒಂದು ದಿನಗಳ ಕಾಲ ಭಾಗವಹಿಸಿದರು. ಈ ಸಂದರ್ಭದಲ್ಲಿ ಸ್ವಾಗತವನ್ನು ಜಿಲ್ಲಾ ಕಾರ್ಯದರ್ಶಿ ರಮೇಶ .ಕೆ , ಶರಣಪ್ಪ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *