ಉಡುಪಿ: ರಫ್ತು ಉದ್ದಿಮೆದಾರರಿಗೆ ರಫ್ತು ಪ್ರೋತ್ಸಾಹನ ಕಾರ್ಯಾಗಾರ

ಉಡುಪಿ: ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್ ಉಡುಪಿ ಆಶ್ರಯದಲ್ಲಿ ಜಿಲ್ಲಾ ಪಂಚಾಯತ್‍ನ ಡಾ. ವಿ. ಎಸ್ ಆಚಾರ್ಯ ಸಭಾಂಗಣದಲ್ಲಿ ಜವಳಿ ವಲಯದ ರಫ್ತು ಉದ್ದಿಮೆದಾರರಿಗೆ ಒಂದು ದಿನದ ರಫ್ತು ಪ್ರೋತ್ಸಾಹನ ಕಾರ್ಯಾಗಾರ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತುಮಕೂರು ಪೂರ್ವ ವಲಯದ ಕೈಮಗ್ಗ ಮತ್ತು ಜವಳಿ ಇಲಾಖೆ ಜಂಟಿ ನಿರ್ದೇಶಕಿ ಸುಮಲತಾ ಡಿ., ಭಾರತದ ಜವಳಿ ಉದ್ಯಮವು ದೇಶದ ಆರ್ಥಿಕತೆಗೆ ಬಲ ನೀಡುತ್ತಿದೆ. ಜವಳಿ ಉದ್ಯಮವು 2025-26 ನೇ ಆರ್ಥಿಕ ಸಾಲಿಗೆ 35 ಬಿಲಿಯನ್ ಡಾಲರ್ ನಷ್ಟು ರಫ್ತು ವಹಿವಾಟು ದಾಖಲಿಸಿದೆ. 2030 ರ ವೇಳೆಗೆ ಭಾರತದ ಜವಳಿ ಉದ್ಯಮವು 100 ಬಿಲಿಯನ್ ಡಾಲರ್ ವ್ಯವಹಾರ ನಡೆಸಬೇಕು ಎನ್ನುವ ಗುರಿ ಹೊಂದಲಾಗಿದ್ದು ಈ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಯಲ್ಲೂ ಕಾರ್ಯಾಗಾರಗಳನ್ನು ಹಮ್ಮಿಕೊಂಡು ಉದ್ದಿಮೆದಾರರಿಗೆ ಮಾಹಿತಿ ನೀಡಲಾಗುತ್ತಿದೆ. ಇಲ್ಲಿ ಪಡೆದ ಮಾಹಿತಿಯನ್ನು ಸದುಪಯೋಗ ಪಡಿಸಿಕೊಂಡು ಅಂತರರಾಷ್ಟ್ರೀಯ ಮಾರುಕಟ್ಟೆಯ ಮಾನದಂಡಗಳಿಗೆ ಅನುಗುಣವಾಗಿ ತಮ್ಮ ಉತ್ಪನ್ನಗಳನ್ನು ಉತ್ಪಾದಿಸಿ ಗರಿಷ್ಠ ರಫ್ತು ದಾಖಲಿಸಿ ದೇಶದ ಆರ್ಥಿಕತೆ ಬಲ ತುಂಬಬೇಕು ಎಂದರು.

ಉಡುಪಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ವಾಮನ್ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲೆಯಲ್ಲಿ ಸುಮಾರು 50 ರಿಂದ 60 ರಫ್ತು ಉದ್ದಿಮೆದಾರರು, ಜವಳಿ, ಗೋಡಂಬಿ ಮತ್ತು ಮೀನುಗಾರಿಕೆಗೆ ಸಂಬಂಧಿಸಿದ ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದಾರೆ. ಜಿಲ್ಲೆಯು 50 ದೇಶಗಳಿಗೆ ವಿವಿಧ ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದು 2,600 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ. ರಫ್ತು ಉದ್ಯಮಕ್ಕೆ ಇನ್ನಷ್ಟು ಹೆಚ್ಚಿನ ಉತ್ತೇಜನ ನೀಡಿ ಉಡುಪಿಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸಲು ಬೇಕಾಗುವ ಮಾಹಿತಿ ನೀಡಲು ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಉದ್ದಿಮೆದಾರರು ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಧಾರವಾಡ ಕೇಂದ್ರಿಯ ರೇಷ್ಮೆ ಮಂಡಳಿ ವಿಜ್ಞಾನಿ ಡಾ. ವಿರಾಜ್ ಸೋಮ ಕುಮಾರ್, ವಿ.ಟಿ.ಪಿ.ಸಿ ಯ ಅಬ್ದುಲ್ ರೆಹಮಾನ್ ತಾಜುದ್ದೀನ್, ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಭಾಗವಹಿಸಿದ್ದರು.

ಉಡುಪಿ ಸಣ್ಣ ಕೈಗಾರಿಕೆ ಘಟಕದ ಕಾರ್ಯದರ್ಶಿ ರಂಜನ್ ಕಲ್ಕೂರ, ಜಿಲ್ಲೆಯ ರಫ್ತು ಉದ್ದಿಮೆದಾರರು ಉಪಸ್ಥಿತರಿದ್ದರು.
ಡಿ.ಪಿ.ಆರ್.ಸಿ ಸಿಬ್ಬಂದಿ ಕೃಷ್ಣ ಸ್ವಾಗತಿಸಿ ನಿರೂಪಿಸಿ, ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ವಂದಿಸಿದರು.

Leave a Reply

Your email address will not be published. Required fields are marked *