ಉಜಿರೆ: ಅಂತಾರಾಷ್ಟ್ರೀಯ ಶೈಕ್ಷಣಿಕ-ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಡಿಯಲ್ಲಿ ಜಪಾನ್‌ನ 6 ವಿದ್ಯಾರ್ಥಿಗಳು ಈಗಾಗಲೆ ಉಜಿರೆಯ ಎಸ್.ಡಿ.ಎಂ. ಕಾಲೇಜಿಗೆ ಆಗಮಿಸಿ ವಿವಿಧ ಸಂಸ್ಥೆಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು.

ಪ್ರಥಮವಾಗಿ ಧರ್ಮಸ್ಥಳಕ್ಕೆ ಭೇಟಿ ನೀಡಿದ ತಂಡ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದಗಳೊಂದಿಗೆ ಮಾಹಿತಿ, ಮಾರ್ಗದರ್ಶನ ಪಡೆದರು.
ದೇವಸ್ಥಾನ, ಮಂಜೂಷಾ ಮ್ಯೂಸಿಯಂ, ವಿಂಟೇಜ್ ಕಾರ್‌ಗಳ ಸಂಗ್ರಹಾಲಯ, ಅನ್ನಪೂರ್ಣ, ಬಾಹುಬಲಿಬೆಟ್ಟ, ಬಸದಿಯನ್ನು ಕುತೂಹಲದಿಂದ ವೀಕ್ಷಿಸಿದರು.
ಇಬ್ಬರು ವಿದ್ಯಾರ್ಥಿಗಳಾದ ಗೊಟೊ ರೈಯೋಹೆ ಮತ್ತು ಇಕೆಡಾ ಅಕಾರಿ ಇನ್ನು ಒಂದು ತಿಂಗಳು ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಪತ್ರಿಕೋದ್ಯಮ ವಿಭಾಗದಲ್ಲಿ ಒಂದು ತಿಂಗಳು ವಿಶೇಷ ಅಧ್ಯಯನ ನಡೆಸಲಿದ್ದಾರೆ.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್ ಮತ್ತು ಪ್ರೊ. ಎಸ್. ಸತೀಶ್ಚಂದ್ರ, ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ಮತ್ತು ಸಿ.ಇ.ಒ. ಪೂರನ್‌ವರ್ಮ, ಮನೋರಮಾ ಭಟ್ ಜಪಾನ್ ವಿದ್ಯಾರ್ಥಿಗಳಿಗೆ ಪೂರಕ ಮಾಹಿತಿ, ಮಾರ್ಗದರ್ಶನ ನೀಡಿದರು.
ಎಸ್.ಡಿ.ಎಂ. ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕಿ ಮಾಲಿನಿ ಅಂಚನ್ ಮತ್ತು ವಿದ್ಯಾರ್ಥಿಗಳಾದ ಕು. ಸಂಜನಾ ಮತ್ತು ಕು. ಸಿಂಚನಾ ಜಪಾನ್‌ನಲ್ಲಿ 11 ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಇಲ್ಲಿನ ಯಕ್ಷಗಾನ, ಜಾನಪದ ಕಲೆಗಳು ಹಾಗೂ ಜೀವನಶೈಲಿ ಮತ್ತು ಸಂಸ್ಕೃತಿಯ ಪರಿಚಯ ಮಾಡಿಕೊಟ್ಟಿದ್ದರು.
