ಕನ್ನಡ ಕೊರಳಿನ ಕೂಗಾಗಿದೆಯೇ ಹೊರತು ಕರುಳಿನ ಕೂಗಾಗಿಲ್ಲ: ಅರವಿಂದ ಚೊಕ್ಕಾಡಿ

ಮೂಡುಬಿದಿರೆ: ಕನ್ನಡ ಭಾಷೆಯ ಬಗ್ಗೆ ನಮಗಿರುವ ಅಭಿಮಾನ ಕೇವಲ ಘೋಷಣೆಗಳಿಗೆ ಸೀಮಿತವಾಗಬಾರದು. ಅದು ನಮ್ಮ ಆಲೋಚನೆ, ಮಾತು ಮತ್ತು ನಡವಳಿಕೆಯಲ್ಲಿ ಪ್ರತಿಫಲಿಸಬೇಕು. ಇಂದು ಕನ್ನಡ ಕೊರಳಿನ ಕೂಗಾಗಿದೆಯೇ ಹೊರತು ಕರುಳಿನ ಕೂಗಾಗಿಲ್ಲ. ಕನ್ನಡವನ್ನು ಉಳಿಸುವ ಬಗ್ಗೆ ಮಾತನಾಡುವುದಕ್ಕಿಂತ ಅದನ್ನು ದಿನನಿತ್ಯದ ಬದುಕಿನಲ್ಲಿ ಬಳಸುವ ಮೂಲಕ ಬೆಳೆಸುವ ಅಗತ್ಯವಿದೆ ಎಂದು ಚಿಂತಕ ಅರವಿಂದ ಚೊಕ್ಕಾಡಿ ಅಭಿಪ್ರಾಯಪಟ್ಟರು.

ಅವರು ಭಾನುವಾರ ಆಳ್ವಾಸ್ ಎಂಜಿನಿಯರಿಂಗ್‍ ಕಾಲೇಜಿನ ಕನ್ನಡ ಸಂಘ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ನವೆಂಬರ್ 1 ಕನ್ನಡ ರಾಜ್ಯೋತ್ಸವವಲ್ಲ. ಕರ್ನಾಟಕ ರಾಜ್ಯೋತ್ಸವ. ಕರ್ನಾಟಕ ರಾಜ್ಯದ ರಚನೆಯ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತದೆ. ಭಾಷೆಯೊಂದಕ್ಕೆ ನಿರ್ದಿಷ್ಟವಾಗಿ ಉದಯವಾದ ದಿನ ಎಂಬುದಿಲ್ಲ. ಕನ್ನಡಕ್ಕೆ ಸುಮಾರು ಎರಡರಿಂದ ಎರಡೂವರೆ ಸಾವಿರ ವರ್ಷಗಳ ದಾಖಲಿತ ಇತಿಹಾಸವಿದ್ದು, ಅದಕ್ಕೂ ಹಿಂದಿನ ಅಸ್ತಿತ್ವವೂ ಇದ್ದಿರಬಹುದು. ಹೀಗಾಗಿ ರಾಜ್ಯೋತ್ಸವದ ಆಚರಣೆಯನ್ನು ಭಾಷೆಯ ಇತಿಹಾಸ ಮತ್ತು ರಾಜ್ಯದ ಅಸ್ಮಿತೆಯ ವಿಶಾಲ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕು.

ಹಲವು ಭಾಷೆಗಳನ್ನು ಕಲಿಯುವುದು ಒಳ್ಳೆಯ ಬೆಳವಣಿಗೆ. ಆದರೆ ಕರ್ನಾಟಕ ಎಂಬ ರಾಜ್ಯದ ಅಸ್ಮಿತೆ ಮತ್ತು ಅಸ್ತಿತ್ವವನ್ನು ಉಳಿಸುವ ಪ್ರಮುಖ ಕೊಂಡಿ ಕನ್ನಡ ಭಾಷೆ. ಭಾಷೆಯನ್ನು ನಾವು ಉಳಿಸಬೇಕೆಂದು ಪ್ರತ್ಯೇಕವಾಗಿ ಪ್ರಯತ್ನಿಸುವುದಕ್ಕಿಂತ ಅದನ್ನು ನಿರಂತರವಾಗಿ ಬಳಸಬೇಕು ಮತ್ತು ಬೆಳೆಸಬೇಕು. ಹಣವನ್ನು ಖರ್ಚು ಮಾಡಿದಷ್ಟು ಅದು ಕಡಿಮೆಯಾಗುತ್ತದೆ, ಆದರೆ ಜ್ಞಾನವನ್ನು ಬಳಸಿದಷ್ಟು ಅದು ಹೆಚ್ಚಾಗುತ್ತದೆ. ಕನ್ನಡವೂ ಅಂಥದ್ದೇ ಒಂದು ಶ್ರೀಮಂತ ಜ್ಞಾನ ಪರಂಪರೆ. ಅದನ್ನು ಪೆಟ್ಟಿಗೆಯಲ್ಲಿಟ್ಟು ಸಂರಕ್ಷಿಸುವ ವಸ್ತುವಿನಂತೆ ಕಾಣದೆ, ಬಳಕೆಯ ಮೂಲಕ ಜೀವಂತವಾಗಿಡಬೇಕು. ಭಾಷೆ, ಚಿಂತನೆ ಮತ್ತು ನಡವಳಿಕೆಗಳ ನಡುವೆ ಅವಿನಾಭಾವ ಸಂಬಂಧವಿದೆ. ನಮ್ಮ ಸಂಸ್ಕೃತಿ ನಮ್ಮ ನಡವಳಿಕೆಯಲ್ಲಿ ವ್ಯಕ್ತವಾಗುತ್ತದೆ. ನಮ್ಮ ನಡವಳಿಕೆ ಭಾಷೆಯಲ್ಲಿಯೂ ಪ್ರತಿಫಲಿಸುತ್ತದೆ. ಭಾಷೆಯನ್ನು ಅದರ ಸೌಂದರ್ಯ, ಸ್ವಾರಸ್ಯ ಮತ್ತು ಸಂದರ್ಭಕ್ಕೆ ತಕ್ಕಂತೆ ಬಳಸುವ ಅಭ್ಯಾಸ ಬೆಳೆದಾಗ ಭಾಷೆಯ ಮೇಲಿನ ಆಸಕ್ತಿಯೂ ಸಹಜವಾಗಿ ಹೆಚ್ಚುತ್ತದೆ. ಕನ್ನಡದ ಮೇಲಿನ ಅಭಿಮಾನ ಕೇವಲ ಮಾತಿನಲ್ಲಿ ವ್ಯಕ್ತವಾಗದೆ ನಮ್ಮ ಬದುಕಿನ ಭಾಗವಾಗಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಇಂಜಿನಿಯರಿಂಗ್‍ ಕಾಲೇಜಿನ ಕನ್ನಡ ಸಂಘವು ಕರ್ನಾಟಕದ ಇತಿಹಾಸ, ಸಾಂಸ್ಕೃತಿಕ ವೈವಿಧ್ಯ, ಸಾಹಿತ್ಯಿಕ ಪರಂಪರೆ ಹಾಗೂ ನಾಡಿನ ಒಟ್ಟಾರೆ ಅಸ್ಮಿತೆಯನ್ನು ಪ್ರತಿನಿಧಿಸುವ ವೇದಿಕೆಯಾಗಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ತುಳು ಭಾಷೆ ಮತ್ತು ಸಂಸ್ಕೃತಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ ಎಂಬ ಅಭಿಪ್ರಾಯವಿದೆ. ಆದರೆ ನಮ್ಮ ಪ್ರಾದೇಶಿಕ ಗುರುತುಯಾವುದೇ ಒಂದು ಭಾಷೆ ಅಥವಾ ಜಿಲ್ಲೆಗೆ ಸೀಮಿತವಾಗಿಲ್ಲ. ನಾವು ಅಖಂಡ ಕರ್ನಾಟಕದ ಪ್ರಜೆಗಳು. ತುಳು ಸೇರಿದಂತೆ ಇಲ್ಲಿನ ಎಲ್ಲ ಭಾಷೆ, ಸಂಸ್ಕೃತಿಗಳನ್ನು ಗೌರವಿಸುತ್ತಲೇ ಕನ್ನಡದ ಬಗೆಗಿನ ಪ್ರೀತಿ ಮತ್ತು ಬದ್ಧತೆಯನ್ನು ಬೆಳೆಸಿಕೊಳ್ಳಬೇಕು. ಕನ್ನಡವೆಂಬುದು ನಮ್ಮ ನಾಡಿನ ವಿಶಾಲ ಸಾಂಸ್ಕೃತಿಕ ಪರಂಪರೆಯನ್ನು ಬೆಸೆಯುವ ಪ್ರಮುಖಕೊಂಡಿಯಾಗಿದೆಎಂದರು.

ಈ ಆಶಯದ ಭಾಗವಾಗಿಯೇ ಆಳ್ವಾಸ್ ಸಂಸ್ಥೆ ಕಳೆದ 30 ವರ್ಷಗಳಿಂದ ಆಳ್ವಾಸ್‍ನುಡಿಸಿರಿ ಸಾಹಿತ್ಯ ಸಮ್ಮೇಳನದ ಮೂಲಕ ಕನ್ನಡ ನಾಡು, ನುಡಿ, ಸಂಸ್ಕೃತಿ, ಕಲೆ, ಚಿಂತನೆ ಮತ್ತು ಸಾಹಿತ್ಯದ ವಿವಿಧ ಆಯಾಮಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುತ್ತಿದೆ. ಕನ್ನಡದ ಬೆಳವಣಿಗೆ ಎಂದರೆ ಕೇವಲ ಭಾಷೆಯ ಸಂರಕ್ಷಣೆಯಲ್ಲ. ಅದರಲ್ಲಿರುವಜ್ಞಾನ, ಸೃಜನಶೀಲತೆ, ಚಿಂತನೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಸಮಾಜದ ಬದುಕಿನೊಂದಿಗೆ ಬೆಸೆಯುವುದಾಗಿದೆ. ಹೊಸ ತಲೆಮಾರಿನಲ್ಲಿ ಕನ್ನಡದ ಬಗ್ಗೆ ಅಭಿಮಾನ ಮೂಡಿಸುವುದರ ಜೊತೆಗೆ, ಕನ್ನಡವನ್ನು ಆಧುನಿಕ ಜ್ಞಾನ ಮತ್ತು ಸಂವಹನದ ಭಾಷೆಯಾಗಿಯೂ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಕಾರ್ಯಕ್ರಮದಲ್ಲಿ ಆಳ್ವಾಸ್ ಇಂಜಿನಿಯರಿಂಗ್‍ ಕಾಲೇಜಿನ ವಿದ್ಯಾರ್ಥಿಗಳು ಡೊಳ್ಳು ಕುಣಿತ, ಪೂಜಾ ಕುಣಿತ ನೃತ್ಯ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್, ಕೃಷಿ ವಿಜ್ಞಾನ ಕಾಲೇಜಿನ ಡೀನ್‍ಡಾ ವಾಸುದೇವನ್, ಕನ್ನಡ ಸಂಘದ ಸಂಯೋಜಕ ಗಣೇಶ್ ಎಂ ಆರ್ ಹಾಗೂ ಸಹಸಂಯೋಜಕ ಡಾ ಗುರುಶಾಂತ್‍ ವಗ್ಗರ್‍ ಇದ್ದರು. ಶ್ರೀಲಕ್ಷ್ಮಿ ನಿರೂಪಿಸಿ, ಭಾಗ್ಯಶ್ರೀ ಸ್ವಾಗತಿಸಿದರು.

Leave a Reply

Your email address will not be published. Required fields are marked *