ಜನಸಾಮಾನ್ಯರ ಅಹವಾಲುಗಳಿಗೆ ಪೂರಕವಾಗಿ ಸ್ಪಂದಿಸೋಣ: ಯಶ್ ಪಾಲ್ ಸುವರ್ಣ

ಉಡುಪಿ: ಪ್ರಜಾಸೇವಾ ಆಂದೋಲನ ಸಭೆಗಳಲ್ಲಿ ಸಾರ್ವಜನಿಕರಿಂದ ಸಲ್ಲಿಕೆಯಾಗುವ ಕುಂದು ಕೊರತೆಯ ಅಹವಾಲು ಹಾಗೂ ಅವರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಸೂಕ್ತ ಪರಿಹಾರಗಳನ್ನು ಕೈಗೊಂಡಲ್ಲಿ ಮಾತ್ರ ಸರಕಾರದ ಇಂತಹ ಕಾರ್ಯಕ್ರಮಗಳು ಯಶಸ್ಸು ಸಾಧಿಸುತ್ತವೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಾರ್ಯಪ್ರವೃತ್ತರಾಗೋಣ ಎಂದು ಉಡುಪಿ ಶಾಸಕ ಯಶ್‍ಪಾಲ್ ಎ ಸುವರ್ಣ ಹೇಳಿದರು.

ಅವರು ಉಪ್ಪೂರು ಗ್ರಾಮದ ಕೊಳಲಗಿರಿ ಸೇಕ್ರೆಡ್ ಹಾರ್ಟ್ ಚರ್ಚ್‍ನ ಸೌಹಾರ್ದ ಸಭಾಭವನದಲ್ಲಿ ಪ್ರಜಾಸೇವಾ ಇಲಾಖೆ ತಾಲೂಕು ಆಡಳಿತ ಬ್ರಹ್ಮಾವರ ಇವರ ಸಹಯೋಗದಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ರಾಜ್ಯ ಸರ್ಕಾರದ ನೂತನ ಯೋಜನೆಯಾದ ಪ್ರಜಾಸೇವಾ ಆಂದೋಲನ ಸಭೆಯ ಮೂಲಕ ಜನರ ಬಳಿಗೆ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಅವರ ಸಮಸ್ಯೆಗಳಿಗೆ ಅವರಿರುವಲ್ಲಿಯೇ ಪರಿಹಾರ ನೀಡುವ ಕಾರ್ಯಕ್ರಮ ಇದಾಗಿದ್ದು, ಆಡಳಿತ ಯಂತ್ರಗಳಿಗೆ ಚುರುಕು ನೀಡಿ, ಜನರ ಸಮಸ್ಯೆಗಳಿಗೆ ತುರ್ತು ಸ್ಪಂದಿಸಿ, ಅವರುಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪ್ರತೀ ಶನಿವಾರಗಳಂದು ಪ್ರಜಾಸೇವಾ ಆಂದೋಲನ ಸಭೆಗಳನ್ನು ಜಿಲ್ಲೆಯಾದ್ಯಂತ ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ಉಡುಪಿ ಬುದ್ದಿವಂತರ ಜಿಲ್ಲೆಯಾಗಿದ್ದು, ಜನರು ತಮಗೆ ಸಮಸ್ಯೆಗಳು ಬಂದಾಗ ನೇರವಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬಳಿಗೆ ತೆರಳಿ ತಮ್ಮ ಕೆಲಸಗಳನ್ನು ಮಾಡಿಸಿಕೊಂಡು ಬರುತ್ತಿದ್ದಾರೆ. ಜಿಲ್ಲೆಯು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಂದೆ ಇರಲು ಇದೂ ಒಂದು ಕಾರಣ ಎಂದ ಅವರು, ಪ್ರಸ್ತುತ ವಿವಿಧ ಇಲಾಖೆಗಳಲ್ಲಿರುವ ಸಿಬ್ಬಂದಿಗಳ ಕೊರತೆ ನೀಗಿಸುವುದರೊಂದಿಗೆ ಅವುಗಳನ್ನು ಭರ್ತಿ ಮಾಡುವ ಮೂಲಕ ಜನರ ಸೇವೆಗೆ ಅನುಕೂಲ ಮಾಡಿಕೊಡಬೇಕು ಎಂದರು.
ಸರಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದಿಂದ ಸರಕಾರವು ಪ್ರಜಾಸೇವಾ ಆಂದೋಲನ ಸಭೆಗಳನ್ನು ಆಯೋಜಿಸುತ್ತಿದೆ. ಸಾರ್ವಜನಿಕರು ತಮ್ಮ ವ್ಯಾಪ್ತಿಗಳಲ್ಲಿ ನಡೆಯುವ ಪ್ರಜಾಸೇವಾ ಆಂದೋಲನ ಸಭೆಗಳಲ್ಲಿ ಹೆಚ್ಚಿನ ಭಾಗವಹಿಸಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ತಿಳಿಸಿದರು.

ಬ್ರಹ್ಮಾವರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷೆ ಡಾ. ಸುನೀತಾ ಶೆಟ್ಟಿ ಮಾತನಾಡಿ, ಪ್ರಜಾಸೇವೆ ಎನ್ನುವುದು ಜನರ ಸೇವೆ ಮಾಡಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಒಂದು ಉತ್ತಮ ಅವಕಾಶವಾಗಿದೆ. ಸಾರ್ವಜನಿಕರ ಎಲ್ಲಾ ರೀತಿಯ ಸಮಸ್ಯೆಗಳಿಗೆ ಒಂದೇ ಸೂರಿನಡಿ ಪರಿಹಾರ ಸಿಗುವ ಈ ಕಾರ್ಯಕ್ರಮವು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಪ್ರಾಸ್ತಾವಿಕವಾಗಿ ಮಾತನಾಡಿ, ನಾಗರಿಕರ ಸೇವೆಗಳನ್ನು ನಿಗಧಿತ ಕಾಲಾವಧಿಯಲ್ಲಿ ಅವರ ಮನೆ ಬಾಗಿಲಿಗೆ ತಲುಪಿಸಲು ಹಾಗೂ ಅವರ ಅಹವಾಲುಗಳಿಗೆ ಗುಣಾತ್ಮಕ ಸ್ಪಂದನೆ ನೀಡುವ ಉದ್ದೇಶದಿಂದ ರಾಜ್ಯ ಸರಕಾರವು ಸೆ. 5 ರಿಂದ ಪ್ರಜಾಸೇವಾ ಆಂದೋಲನ ಸಭೆಗಳನ್ನು ಪ್ರತೀ ಶನಿವಾರ ರಾಜ್ಯದಾದ್ಯಂತ ನಡೆಸುತ್ತಿದ್ದು, ತಿಂಗಳ ಒಂದನೇ ಮತ್ತು ಮೂರನೇ ಶನಿವಾರದಂದು ಜಿಲ್ಲಾ ಹಂತದ ಪ್ರಜಾಸೇವಾ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ. ಎರಡು ಮತ್ತು ನಾಲ್ಕನೇ ಶನಿವಾರದಂದು ತಾಲೂಕು ಮಟ್ಟದ ಸಭೆಯನ್ನು ಹೋಬಳಿ ಮಟ್ಟದಲ್ಲಿ ಸ್ಥಳೀಯ ಶಾಸಕರ ಉಪಸ್ಥಿತಿಯಲ್ಲಿ ಸಭೆಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದರು.

ಸೇವೆಯೇ ನಮ್ಮ ಧರ್ಮ. ಸರಕಾರಿ ಕೆಲಸಕ್ಕೆ ಸೇರಿರುವುದು ಜನಸಾಮಾನ್ಯರ ಸೇವೆಗಳನ್ನು ಪೂರೈಸಲು ಎಂಬುದನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಸೇವೆ ಸಲ್ಲಿಸುವುದರೊಂದಿಗೆ ಪ್ರಜಾಸೇವಾ ಆಂದೋಲನ ಸಭೆಗಳಲ್ಲಿ ಸಲ್ಲಿಕೆಯಾಗುವ ಅಹವಾಲುಗಳ ಅರ್ಜಿಗಳನ್ನು ಆದ್ಯತೆಯ ಮೇಲೆ ಇತ್ಯರ್ಥಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ್‍ನ ಶೇ.25 ರ ಅನುದಾನದ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ಸಾಂಕೇತಿಕವಾಗಿ ವಿತರಿಸಲಾಯಿತು.

ಸಭೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ 43 ಅಹವಾಲುಗಳು ಸಲ್ಲಿಕೆಯಾಗಿದ್ದವು,
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೊಳ್ಳಿ, ಸಹಾಯಕ ಕಮೀಷನರ್ ರಶ್ಮಿ ಎಸ್.ಆರ್, ಉಪ್ಪೂರು ಗ್ರಾಮ ಪಂಚಾಯತ್‍ನ ಆಡಳಿತಾಧಿಕಾರಿ ಸುಧೀರ್ ಕುಮಾರ್ ಕೆ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಉಪ್ಪೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಉಪ್ಪೂರು ಗ್ರಾಮ ಪಂಚಾಯತ್ ಪಿಡಿಓ ಸಿದ್ದೇಶ್ ಸ್ವಾಗತಿಸಿ, ಬ್ರಹ್ಮಾವರ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಮಹೇಶ್ ನಿರೂಪಿಸಿದರು.

Leave a Reply

Your email address will not be published. Required fields are marked *