ಲೊರೆಟ್ಟೊ: ಸೆಂಟ್ರಲ್ ಶಾಲೆಯ 2026 -27 ನೇ ಸಾಲಿನ ವಿದ್ಯಾರ್ಥಿ ಮಂತ್ರಿ ಮಂಡಲ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಶಾಲೆಯ ಸಭಾಭವನದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಲೊರೆಟ್ಟೊ ಶಾಲಾ ಪ್ರಾಂಶುಪಾಲರಾದ ವಂದನೀಯ ಸ್ವಾಮಿ ಜೇಸನ್ ವಿಜಯ್ ಮೊನಿಸ್, ಶಾಲೆಯ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರಾದ ರೊಡ್ನಿ ಐವಾನ್ ಡಿಸೊಜ ಹಾಗೂ ಉಪ-ಪ್ರಾಂಶುಪಾಲರಾದ ಅನಿತಾ ಪೈಸ್ ಉಪಸ್ಥಿತರಿದ್ದರು. ಬಂಟ್ವಾಳ ಠಾಣೆಯ ಉಪ ವೃತ್ತ ನಿರೀಕ್ಷಕರಾದ ಸಂದೀಪ್ ಕುಮಾರ್ ಶೆಟ್ಟಿ ಇವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
10 ನೇ ತರಗತಿಯ ಜೊನೈದಾ ವಿದ್ಯಾರ್ಥಿ ನಾಯಕಿಯಾಗಿ ಹಾಗು 9ನೇ ತರಗತಿಯ ಪ್ರೀತ್ ಆರ್ ಪಿ. ಉಪನಾಯಕನಾಗಿ ಪ್ರಮಾಣ ವಚನ ಸ್ವೀಕರಿಸಿದರು.


ಮುಖ್ಯ ಅತಿಥಿಗಳಾದ ಬಂಟ್ವಾಳ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಸಂದೀಪ್ ಕುಮಾರ್ ಶೆಟ್ಟಿ ಅವರು ಶಾಲೆಯು ವಿದ್ಯಾರ್ಥಿಗಳಿಗೆ ಒದಗಿಸುವ ಪ್ರತಿಯೊಂದು ಅವಕಾಶವನ್ನೂ ಸದುಪಯೋಗಪಡಿಸಿಕೊಳ್ಳುವಂತೆ ಪ್ರೇರೇಪಿಸಿದರು.
ಅವರು ವಿದ್ಯಾರ್ಥಿಗಳು ಶೈಕ್ಷಣಿಕ, ಸಹಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಉತ್ತೇಜಿಸಿದರು. ಇಂತಹ ಅನುಭವಗಳು ಭವಿಷ್ಯದ ನಾಯಕರನ್ನು ರೂಪಿಸಲು ಸಹಕಾರಿಯಾಗುತ್ತವೆ ಎಂದು ಅವರು ತಿಳಿಸಿದರು.
ಶಾಲೆಯ ಪ್ರಾಂಶುಪಾಲರಾದ ವಂದನೀಯ ಸ್ವಾಮಿ ಜೇಸನ್ ವಿಜಯ್ ಮೊನಿಸ್ ಅವರು ನೂತನವಾಗಿ ಆಯ್ಕೆಯಾದ ಶಾಲಾ ಸಚಿವ ಸಂಪುಟದ ಸದಸ್ಯರನ್ನು ಅಭಿನಂದಿಸಿದರು. ನಾಯಕತ್ವದಲ್ಲಿ ಪ್ರಾಮಾಣಿಕತೆ, ಸಹಾನುಭೂತಿ ಹಾಗೂ ಜವಾಬ್ದಾರಿಯ ಮಹತ್ವವನ್ನು ಒತ್ತಿ ಹೇಳಿದರು.
