ಮೂಡುಬಿದಿರೆ: ಸ್ವಸ್ತಿಶ್ರೀ ಜೈನ ವಸತಿ ಪದವಿಪೂರ್ವ ಕಾಲೇಜಿನ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ದವಳತ್ರಯ ಜೈನಕಾಶಿ ಟ್ರಸ್ಟ್ ಮತ್ತು ಮೂಡುಬಿದ್ರಿ ಜೈನ ಮಠ ಟ್ರಸ್ಟ್ಗಳ ಸಹಯೋಗದಲ್ಲಿ, ಹುಬ್ಬಳ್ಳಿಯ ಶ್ರೀ ಇಂದ್ರಕುಮಾರ್ ಅವರ ಸಹಕಾರದೊಂದಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಲಾಯಿತು.
ಜೂನ್ 12ರಂದು ಶ್ರೀ ಜೈನ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಹಂಚಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿ, “ಶಿಕ್ಷಣದ ಮಹತ್ವವನ್ನು ಅರಿತು ಶ್ರದ್ಧೆಯಿಂದ ಅಧ್ಯಯನ ಮಾಡಿ ಉತ್ತಮ ವಿದ್ಯಾರ್ಥಿಗಳಾಗಿ ಬೆಳೆಯಿರಿ” ಎಂದು ಹಾರೈಸಿದರು. ಇದೇ ವೇಳೆ ಪುಸ್ತಕ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಅತಿಥಿಯಾಗಿ ಭಾಗವಹಿಸಿದ್ದ ಕೆನರಾ ಬ್ಯಾಂಕ್ನ ನಿವೃತ್ತ ಪ್ರಬಂಧಕರಾದ ಶ್ರೀ ಶಂಭವಕುಮಾರ್ ಅವರು ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಸೌಮ್ಯಶ್ರೀ, ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
