ಮೈ ಭಾರತ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಉಡುಪಿ: ಯುವಜನರಲ್ಲಿ ಸಾಮಾಜಿಕ ಹೊಣೆಗಾರಿಕೆ ಹಾಗೂ ಕೌಶಲ್ಯಗಳು ಸೇರಿದಂತೆ ಮತ್ತಿತರ ಚಟುವಟಿಕೆಗಳನ್ನು ಬೆಳೆಸುವ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ಮೈ ಭಾರತ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಮೈ ಭಾರತ್ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
‘ಮೈ ಭಾರತ್’ ಯೋಜನೆಯು ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಕಾರ್ಯಕ್ರಮವಾಗಿದ್ದು, ಯುವಕರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವುದು, ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದು ಹಾಗೂ ‘ವಿಕಸಿತ ಭಾರತ @2047’ ಗುರಿ ಸಾಧನೆಯಲ್ಲಿ ಯುವಜನರನ್ನು ಪಾಲುದಾರರನ್ನಾಗಿ ರೂಪಿಸುವ ಉದ್ದೇಶ ಹೊಂದಿದೆ ಎಂದರು.
ಜಿಲ್ಲೆಯ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಯುವಜನ ಅಭಿವೃದ್ಧಿ ಕಾರ್ಯಕ್ರಮವಾದ ‘ಮೈ ಭಾರತ್’ ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಎಲ್ಲಾ ಸದಸ್ಯ ಇಲಾಖೆಗಳು ಪರಸ್ಪರ ಸಹಕಾರ ಮತ್ತು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದರು.

ಜಿಲ್ಲಾ ಯೂತ್ ಆಫೀಸರ್ ಉಲ್ಲಾಸ್ ಮಾಹಿತಿ ನೀಡಿ ಮಾತನಾಡುತ್ತಾ, 15 ರಿಂದ 29 ವರ್ಷದೊಳಗಿನ ಯುವಜನರಿಗಾಗಿ ‘ಮೈ ಭಾರತ್’ ಸಂಸ್ಥೆಯನ್ನು ರಚಿಸಲಾಗಿದೆ. ಇದು ಡಿಜಿಟಲ್ ವೇದಿಕೆಯಾಗಿದ್ದು, ಯುವಜನರಲ್ಲಿ ನಾಯಕತ್ವ, ಸಾಮಥ್ರ್ಯ,ಕೌಶಲ್ಯ ಅಭಿವೃದ್ಧಿ ಯನ್ನು ಬೆಳೆಸಲಾಗುವುದು. ಈ ಪೋರ್ಟಲ್ ಮೂಲಕ ಯುವಕರಿಗೆ ಗಡಿ ಗ್ರಾಮ ಕಾರ್ಯಕ್ರಮ ಶಿಬಿರ, ವಿಕಸಿತ್ ಭಾರತ್ ಯುವ ಸಂಸತ್ತು ಮತ್ತು ರಾಷ್ಟ್ರೀಯ ಯುವ ಜನೋತ್ಸವದಂತಹ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಉತ್ತಮ ಅವಕಾಶಗಳು ಸಿಗಲಿವೆ. ಇದರೊಂದಿಗೆ, ಸ್ವಯಂಸೇವಕರಿಗೆ ವಿವಿಧ ಕ್ಷೇತ್ರಗಳಲ್ಲಿ ಪ್ರಾಯೋಗಿಕ ಕಲಿಕಾ ಕಾರ್ಯಕ್ರಮಗಳ ಪ್ರಯೋಜನಗಳೂ ಲಭ್ಯವಿವೆ ಎಂದರು.
ಗ್ರಾಮೀಣ ಮತ್ತು ನಗರ ಪ್ರದೇಶದ ಯುವಜನರಿಗಾಗಿ ಉದ್ಯೋಗಾವಕಾಶ ಹೆಚ್ಚಿಸುವ ಕೌಶಲ್ಯ ತರಬೇತಿ, ನಾಯಕತ್ವ ಶಿಬಿರಗಳು ಹಾಗೂ ಉದ್ಯಮಶೀಲತಾ ಕಾರ್ಯಾಗಾರ ಸಂಘಟಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ವಾರ್ತಾಧಿಕಾರಿ ಮಂಜುನಾಥ್ ಬಿ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ನಿಕೇತನಾ, ಮೈ ಭಾರತ ಜಿಲ್ಲಾ ಸಲಹಾ ಸಮಿತಿ ಹಾಗೂ ಜಿಲ್ಲಾ ಸಮನ್ವಯ ಸಮಿತಿಯ ಸದಸ್ಯರು, ಪ್ರಾಂಶುಪಾಲರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *