ಮಂಗಳೂರು: ಅಕ್ಟೋಬರ್ 31 ರಂದು 2026ನೇ ಸಾಲಿನ ಮಕ್ಕಳ ಹಕ್ಕುಗಳ ಮಾಸೋತ್ಸವ ಉದ್ಘಾಟನೆ ಆಗಲಿದ್ದು, ಈ ಸಾಲಿನ ಜಿಲ್ಲಾ ಮಕ್ಕಳ ಹಕ್ಕುಗಳ ಮಾಸೋತ್ಸವ ಸಮಿತಿಯ ನೂತನ ಸಂಚಾಲಕರಾಗಿ ವನಿತಾ ಭಂಡಾರಿ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಅ. 22 ರಂದು ಪಡಿ ಸಂಸ್ಥೆಯ ಆವರಣದಲ್ಲಿ ಮಕ್ಕಳ ಹಕ್ಕುಗಳ ಮಾಸೋತ್ವದ ಜಿಲ್ಲಾ ಮಟ್ಟದ ಸಮಾಲೋಚನಾ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಮಕ್ಕಳ ಹಕ್ಕುಗಳ ಮಾಸೋತ್ಸವದ ಕಾರ್ಯಕ್ರಮ, ಕಾರ್ಯಕ್ರಮಗಳ ರೂಪುರೇಷೆ ಹಾಗೂ ಅನುಷ್ಠಾನದ ಕುರಿತು ಚರ್ಚಿಸಲು ವಿವಿಧ ನಾಗರಿಕ ಸಮಾಜ ಸಂಘಟನೆಗಳ ಪ್ರತಿನಿಧಿಗಳ ಪೂರ್ವಭಾವಿ ಸಮಾಲೋಚನಾ ಸಭೆ ನಡೆಯಿತು. ಈ ಸಭೆಯಲ್ಲಿ ಮಕ್ಕಳ ಹಕ್ಕುಗಳ ಮಾಸೋತ್ಸವ ಕಾರ್ಯಕ್ರಮವನ್ನು ಮತ್ತು ಮಾಸೋತ್ಸವದ ಅಂಗವಾಗಿ ಈ ಕೆಳಗಿನ ಕಾರ್ಯಕ್ರಮಗಳನ್ನು ನಡೆಸುವುದೆಂದು ತೀರ್ಮಾನಿಸಲಾಯಿತು.
- ವಸತಿ ನಿಲಯಗಳಲ್ಲಿ , ಮದರಸಗಳಲ್ಲಿ ಬಾಲ್ಯವಿವಾಹ, ಪೋಕ್ಸೋ, ಜೆಜೆಬಿ ಆಕ್ಟ್, ಮಕ್ಕಳ ಹಕ್ಕುಗಳು, ಬಾಲ ಕಾರ್ಮಿಕತೆಯ ಬಗ್ಗೆ ಅರಿವು ನೀಡುವುದು.
- “ಸುರಕ್ಷಿತ ಗ್ರಾಮ” ಎಂಬ ಪರಿಕಲ್ಪನೆಯಡಿ ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
- ಜಿಲ್ಲಾದ್ಯಾಂತ ಗ್ರಾಮ ಪಂಚಾಯಿತಿಗಳ ಮಕ್ಕಳ ಮತ್ತು ಮಹಿಳಾ ರಕ್ಷಣಾ ಕಾವಲು ಸಮಿತಿ ಸದಸ್ಯರಿಗೆ ತರಭೇತಿ ನೀಡುವುದು.
- ಎಲ್ಲಾ ಧಾರ್ಮಿಕ ಕ್ಷೇತ್ರಗಳನ್ನು ಮಕ್ಕಳ ಸ್ನೇಹಿ ಮಾಡುವಲ್ಲಿ ಮಾಹಿತಿ ಕಾರ್ಯಗಾರವನ್ನು ಹಮ್ಮಿಕೊಳ್ಳುವುದು.
- ಧಾರ್ಮಿಕ ಕ್ಷೇತ್ರ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಬಾಲ್ಯವಿವಾಹ ನಿಷೇದ ಕುರಿತು ಫಲಕಗಳ ಅಳವಡಿಕೆ.
- ಬಾಲ್ಯವಿವಾಹ ಮುಕ್ತ ಅಭಿಯಾನ ಕಾರ್ಯಕ್ರಮ ನವೆಂಬರ್ 27 ರಿಂದ ನೂರು ದಿನಗಳ ಕಾರ್ಯಕ್ರಮ ಘೋಷಣೆ.
- ಜಿಲ್ಲಾ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ -2026 ಕಾರ್ಯಕ್ರಮವನ್ನು ದಿನಾಂಕ 31-10-2026 ರಂದು ನಡೆಸುವುದು.
- ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ದಾಖಲಿಸುವುದು.
ಈ ಸಭೆಯಲ್ಲಿ ಪಡಿ ಸಂಸ್ಥೆ/ಜೆ.ಆರ್.ಸಿ (Just Right for Children) ಇದರ ನಿರ್ದೇಶಕರಾದ ರೆನ್ನಿ ಡಿʼಸೋಜ ಇವರು ಮಾಸೋತ್ಸವ ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸಿದರು. ಈ ಸಭೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಕುಮಾರ್ ಶೆಟ್ಟಿಗಾರ್ ಮಕ್ಕಳ ರಕ್ಷಣಾದಿಕಾರಿ, ಪಡಿ ಸಂಸ್ಥೆಯ ನಿರ್ಧೇಶಕರಾದ ರೆನ್ನಿ ಡಿʼಸೋಜ, ಜಿಲ್ಲಾ ಮಕ್ಕಳ ಹಕ್ಕುಗಳ ಮಾಸೋತ್ಸವ ಸಮಿತಿಯ ನಿಕಟಪೂರ್ವ ಸಂಚಾಲಕರಾದ ಮಹಮ್ಮದ್ ರಫೀಕ್, ವನಿತಾ ಭಂಡಾರಿ, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಪದಾಧಿಕಾರಿಗಳಾದ ಕಮಲ ಗೌಡ, ಪ್ರೇಮಿ ಫೆರ್ನಾಂಡೀಸ್, ಎ.ಕೆ. ಹ್ಹಾರೀಸ್, ನಂದಾ ಪಾಯಸ್, ಅನಂತರಾಮ ಹೇರಳೆ, ಹಾಗೂ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು , ಪಡಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
