ಮುಂಬಯಿ: ಕರ್ನಾಟಕ ಕರಾವಳಿಯ ಮಂಗಳೂರುನಲ್ಲಿನ ಮಾಂಡ್ ಸೊಭಾಣ್'ಸಂಸ್ಥೆಯು ತನ್ನ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನವನ್ನು ಇದೇ ನ.03 ರಿಂದ 15ರ ವರೆಗೆ ಮಂಗಳೂರುನ ಶಕ್ತಿನಗರದಲ್ಲಿರುವ ಮಾಂಡ್ ಸೊಭಾಣ್ನ ಪರಂಪರಾ ಸಾಂಸ್ಕೃತಿಕ ಕೇಂದ್ರ ತೆರೆದಾಂಗಣದ ಕಲಾಂಗಣ್’ನಲ್ಲಿ ಆಯೋಜಿಸಿದ್ದು, ಮುಂಬಯಿ ಸೇರಿದಂತೆ ವಿಶ್ವದಾದ್ಯಂತದ ಸುಮಾರು 6,789 ಗಾಯಕರುಗಳ ಸುಮಾರು 300 ತಂಡಗಳು ಭಾಗವಹಿಸಿ 5,000ಕ್ಕೂ ಅಧಿಕ ಕೊಂಕಣಿ ಹಾಡುಗಳನ್ನಾಡಿ ಇದು ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸುವ ಗುರಿ ಹೊಂದಿದೆ ಎಂದು ಮಾಂಡ್ ಸೊಭಾಣ್ ಸಂಸ್ಥೆಯ ಅಧ್ಯಕ್ಷ ಲೂಯಿಸ್ ಜೆ.ಪಿಂಟೊ ತಿಳಿಸಿದರು.










ಗಿನ್ನೆಸ್ ವಿಶ್ವ ದಾಖಲೆ ನಿರ್ಮಾಣ ಕಾರ್ಯಕ್ರಮದ ಬಗ್ಗೆ ಬುಧವಾರ ಸಂಜೆ ಬಾಂದ್ರಾ ಪಶ್ಚಿಮದ ಹಿಲ್ ರೋಡ್ನಲ್ಲಿನ ಮಿಲಾಗ್ರಿಸ್ ಹೌಸ್ ಕಟ್ಟಡದಲ್ಲಿನ ಮಾಡೆಲ್ ಬ್ಯಾಂಕ್ನ ಸಮಾಲೋಚನಾ ಸಭಾಗೃಹದಲ್ಲಿ ಆಯೋಜಿಸಲ್ಪಟ್ಟ ಸಭೆಯನ್ನುದ್ದೇಶಿಸಿ ಲೂಯಿ ಪಿಂಟೊ ಮಾಹಿತಿಯನ್ನಿತ್ತು ಮಹಾರಾಷ್ಟ್ರದ (ಮುಂಬಯಿ) ಜನತೆಗೆ ಲೂಯಿ ಜೆ.ಪಿಂಟೊ ಕರೆಯೋಲೆಯನ್ನಿತ್ತು ಆಹ್ವಾನಿಸಿದರು.
ಕೊಂಕಣಿ ಭಾಷೆ, ಕಲೆ ಮತ್ತು ಸಂಸ್ಕೃತಿಯ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವ ಪ್ರತಿಷ್ಠಿತ ಸಾಂಸ್ಕೃತಿಕ ಸಂಸ್ಥೆ ವಿಶ್ವದ ಪ್ರಮುಖ ಕೊಂಕಣಿ ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಒಂದಾಗಿದ್ದು, 40ನೇ ವರ್ಷದ ಸಾಂಸ್ಕೃತಿಕ ಸೇವಾ ಸಂಭ್ರಮದಲ್ಲಿದೆ. ಇದೀಗ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನವನ್ನು ಆಯೋಜಿಸಿದ್ದು ಈ ಐತಿಹಾಸಿಕ ಕಾರ್ಯಕ್ರಮವನ್ನು `ಮಾಂಡ್ ಸೊಭಾಣ್’ ಸಂಸ್ಥಾಪಕ, ಕೊಂಕಣಿ ಹೋರಾಟಗಾರ ಸ್ವರ್ಗೀಯ ಎರಿಕ್ ಒಜಾರಿಯೊ ಅವರಿಗೆ ವಿಶೇಷ ಗೌರವಾಗಿ ಸಮರ್ಪಿಸಲಾಗಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸುವ ಮಹತ್ವಾಕಾಂಕ್ಷಿ ಪ್ರಯತ್ನವಾಗಿದೆ ಎಂದರು.
ನಿರಂತರ ಗಾಯನ ಮ್ಯಾರಥಾನ್ನೊಂದಿಗೆ 12 ದಿನಗಳ ಸಮ್ಮೇಳನದಲ್ಲಿ ಸಂಗೀತ ವಿಚಾರ ಸಂಕಿರಣ, ಸಾಂಸ್ಕೃತಿಕ ಪ್ರದರ್ಶನ ಸೇರಿದಂತೆ ಸಂಗೀತ ಕ್ಷೇತ್ರದ ಹಿರಿಯ ಸಾಧಕರಿಗೆ ಗೌರವ ಮತ್ತು ಹಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕೊಂಕಣಿ ಸಂಗೀತದ ಶ್ರೀಮಂತ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವುದು, ವಿವಿಧ ಪ್ರದೇಶಗಳ ಸಂಗೀತ ಶೈಲಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವುದು ಹಾಗೂ ಕೊಂಕಣಿ ಭಾಷೆ ಮತ್ತು ಸಂಸ್ಕೃತಿಯ ವೈವಿಧ್ಯತೆಯನ್ನು ಸಂಭ್ರಮಿಸುವುದು ಈ ಮಹಾ ಸಮ್ಮೇಳನದ ಪ್ರಮುಖ ಉದ್ದೇಶವಾಗಿದೆ. ಆದ್ದರಿಂದ ಈ ಸಂಗೀತ ಮಹಾ ಸಮ್ಮೇಳನವನ್ನು ಯಶಸ್ವೀ ಗೊಳಿಸುವಂತೆ ಲೂಯಿ ಜೆ.ಪಿಂಟೊ ಕರೆಯಿತ್ತರು.
ಮಾಂಡ್ ಸೊಭಾಣ್ ಸಂಸ್ಥೆಯ ಕಲಾಂಗಣ್ನ ಪಿರ್ಜೆಂತ್ ರೋಯ್ ಕ್ಯಾಸ್ಟೆಲಿನೊ (ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ) ಸ್ವಾಗತಿಸಿ ಮಾತನಾಡಿ `ಬಹು ಗಾಯಕರು ಭಾಗವಹಿಸುವ ಅತಿ ದೀರ್ಘ ನಿರಂತರ ಗಾಯನ ಮ್ಯಾರಥಾನ್’ ವಿಭಾಗದಲ್ಲಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸುವ ಪ್ರಯತ್ನ ನಡೆಯಲಿದ್ದು ಇದು ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಲಿದೆ. ನ.03ರ ಮಂಗಳವಾರ ಬೆಳಿಗ್ಗೆ 6:00 ಗಂಟೆಗೆ ಆರಂಭವಾಗುವ ಗಾಯನ ಕಾರ್ಯಕ್ರಮವು ಒಟ್ಟು 12 ದಿನ, 12 ಗಂಟೆ ಮತ್ತು 12 ನಿಮಿಷಗಳ ಕಾಲ ನಿರಂತರವಾಗಿ ನಡೆಯಲಿದ್ದು ನ.15ರ ಭಾನುವಾರ ಸಂಜೆ 6:12 ಗಂಟೆಗೆ ಸಮಾಪನಗೊಳ್ಳಲಿದೆ. ಇದರಲ್ಲಿ ವಿವಿಧ ಪ್ರಾದೇಶಿಕ ಉಪಭಾಷೆಗಳು ಮತ್ತು ಸಮುದಾಯಗಳ ಸಂಗೀತ ಪರಂಪರೆಯನ್ನು ಪ್ರತಿನಿಧಿಸುವ ಕ್ರೈಸ್ತ, ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್ಬಿ), ಕುಡ್ಮಿ, ದಾಲ್ದಿ, ಖಾರ್ವಿ, ಸಿದ್ದಿ ಹಾಗೂ ಸಿರಿಯನ್ ಆರ್ಥೊಡಾಕ್ಸ್ ಸಮುದಾಯಗಳ ಸಂಗೀತ ಪರಂಪರೆಗಳಿಗೆ ಸೇರಿದ ಕೊಂಕಣಿ ಹಾಡುಗಳನ್ನು ಪ್ರಸ್ತುತಪಡಿಸಲಿದ್ದಾರೆ ಎಂದರು.
ಮಾಡೆಲ್ ಕೋ-ಆಪರೇಟಿವ್ (ಶೆಡ್ಯೂಲ್ಡ್) ಬ್ಯಾಂಕ್ ಲಿಮಿಟೆಡ್ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯೂ. ಡಿ’ಸೋ ಜಾ ಸಭಾಧ್ಯಕ್ಷತೆ ವಹಿಸಿ ಸಾಂಪ್ರದಾಯಿಕವಾಗಿ ವೀಳೆದೆಲೆ, ಅಡಿಕೆ, ನೀರು ನೀಡಿ ಸಂಗೀತ ಮಹಾ ಸಮ್ಮೇಳನಕ್ಕೆ ಮುಂಬಯಿ ಜನತೆಗೆ ಆಹ್ವಾನಿಸಿದರು. ಸದ್ಯ ಕೊಂಕಣಿ ಜನರಲ್ಲಿನ ಯುವ ಜನಾಂಗದಲ್ಲಿ ಮಾತೃಭಾಷಾ ಮೋಹ, ಭಾಷಾಭಿಮಾನ ಹೆಚ್ಚುತ್ತಿದ್ದು ಇಂತಹ ಸಮ್ಮೇಳನೂ ಇದಕ್ಕೆ ಪೂರಕವಾಗಿದೆ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾಡೆಲ್ ಬ್ಯಾಂಕ್ನ ಉಪ ಕಾರ್ಯಾಧ್ಯಕ್ಷ ಮ್ಯಾಕ್ಸಿಮ್ ಐ.ಪಿಂಟೋ, ನಿರ್ದೇಶಕ ಜೋರ್ಜ್ ಕಾಸ್ತೇಲಿನೊ, ಕ್ರಿಶ್ಚನ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ನ ಸಂಸ್ಥಾಪಕ ಕಾರ್ಯಾಧ್ಯಕ್ಷ ವಿನ್ಸೆಂಟ್ ಮಥಾಯಸ್, ಉಪ ಕಾರ್ಯಾಧ್ಯಕ್ಷ ಅಡ್ವಕೇಟ್ ಪಿಯೂಸ್ ವಾಸ್, ಮಾಜಿ ಕಾರ್ಯಾಧ್ಯಕ್ಷ ಹೆನ್ರಿ ಲೋಬೊ, ನಿರ್ದೇಶಕ ಗ್ರೆಗೋರಿ ಡಿಸೋಜಾ, ಮಾಂಡ್ ಸೊಭಾಣ್ ಕಲಾಂಗಣ್ ಆಡಳಿತ ಮಂಡಳಿಯ ಅಧ್ಯಕ್ಷ ರೊನಾಲ್ಡ್ ಮೆಂಡೋನ್ಸಾ ಬಾಂದ್ರಾ, ಮುಂ¨ಯಿ ಪ್ರಾದೇಶಿಕ ಪ್ರತಿನಿಧಿ ಲಿಯೋ ಫೆರ್ನಾಂಡಿಸ್ ಜೆರಿಮೆರಿ (ಕೊಂಕಣ್ ಅಸೋಸಿಯೇಶನ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ) ಕೊಂಕಣ್ ಟ್ರಸ್ಟ್ ನ ಜೊತೆ ಕಾರ್ಯದರ್ಶಿ ವಿನ್ಸೆಂಟ್ ಕಾಸ್ತೆಲಿನೋ, ಜೋನ್ ರೋಡ್ರಿಗಸ್, ಉದ್ಯಮಿಗಳಾದ ಗ್ಯಾಬ್ರಿಯಲ್ ಮೆಂಡೋನ್ಸಾ, ಪಾವ್ಲ್ ಮಸ್ಕರೇನ್ಹಾಸ್, ಜೋನ್ ರೆಬೆಲ್ಲೋ ಸಯಾನ್, ಶಾನ್ ರೆಬೆಲ್ಲೋ, ಹೆರಾಲ್ಡ್ ಕಾಸ್ತೆಲಿನೋ, ವಿಲಿಯಂ ಡಿಸೋಜಾ ವಕೋಲ, ಸಂಗೀತಕಾರ ಚಾರ್ಲ್ಸ್ ಡಿಕುನ್ಹಾ, ಕೊಂಕಣಿ ಭಾಷಾ ಮಂಡಳ್ ಮಹಾರಾಷ್ಟ್ರ ಇದರ ಗೌ| ಪ್ರ| ಕಾರ್ಯದರ್ಶಿ ಲಾರೇನ್ಸ್ ಡಿಸೋಜಾ ಕಮಾನಿ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಶುಭಾರೈಸಿದರು.
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
