ಮಂಗಳೂರು: ಮಂಗಳೂರಿನ ಶಕ್ತಿ ನಗರದಲ್ಲಿರುವ ಶಕ್ತಿ ವಿದ್ಯಾ ಸಂಸ್ಥೆಯಲ್ಲಿನ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ವಿದ್ಯಾಭಾರತಿ ಉನ್ನತ ಶಿಕ್ಷಣ ಮತ್ತು ವಿದ್ಯಾಭಾರತಿ ಕರ್ನಾಟಕ ಇದರ ವತಿಯಿಂದ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಸಿಬಿಎಸ್‍ಇ ಶಿಕ್ಷಕರಿಗೆ ಏನ್‍ಸಿಇಆರ್ ಟಿ ಹೊಸ ಪಠ್ಯಕ್ರಮದ ಕುರಿತಾದ ದೃಷ್ಟಿಕೋನ ಮತ್ತು ಚಿಂತನಾ ಮಾದರಿ ಒಂದು ದಿನದ ಕಾರ್ಯಗಾರ ನಡೆಯಿತು. ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಗಳಿಂದ ಒಟ್ಟು 40 ಸಿಬಿಎಸ್‍ಇ ಶಾಲೆಗಳು ನೋಂದಣಿ ಮಾಡಿಕೊಂಡಿದ್ದು ಸುಮಾರು 135ಕ್ಕೂ ಹೆಚ್ಚು ಪ್ರಾಂಶುಪಾಲರು ಮತ್ತು ಶಿಕ್ಷಕರು ಈ ಕಾರ್ಯಗಾರದಲ್ಲಿ ಭಾಗವಹಿಸಿದ್ದರು.










ಈ ಕಾರ್ಯಗಾರದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಧ್ಯಕ್ಷರು, AICS ಮತ್ತು ಎಸ್.ಎಂ.ಎಸ್ ಆಂಗ್ಲ ಮಾಧ್ಯಮ ಶಾಲೆ ಬ್ರಹ್ಮಾವರ ಇಲ್ಲಿಯ ಪ್ರಾಂಶುಪಾಲರಾದ ಅಭಿಲಾಷ ಅವರು ದೀಪವನ್ನು ಬೆಳಗಿಸಿ ಕಾರ್ಯಗಾರವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಭಾರತೀಯ ತತ್ತ್ವಶಾಸ್ತ್ರವು ಯಾವಾಗಲೂ ಮಾನವನ ದೇಹ, ಮನಸ್ಸು ಮತ್ತು ಆತ್ಮಗಳ ಸುಂದರ ಸಮನ್ವಯ ಎಂದು ನಂಬುತ್ತದೆ. ಇದೇ ನಮ್ಮ ನಂಬಿಕೆ. ಮಹಾತ್ಮಗಾಂಧೀಜಿಯವರಂತಹ ಅನೇಕ ಮಹನೀಯರು ಈ ವಿಚಾರವನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಲು ಪ್ರಯತ್ನಿಸಿದರು.
ಮಹಾತ್ಮಗಾಂಧೀಜಿಯವರು ಮೂಲ ಶಿಕ್ಷಣ (Basic Education) ಪದ್ಧತಿಯನ್ನು ಪ್ರೋತ್ಸಾಹಿಸಿದರು. ಅದರಲ್ಲಿ ವಿದ್ಯಾರ್ಥಿಗಳು ಕೇವಲ ಪುಸ್ತಕದ ಜ್ಞಾನವನ್ನು ಪಡೆಯುವುದಲ್ಲದೆ, ಮರಗೆಲಸ, ನೇಯ್ಗೆ, ಕೃಷಿ ಮುಂತಾದ ಪ್ರಾಯೋಗಿಕ ಕೆಲಸಗಳನ್ನು ಕಲಿಯಬೇಕಾಗಿತ್ತು. ಇದರ ಜೊತೆಗೆ ಎಲ್ಲಾ ಸೈದ್ಧಾಂತಿಕ ವಿಷಯಗಳನ್ನೂ ಕಲಿಸಲಾಗುತ್ತಿತ್ತು. ಗಾಂಧೀಜಿಯವರ ನಂಬಿಕೆಯ ಪ್ರಕಾರ, ಮಕ್ಕಳು ಪ್ರಾಯೋಗಿಕವಾಗಿ ಕಲಿಯಬೇಕು ಮತ್ತು ಸ್ವಾವಲಂಬಿಗಳಾಗಬೇಕು. ಇದೇ ಅವರ ಶಿಕ್ಷಣದ ತತ್ತ್ವವಾಗಿತ್ತು.
ಆದರೆ ಇಂದು ನಾವು ಕೌಶಲ್ಯಾಧಾರಿತ ಶಿಕ್ಷಣ, ವೃತ್ತಿಪರ ಶಿಕ್ಷಣ ಮತ್ತು ವಿವಿಧ ಜೀವನ ಕೌಶಲ್ಯಗಳ ಬಗ್ಗೆ ಮಾತನಾಡುತ್ತಿದ್ದೇವೆ. ನಮ್ಮ ಮೂಲ ಶಿಕ್ಷಣ ವ್ಯವಸ್ಥೆ ಮಾತ್ರ ಬಹುತೇಕ ಹಾಗೆಯೇ ಇದೆ. ಅದೇ ವ್ಯವಸ್ಥೆಯೊಳಗೆ ಹೊಸ ವಿಷಯಗಳನ್ನು ಅಳವಡಿಸಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ. ಆದ್ದರಿಂದ ಎಲ್ಲವನ್ನೂ ಒಟ್ಟಿಗೆ ತರುವುದು ನಮಗೆ ಕಷ್ಟವಾಗುತ್ತಿದೆ. ಏಕೆಂದರೆ ಮೂಲ ವ್ಯವಸ್ಥೆಯಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ. ಬದಲಾವಣೆಗೆ ಶಿಕ್ಷಕರಾದ ನಾವು ಹೊಂದಿಕೊಂಡು ನಂತರ ಮಕ್ಕಳಲ್ಲಿ ಬದಲಾವಣೆಯನ್ನು ತರಲು ಸಾಧ್ಯ ಎಂದು ತಿಳಿಸಿದರು.
ನಂತರ ಮಾತನಾಡಿದ ವಿವೇಕಾನಂದ ಕಾಲೇಜು ಪುತ್ತೂರು ಇಲ್ಲಿಯ ಪ್ರಾಂಶುಪಾಲರು ಮತ್ತು ವಿದ್ಯಾಭಾರತಿ ಉಚ್ಚ ಶಿಕ್ಷಾ ಸಂಸ್ಥಾನದ ರಾಷ್ಟ್ರೀಯ ಕಾರ್ಯದರ್ಶಿಗಳಾಗಿರುವ ಡಾ ಶೋಭಿತ ಸತೀಶ್ ಅವರು ಪ್ರಾಸ್ತಾವಿಕದಲ್ಲಿ ಅನುಭವಾತ್ಮಕವಾದ ಕಲಿಕೆ ಶಾಲೆಗಳಲ್ಲಿ ನಡೆಯಬೇಕು. ಮಕ್ಕಳು ಪ್ರಶ್ನೆ ಕೇಳುವದನ್ನು ಕಲಿಯಬೇಕು. ಕಲಿಕೆಗೆ, ಸೃಜನ ಶೀಲತೆಗೆ, ಬುದ್ದಿವಂತಿಕೆಗೆ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುವಂತಹ ಪರಿಕಲ್ಪನೆ NCERTಪಠ್ಯಕ್ರಮದಲ್ಲಿದೆ. ನಮಗೆ ತಿಳಿದಂತಹ ಜ್ಞಾನವನ್ನು ಸಾಮಾನ್ಯ ಜನರಿಗೆ ಹೇಗೆ ತಲುಪಿಸಬಹುದು ಎಂಬುದನ್ನು ನಾವು ಓಅಇಖಖಿ ಪಠ್ಯಕ್ರಮದ ಮೂಲಕ ಕಲಿಯಬಹುದು. ಪಂಚಕೋಶಾತ್ಮಕ ಶಿಕ್ಷಣವನ್ನು ಪಠ್ಯಕ್ರಮದಲ್ಲಿ ಅಳವಡಿಸಬಹುದು. ಒಳ್ಳೆಯ ವಿದ್ಯಾರ್ಥಿಯನ್ನು ರೂಪಿಸಲು ಇಂದಿನ ಕಾಲಮಾನಕ್ಕೆ ತಕ್ಕಂತೆ ಮಕ್ಕಳನ್ನು ಬೆಳೆಸಲು ಈ ಪಠ್ಯಕ್ರಮ ಸಹಕಾರಿಯಾಗಿದೆ ಎಂದು ತಿಳಿಸಿದರು.
ನಂತರ ಈ ಕಾರ್ಯಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ರಾಷ್ಟ್ರೀಯ ಪಠ್ಯಕ್ರಮ ಮತ್ತು ಬೋಧನಾ-ಕಲಿಕಾ ಸಾಮಗ್ರಿ ಸಮಿತಿ ಇದರ ಕಾರ್ಯಕ್ರಮದ ಮುಖ್ಯ ಅಧಿಕಾರಿ NCERT ಹೊಸದೆಹಲಿ ಗಜಾನನ ಲೋಂಧೆಯವರು, ರಾಷ್ಟ್ರೀಯ ಶಿಕ್ಷಣ ನೀತಿ (NEP 2020)ಹಾಗೂ ಶಾಲಾ ಶಿಕ್ಷಣದ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (NCF-SE 2023)ಗಳಿಗೆ ಅನುಗುಣವಾಗಿ ಹೊಸ ಪೀಳಿಗೆಯ NCERT ಪಠ್ಯಪುಸ್ತಕಗಳನ್ನು ರೂಪಿಸುವಲ್ಲಿ ಇದುವರೆಗೆ ಕೈಗೊಂಡಿರುವ ವಿಸ್ತಾರವಾದ ಕಾರ್ಯಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು. ಪಠ್ಯಪುಸ್ತಕ ರಚನೆಯ ಪ್ರಮುಖಹಂತಗಳು, ಪಠ್ಯ ಬರವಣಿಗೆಯಲ್ಲಿನ ಸೂಕ್ಷ್ಮತೆಗಳು ಮತ್ತು ಬೋಧನಾ ಶಾಸ್ತ್ರದ ದೃಷ್ಟಿಕೋನಗಳು, ಹಾಗೆಯೇ ಪಠ್ಯಕ್ರಮದಲ್ಲಿನ ಪ್ರಮುಖರಚನಾತ್ಮಕ ಬದಲಾವಣೆಗಳ ಕುರಿತುಅವರು ವಿಸ್ತಾರವಾಗಿ ವಿವರಿಸಿದರು. ಇತ್ತೀಚೆಗೆ ಬಿಡುಗಡೆಯಾದ ಹೊಸ NCERT ಪಠ್ಯಪುಸ್ತಕಗಳಿಂದಲೇ ಪ್ರಾಯೋಗಿಕ ಉದಾಹರಣೆಗಳನ್ನು ನೀಡುತ್ತಾ, ತರಗತಿಯ ಕಲಿಕೆಯನ್ನು ಹೇಗೆ ಹೆಚ್ಚು ಆಕರ್ಷಕ, ಪರಿಕಲ್ಪನಾತ್ಮಕ ಮತ್ತು ಬಹುಶಿಸ್ತೀಯ (multidisciplinary) ಅನುಭವವನ್ನಾಗಿ ಪರಿವರ್ತಿಸಲಾಗುತ್ತಿದೆ ಎಂಬುದನ್ನು ಅವರು ಮನಮುಟ್ಟುವಂತೆ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯಗಾರದ ಅಧ್ಯಕ್ಷತೆ ವಹಿಸಿದ್ದ ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕಾರದ ಡಾ ಕೆ ಸಿ ನಾೈಕ್ ಅವರು ಆಗಮಿಸಿದ ಎಲ್ಲಾ ಶಿಕ್ಷಕರು ಈ ಕಾರ್ಯಗಾರದಿಂದ ಉತ್ತಮವಾದ ವಿಷಯವನ್ನು ಕಲಿಯುವಂತಾಗಲಿ. ಈ ಕಾರ್ಯಗಾರ ಯಶಸ್ವಿಯಾಗಲಿ ಮತ್ತು ಶಿಕ್ಷಕರಿಗೆ ಬೇಕಾದ ಸಕಲ ಸೌಲಭ್ಯಗಳನ್ನು ಒದಗಿಸಲು ಶಕ್ತಿ ವಿದ್ಯಾ ಸಂಸ್ಥೆ ಸದಾ ಸಿದ್ಧವಿರುತ್ತದೆ ಎಂದು ತಿಳಿಸಿದರು.
ವಿದ್ಯಾಭಾರತಿ ಪ್ರಾಂತಉಪಾಧ್ಯಕ್ಷರಾದ ವಸಂತ ಮಾಧವ್ ಅವರು ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ಶಿಕ್ಷಕರು ಬದಲಾವಣೆಯನ್ನು ತರಬೇಕು. ಬ್ರಿಟಿಷ್ ಮಾದರಿ ಶಿಕ್ಷಣವನ್ನು ಬದಲಾಯಿಸಿ ಭಾರತೀಯ ಶಿಕ್ಷಣ ಪದ್ದತಿಯನ್ನು ಬೆಳೆಸಬೇಕು. ರಾಷ್ಟ್ರಭಕ್ತ ಮಕ್ಕಳನ್ನು ತಯಾರು ಮಾಡಬೇಕು. ವ್ಯಕ್ತಿತ್ವ ವಿಕಾಸ ಎಂದರೆ ಪಂಚಕೋಶ ವಿಕಾಶ ಎಂದರ್ಥ. ಮಕ್ಕಳು ಜೀವನದ ಸವಾಲುಗಳನ್ನು ಎದುರಿಸುವಂತಾಗಬೇಕು. ಎಲ್ಲಾ ರೀತಿಯ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಮನೆಯಲ್ಲಿ ಕೌಶಲ್ಯಗಳು ಸಿಗದೆ ಇದ್ದಾಗ ಶಾಲೆಗಳಲ್ಲಿ ಮಕ್ಕಳು ಗುಂಪಾಗಿ ಎಲ್ಲಾ ಕೌಶಲ್ಯಗಳನ್ನು ಕಲಿಯುತ್ತಾರೆ. ಅನುಭವಾತ್ಮಕ ಶಿಕ್ಷಣ ಮೂಢಿಸುವಂತಹ ಗುರಿ ಶಿಕ್ಷಕರದ್ದಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿದ್ಯಾಭಾರತಿ ಉಚ್ಚ ಶಿಕ್ಷಣ ಸಂಸ್ಥಾನ ಕ್ಷೇತ್ರಿಯ ಸಂಯೋಜಕ್‍ರಾದ ಕೃಷ್ಣ ಪ್ರಸಾದ್ ಕೆ.ಎನ್., ವಿದ್ಯಾಭಾರತೀಯ ಪ್ರಾಂತಉಪಾಧ್ಯಕ್ಷರಾದ ವಸಂತ್ ಮಾಧವ್, ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ, ಶಕ್ತಿ ಪದವಿಪೂರ್ವಕಾಲೇಜಿನ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲೆ ಸುರೇಖಾ ಆರ್ ಭಟ್ ಅವರು ಸ್ವಾಗತಿಸಿದರು. ಶಿಕ್ಷಕಿ ಚೇತನ ಮತ್ತು ಭವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಸ್ಮಿಶ ಧನ್ಯವಾದ ಸಲ್ಲಿಸಿದರು.
