“ಫಿಲೋ ಕೆಸರ್ದ ಗೊಬ್ಬು”– ಮಣ್ಣಿನೊಂದಿಗೆ ವಿದ್ಯಾರ್ಥಿಗಳ ಅವಿನಾಭಾವ ಸಂಬಂಧ ಬೆಸೆಯುವ ವಿಶಿಷ್ಟ ಕಾರ್ಯಕ್ರಮ

ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರಿನ ಮಾನವಿಕ ವಿಭಾಗದ ವತಿಯಿಂದ ವಿದ್ಯಾರ್ಥಿಗಳಲ್ಲಿ ಕೃಷಿ ಪರಂಪರೆ, ಮಣ್ಣಿನೊಂದಿಗೆ ನಂಟು ಹಾಗೂ ಸಮುದಾಯದ ಒಗ್ಗಟ್ಟಿನ ಮಹತ್ವವನ್ನು ಮೂಡಿಸುವ ಉದ್ದೇಶದಿಂದ ‘ಫಿಲೋ ಕೆಸರ್ದ ಗೊಬ್ಬು’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಅಳಕೆಮಜಲಿನಲ್ಲಿ ಆಗಸ್ಟ್ 10ರಂದು ಆಯೋಜಿಸಲಾದ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ.ಡಾ. ಆಂಟನಿ ಪ್ರಕಾಶ್ ಮೊಂತೆರೊ ಅವರು ಮಾತನಾಡಿ, ಕೃಷಿ ಪರಂಪರೆಯನ್ನು ಉಳಿಸಿ ಬೆಳೆಸುವ ಅಗತ್ಯ, ಮಣ್ಣಿನೊಂದಿಗೆ ಮಾನವನಿಗಿರುವ ಅವಿನಾಭಾವ ಸಂಬಂಧ ಹಾಗೂ ಸಮುದಾಯದ ಬಾಂಧವ್ಯವನ್ನು ಗಟ್ಟಿಗೊಳಿಸುವಲ್ಲಿ ಇಂತಹ ಕಾರ್ಯಕ್ರಮಗಳ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರಗತಿಪರ ಕೃಷಿಕ ಚಿದಾನಂದ ಗೌಡ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಕೃಷಿ ಜೀವನದ ಅನುಭವವನ್ನು ನೇರವಾಗಿ ಪರಿಚಯಿಸುವ ಈ ಕಾರ್ಯಕ್ರಮದ ಮಹತ್ವವನ್ನು ಶ್ಲಾಘಿಸಿ, ಕಾರ್ಯಕ್ರಮದ ಆಯೋಜಕರಿಗೆ ಶುಭ ಹಾರೈಸಿದರು.

ಮಾನವಿಕ ವಿಭಾಗದ ಡೀನ್ ಹಾಗೂ ಶೈಕ್ಷಣಿಕ ರಿಜಿಸ್ಟ್ರಾರ್ ಡಾ. ನಾರ್ಬರ್ಟ್ ಮಸ್ಕರೇನಸ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಮಾನವಿಕ ವಿಭಾಗದ ಬೋಧಕ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವು ವೈಷ್ಣವಿ ಮತ್ತು ತಂಡದ ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾಯಿತು. ದ್ವಿತೀಯ ಬಿ.ಎ. ವಿದ್ಯಾರ್ಥಿ ಸಮರ್ಥ್ ಸ್ವಾಗತ, ತೃತೀಯ ಬಿ.ಎ. ವಿದ್ಯಾರ್ಥಿನಿ ಕೃತಿಕಾ ಕಾರ್ಯಕ್ರಮವನ್ನು ನಿರೂಪಿಸಿ ದ್ವಿತೀಯ ಬಿ.ಎ. ವಿದ್ಯಾರ್ಥಿನಿ ಕೃತಿ ವಂದನಾರ್ಪಣೆ ಸಲ್ಲಿಸಿದರು.

ವಿದ್ಯಾರ್ಥಿಗಳು ಕೆಸರಿನಲ್ಲಿ ಇಳಿದು ಕೃಷಿ ಚಟುವಟಿಕೆಗಳ ಅನುಭವವನ್ನು ಪಡೆದುಕೊಂಡಿದ್ದು, ಕಾರ್ಯಕ್ರಮವು ಮಣ್ಣಿನೊಂದಿಗೆ ಅವರ ನಂಟನ್ನು ಗಟ್ಟಿಗೊಳಿಸುವುದರ ಜೊತೆಗೆ ಕೃಷಿ ಸಂಸ್ಕೃತಿ ಮತ್ತು ಪರಂಪರೆಯ ಕುರಿತು ಅರಿವು ಮೂಡಿಸುವಲ್ಲಿ ಯಶಸ್ವಿಯಾಯಿತು.

Leave a Reply

Your email address will not be published. Required fields are marked *