ಮೂಡುಬಿದಿರೆ: ಸಮಾಜದಲ್ಲಿ ನ್ಯಾಯ, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಈ ಕರ್ತವ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ ನೆರವೇರಿಸಲು ಸಾಧ್ಯವಾಗುವ ವೃತ್ತಿಗಳಲ್ಲಿ ವಕೀಲ ವೃತ್ತಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ವಕೀಲರು ಕೇವಲ ನ್ಯಾಯಾಲಯಗಳಲ್ಲಿ ವಾದ ಮಂಡಿಸುವವರಷ್ಟೇ ಅಲ್ಲ; ಅವರು ಸಮಾಜದ ನ್ಯಾಯದ ಕಾವಲುಗಾರರು, ಹಕ್ಕುಗಳ ರಕ್ಷಕರು ಮತ್ತು ಜನ ಸೇವೆಯ ನಿಜವಾದ ಪ್ರತಿನಿಧಿಗಳು ಎಂದು ಕರ್ನಾಟಕ ಕೋರ್ಟ್ ನ ನ್ಯಾಯಮೂರ್ತಿ ಎಚ್. ಪಿ. ಸಂದೇಶ್ ನುಡಿದರು.





ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಕಾನೂನು ವಿದ್ಯಾರ್ಥಿಗಳನ್ನು ಸಾಮಾಜಿಕ ನ್ಯಾಯದ ಪರಿವರ್ತನೆಗೆ ಪ್ರೇರಕ ಶಕ್ತಿಯಾಗಿಸುವ ಉದ್ದೇಶದಿಂದ “ಸಾಮಾಜಿಕ ನ್ಯಾಯಕ್ಕಾಗಿ ಕಾನೂನು ವಿದ್ಯಾರ್ಥಿಗಳು” ಎಂಬ ವಿಷಯದ ಮೇಲೆ ನಡೆದ ದ್ವಿತೀಯ ವಲಯ ಕಾರ್ಯಾಗಾರವನ್ನು ಆಳ್ವಾಸ್‌ನ ಕೃಷಿಸಿರಿ ವೇದಿಕೆಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಕಾನೂನು ವಿದ್ಯಾರ್ಥಿಗಳು ಸಮಾಜದಲ್ಲಿ ನ್ಯಾಯ ಸ್ಥಾಪನೆಗೆ ಪ್ರೇರಕ ಶಕ್ತಿಯಾಗಬೇಕು ಎಂದು ಕರೆ ನೀಡಿದ ಅವರು, ಜೀವನದಲ್ಲಿ ಯಶಸ್ಸು ಸಾಧಿಸಲು ಛಲ ಅತ್ಯಂತ ಮುಖ್ಯ. ಕೆಲವರು ಕಾನೂನು ಪದವಿಯನ್ನು ಸ್ವತಃ ಆಯ್ಕೆ ಮಾಡದೇ, ಸಂದರ್ಭದ ಪರಿಣಾಮವಾಗಿ ಪ್ರವೇಶಾತಿ ಪಡೆದಿರಬಹುದು. ಚಾನ್ಸ್ನಿಂದ ಬಂದ ಲಾ ಕೋರ್ಸ್ ಅನ್ನು ಚಾಯ್ಸ್ ಆಗಿ ರೂಪಿಸಿಕೊಂಡು, ಅದನ್ನು ಜನಸೇವೆಯ ಮಾರ್ಗವನ್ನಾಗಿ ಮಾಡಿದರೆ, ನಮ್ಮ ಜೀವನಕ್ಕೂ ಸಮಾಜಕ್ಕೂ ಅರ್ಥಪೂರ್ಣವಾದ ಕೊಡುಗೆ ನೀಡಲು ಸಾಧ್ಯವಾಗುತ್ತದೆ.
ವಿದ್ಯಾರ್ಥಿಗಳು ಶಿಸ್ತು, ಶ್ರಮ, ಸಮಯಪ್ರಜ್ಞೆ, ಆತ್ಮವಿಶ್ವಾಸ ಮತ್ತು ನಿರ್ಭಯತೆ ಎಂಬ ಐದು ಮಹತ್ವದ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರಾಮಾಣಿಕತೆ ಇದ್ದಲ್ಲಿ ಧೈರ್ಯ ಸಹಜವಾಗಿ ಮೂಡುತ್ತದೆ.
ದೇಶವನ್ನು ಕಾಡುತ್ತಿರುವ ಜಾತಿ ವ್ಯವಸ್ಥೆ, ಅಪರಾಧ ಹಾಗೂ ಭ್ರಷ್ಟಾಚಾರವನ್ನು ನಿವಾರಿಸಲು ಕಾನೂನು ವೃತ್ತಿಯವರು ಮಹತ್ವದ ಪಾತ್ರ ವಹಿಸಬೇಕು. ನ್ಯಾಯದ ಮಾರ್ಗದಲ್ಲಿ ನಿಷ್ಠೆಯಿಂದ ನಡೆಯುವುದು ಪ್ರತಿಯೊಬ್ಬ ವಕೀಲನ ಧರ್ಮ. ಜನರ ನೋವನ್ನು ಅರ್ಥಮಾಡಿಕೊಂಡಾಗ ಮಾತ್ರ ಬ್ಲಾಕ್ ಕೋಟ್ ಧರಿಸಿರುವುದಕ್ಕೆ ಸಾರ್ಥಕತೆ ಲಭಿಸುತ್ತದೆ ಎಂದರು.
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ. ಜಯಕರ ಶೆಟ್ಟಿ ಎಂ ಮಾತನಾಡಿ, “ಕಾನೂನು ವೃತ್ತಿ ಒಂದು ಮಹತ್ವದ ಮತ್ತು ಗೌರವಾನ್ವಿತ ಸೇವಾ ಕ್ಷೇತ್ರವಾಗಿದೆ. ಇಂದಿನ ದಿನಗಳಲ್ಲಿ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಅಭ್ಯಾಸ ಮಾಡಿದವರೂ ಸಹ ಕಾನೂನು ಶಿಕ್ಷಣದತ್ತ ಮುಖ ಮಾಡುತ್ತಿದ್ದಾರೆ. ಬದುಕನ್ನು ಸಮರ್ಪಕವಾಗಿ ಸಾಗಿಸಲು ಕಾನೂನಿನ ಜ್ಞಾನ ಅತ್ಯಂತ ಅಗತ್ಯ. ಕಾನೂನು ಓದುವುದನ್ನು ಕೇವಲ ವೃತ್ತಿಯಾಗಿ ಪರಿಗಣಿಸದೆ, ಜೀವನಜ್ಞಾನದ ಭಾಗವಾಗಿ ಸ್ವೀಕರಿಸಬೇಕು” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಕಾನೂನು ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಸೈನಿಕರಂತೆ ಕಾರ್ಯನಿರ್ವಹಿಸಬೇಕಿದೆ. ಆದ್ದರಿಂದ ಕೇವಲ ಪಾಠ್ಯ ಜ್ಞಾನವಷ್ಟೇ ಅಲ್ಲದೆ, ಇತಿಹಾಸದ ಅರಿವು, ವಿಮರ್ಶಾತ್ಮಕ ಚಿಂತನೆ ಹಾಗೂ ಪೂರ್ವಪರ ವಿಚಾರಗಳ ತಿಳುವಳಿಕೆಯನ್ನು ಬೆಳೆಸಿಕೊಳ್ಳಬೇಕು. ಕಾನೂನು ಯಾವ ಸಂದರ್ಭಗಳಲ್ಲಿ, ಯಾವ ಸವಾಲುಗಳ ನಡುವೆ ರೂಪುಗೊಂಡಿತು ಎಂಬ ಅರಿವು ನಿಮ್ಮಲ್ಲಿ ಇದ್ದಾಗ ಮಾತ್ರ ನೀವು ಸಮರ್ಥ ಕಾನೂನು ವೃತ್ತಿಪರರಾಗಲು ಸಾಧ್ಯ ಎಂದರು. ಕಾನೂನು ಇಲ್ಲದೆ ಸಮಾಜದ ವ್ಯವಸ್ಥಿತ ಬದುಕು ಸಾಧ್ಯವಿಲ್ಲ. ಆದ್ದರಿಂದ ಎಲ್ಲಾ ಕ್ಷೇತ್ರಗಳಲ್ಲಿಯೂ ಜ್ಞಾನವನ್ನು ವಿಸ್ತರಿಸಿಕೊಂಡು, ಸಮಗ್ರ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವುದು ಅಗತ್ಯ ಎಂದು ಅವರು ಸಲಹೆ ನೀಡಿದರು.
ಇನ್ನೂ, “ಕೆಲವರಿಗೆ ಕಾನೂನು ಪದವಿ ಸ್ವಯಂ ಆಯ್ಕೆಯಾಗಿರದೇ, ಸಂದರ್ಭದ ಪರಿಣಾಮವಾಗಿ ಬಂದಿರಬಹುದು. ಆದರೆ ಆ ಮನೋಭಾವವನ್ನು ಬದಲಾಯಿಸಬೇಕು. ಏಕೆಂದರೆ ಕಾನೂನು ಕ್ಷೇತ್ರವು ಜನಸೇವೆಗೆ ಅತ್ಯುತ್ತಮ ವೇದಿಕೆ. ಸಮಾಜದಲ್ಲಿ ನೊಂದವರಿಗೆ ಧ್ವನಿಯಾಗಲು, ಅನ್ಯಾಯಕ್ಕೊಳಗಾದವರ ಪರವಾಗಿ ನಿಲ್ಲಲು ಈ ಕ್ಷೇತ್ರವು ಅಪಾರ ಅವಕಾಶಗಳನ್ನು ಒದಗಿಸುತ್ತದೆ ಎಂದರು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ. ಸಿ. ಬಸವರಾಜು, ಮೂಡುಬಿದಿರೆ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಮಧುಕರ್ ಪಿ. ಭಾಗವತ್, ಪ್ರಾಚರ‍್ಯ ಡಾ ಮಹಾಂತೇಶ್ ಜಿಎಸ್ ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಸವರಾಜ್ ಸ್ವಾಗತಿಸಿ, ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನಿಸಾ ವಂದಿಸಿ, ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಸದಸ್ಯ ಕಾರ್ಯದರ್ಶಿ, ಎಚ್. ಶಶಿಧರ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕ ವೇಣುಗೋಪಾಲ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ನಂತರ ನಡೆದ ತಾಂತ್ರಿಕ ಅಧಿವೇಶನಗಳಲ್ಲಿ “ಕಾನೂನು ಸೇವಾ ಪ್ರಾಧಿಕಾರ ಕಾಯ್ದೆ 1987”, “ಕಾನೂನು ಕಾಲೇಜುಗಳಲ್ಲಿ ಲೀಗಲ್ ಸರ್ವೀಸ್ ಕ್ಲಿನಿಕ್‌ಗಳು” ಹಾಗೂ “ಕಾನೂನು ಸೇವಾ ಶಿಬಿರಗಳ ಆಯೋಜನೆ” ಕುರಿತಂತೆ ತಜ್ಞರು ಉಪನ್ಯಾಸ ನೀಡಿದರು.
ಕರ್ನಾಟಕದ ವಿವಿಧ ಕಾನೂನು ಕಾಲೇಜುಗಳಿಂದ 700ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
