ಅತ್ತಾವರ ಗ್ರಾಮದ ಶಿವನಗರದಲ್ಲಿ ಮಳೆಹಾನಿ ಕಾಮಗಾರಿಗೆ ರೂ. 60 ಲಕ್ಷ ಅನುದಾನ – ಐವನ್ ಡಿʼಸೋಜಾ ಕಾಮಗಾರಿ ವೀಕ್ಷಣೆ

ಕರ್ನಾಟಕ ರಾಜ್ಯ ಸರ್ಕಾರವು ಮಳೆಹಾನಿಯಿಂದ ಹಾನಿಗೊಳಗಾದ ಕಾಮಗಾರಿಗಳ ದುರಸ್ತಿಗಾಗಿ ಸುಮಾರು ರೂ. 3 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಇದರ ಭಾಗವಾಗಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಅತ್ತಾವರ ಗ್ರಾಮದ ಶಿವನಗರದಲ್ಲಿ ರೂ. 60 ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾ ಅವರು ಸ್ಥಳೀಯ ಸಾರ್ವಜನಿಕರೊಂದಿಗೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಿವನಗರದ ಸಾರ್ವಜನಿಕ ತೋಡು ಹಾಗೂ ರಾಜಕಾಲುವೆಯಲ್ಲಿ ಮಳೆನೀರು ಮತ್ತು ಒಳಚರಂಡಿ ನೀರು ಸರಾಗವಾಗಿ ಹರಿಯದೆ ಉಂಟಾಗುತ್ತಿರುವ ಸಮಸ್ಯೆಯನ್ನು ಗಮನಿಸಿ, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಲಾಗಿತ್ತು.
ಮಳೆಗಾಲದಲ್ಲಿ ಸ್ಥಳೀಯ ನಿವಾಸಿಗಳು ಎದುರಿಸುತ್ತಿರುವ ತೊಂದರೆಗಳನ್ನು ನಿವಾರಿಸಲು ಹಾಗೂ ರಾಜಕಾಲುವೆ ಮತ್ತು ಒಳಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಅಲ್ಲದೆ, ಅತ್ತಾವರದ ಶಿವನಗರದ ಯುವಕರ ಸ್ಟೇಜ್‌ಗೆ ಶಾಸಕರ ನಿಧಿಯಿಂದ ರೂ. 5 ಲಕ್ಷ ಅನುದಾನವನ್ನು ಬಿಡುಗಡೆ ಮಾಡಿದ್ದು ಈಗಾಗಲೇ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ.

ಕಾಮಗಾರಿಯನ್ನು ಗುಣಮಟ್ಟದಿಂದ ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಐವನ್ ಡಿʼಸೋಜಾ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ವಾರ್ಡ್ ಅಧ್ಯಕ್ಷರುಗಳಾದ ಸದಾಶಿವ ಕುಲಾಲ್ ಹಾಗೂ ನರೇಶ್ ಶೆಟ್ಟಿ ಮಂಗಳಾದೇವಿ, ಬೂತ್ ಅಧ್ಯಕ್ಷರಾದ ಅಭಿಷೇಕ್, ಸ್ಥಳೀಯ ಕಾಂಗ್ರೆಸ್ ಮುಖಂಡರಾದ ದಿನೇಶ್ ಪಾಂಡೇಶ್ವರ, ನರೇಶ್, ಮೀನಾ, ಕಮಲ್ ಹಾಗೂ ರಾಕೇಶ್ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *