ಎಸ್.ಡಿ.ಎಂ. ಆರೋಹಂ: ರಾಷ್ಟ್ರಮಟ್ಟದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಉತ್ಸವ ಉದ್ಘಾಟನೆ

ಉಜಿರೆ: ವಿದ್ಯೆಯ ಜೊತೆಗೆ ಕ್ರೀಡೆಗಳು, ಯಕ್ಷಗಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ಮೊದಲಾದ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ವ್ಯಕ್ತಿತ್ವ ವಿಕಸನದೊಂದಿಗೆ ಮಾನಸಿಕ ಶಾಂತಿ, ತೃಪ್ತಿ ಮತ್ತು ಸಂತೋಷ ಸಿಗುತ್ತದೆ ಎಂದು ಬೆಂಗಳೂರು ನೆಲಮಂಗಲದಲ್ಲಿರುವ ಕ್ಷೇಮವನದ ಸಿ.ಇ.ಒ. ಶ್ರದ್ಧಾಅಮಿತ್ ಹೇಳಿದರು.

ಅವರು ಗುರುವಾರ ಉಜಿರೆಯಲ್ಲಿ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನಲ್ಲಿ ಇಂದ್ರಪ್ರಸ್ಥ ಸಭಾಂಗಣದಲ್ಲಿ ಎಸ್.ಡಿ.ಎಂ. ಆರೋಹಂ – ಎರಡು ದಿನಗಳ ರಾಷ್ಟ್ರಮಟ್ಟದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರ ದಕ್ಷ ನೇತೃತ್ವದಲ್ಲಿ ಎಲ್ಲಾ ವಿಭಾಗದವರು ಸಂಘಟಿತರಾಗಿ ಅತ್ಯಂತ ಅಚ್ಚುಕಟ್ಟಾಗಿ, ಶಿಸ್ತುಬದ್ಧವಾಗಿ ಉತ್ಸವವನ್ನು ಆಯೋಜಿಸಿರುವುದರ ಬಗ್ಯೆ ಅವರು ವಿಶೇಷ ಸಂತಸ ಮತ್ತು ಅಭಿನಂದನೆ ವ್ಯಕ್ತಪಡಿಸಿದರು. ಇದೊಂದು ಮಾದರಿ ಕಾರ್ಯಕ್ರಮವಾಗಿದ್ದು ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕ ಚಿಂತನೆ, ಸಂವಹನ ಕೌಶಲ, ಪರಸ್ಪರ ಪ್ರೀತಿ-ವಿಶ್ವಾಸ ಮತ್ತು ಗೌರವದೊಂದಿಗೆ ನಾಯಕತ್ವ ಮತ್ತು ಸಂಘಟನೆಯ ಸಾಮರ್ಥ್ಯ ವೃದ್ಧಿಯಾಗುತ್ತದೆ ಎಂದು ಹೇಳಿದರು.
ಮನುಷ್ಯರು ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವ ಬದಲು ನಮಗೆ ಬೇಕಾದಂತೆ ಹೊಂದಿಕೊಳ್ಳುವ ತಂತ್ರಜ್ಞಾನವನ್ನು ಬಳಕೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಶುಭಾಶಂಸನೆ ಮಾಡಿದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ಸುಪ್ತ ಪ್ರತಿಭೆ ಮತ್ತು ಕೌಶಲವಿದ್ದು, ಪಠ್ಯೇತರ ಚಟುವಟಿಕೆಗಳು ಧೈರ್ಯ ಮತ್ತು ಆತ್ಮವಿಶ್ವಾಸದೊಂದಿಗೆ ಸಾರ್ಥಕ ಬದುಕಿಗೆ ಬೇಕಾದ ಜೀವನ ಶಿಕ್ಷಣ ನೀಡುತ್ತವೆ ಎಂದು ಹೇಳಿದರು.
ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ಅಧ್ಯಕ್ಷತೆ ವಹಿಸಿದರು.
ಉಪಪ್ರಾಂಶುಪಾಲರಾದ ನಂದಕುಮಾರಿ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಉತ್ಸವದ ಸಂಘಟಕ ಗಣೇಶ ನಾಯಕ್ ಉಪಸ್ಥಿತರಿದ್ದರು.
ಡಾ. ದಿವಾಕರ ಕೆ. ಕಾರ್ಯಕ್ರಮ ನಿರ್ವಹಿಸಿದರು.
ರಾಜ್ಯದ 17 ಪದವಿ ಕಾಲೇಜುಗಳು ಹಾಗೂ 20 ಪದವಿಪೂರ್ವ ಕಾಲೇಜುಗಳಿಂದ ಒಂದು ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *