ಸೆ. 27 ರಂದು ಪ್ರೊ. ಅಮೃತ ಸೋಮೇಶ್ವರ ನೆನಪಿನಲ್ಲಿ ರಾಜ್ಯಮಟ್ಟದ ‘ಅಮೃತ ಮಂಥನ’ ಕಾರ್ಯಕ್ರಮ

ಮಂಗಳೂರು: ಬಹುಶ್ರುತ ವಿದ್ವಾಂಸ, ಸಾರಸ್ವತ ಲೋಕದ ಅಚ್ಚಳಿಯದ ಮೇರು ವ್ಯಕ್ತಿತ್ವ ಪ್ರೊ. ಅಮೃತ ಸೋಮೇಶ್ವರ ಅವರ ಕುರಿತು ಒಂದು ದಿನದ ರಾಜ್ಯಮಟ್ಟದ ‘ಅಮೃತ ಮಂಥನ’ ಕಾರ್ಯಕ್ರಮವನ್ನು ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಸಂತ ಆಲೋಶಿಯಸ್ ವಿಶ್ವವಿದ್ಯಾಲಯ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ. ಕಲಾಗಂಗೋತ್ರಿ, ರಂಗಸಂಗಾತಿ, ಬಹುರೂಪಿ ಫೌಂಡೇಷನ್ ಹಾಗೂ ನಿಟ್ಟೆ ವಿವಿಯ ತುಳು ಅಧ್ಯಯನ ಕೇಂದ್ರ ಕಾರ್ಯಕ್ರಮಕ್ಕೆ ಸಹಕಾರ ನೀಡಿವೆ.

ಸೆಪ್ಟೆಂಬರ್ 27 ರಂದು ಭಾನುವಾರ ಸಂತ ಆಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಜರಗುವ ಈ ಕಾರ್ಯಕ್ರಮವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್.ಎನ್. ಮುಕುಂದರಾಜ್ ಅವರು ಉದ್ಘಾಟಿಸಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅವರು ಪ್ರಧಾನ ಭಾಷಣವನ್ನು ಮಾಡಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ ಕಾಪಿಕಾಡ್ ಹಾಗೂ ಸಂತ ಆಲೋಶಿಯಸ್ ವಿಶ್ವವಿದ್ಯಾಲಯದ ಕುಲಪತಿಗಳಾದ ರೆ. ಡಾ. ಪ್ರವೀಣ್ ಮಾರ್ಟಿಸ್ ಎಸ್. ಜೆ. ಅವರು ಅಮೃತ ನಮನವನ್ನು ಸಲ್ಲಿಸಲಿದ್ದಾರೆ. ಹಿರಿಯ ವಿದ್ವಾಂಸ ಪ್ರೊ ಬಿ.ಎ. ವಿವೇಕ ರೈ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರೊ ಅಮೃತ ಸೋಮೇಶ್ವರ ಕುಟುಂಬಸ್ಥರ ಪರವಾಗಿ ಡಾ. ಚೇತನ ಸೋಮೇಶ್ವರ ಹಾಗೂ ಜೀವನ್ ಸೋಮೇಶ್ವರ ಅವರು ತಿಳಿಸಿದ್ದಾರೆ.

ಅಮೃತರ ಕುರಿತ ವಿಚಾರ ಸಂಕಿರಣದಲ್ಲಿ ಡಾ ಸಾಯಿಗೀತಾ, ಸುನಿಲ್ ಪಲ್ಲಮಜಲು, ಡಾ ಕೆ. ಮಹಾಲಿಂಗ ಅವರು ಪ್ರಬಂಧಗಳನ್ನು ಮಂಡಿಸಲಿದ್ದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ. ಹೆಚ್. ಜಯಪ್ರಕಾಶ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಅಮೃತರ ಜೊತೆಗಿನ ಒಡನಾಟವನ್ನು ನೆನಪಿಸಿಕೊಳ್ಳುವ ಸಂವಾದದಲ್ಲಿ ಡಾ. ನಾ. ದಾಮೋದರ ಶೆಟ್ಟಿ, ಚಂದ್ರಕಲಾ ನಂದಾವರ, ಡಾ. ನರೇಂದ್ರ ರೈ ದೇರ್ಲ, ಬೇ.ಸೀ ಗೋಪಾಲಕೃಷ್ಣ ಅವರು ಭಾಗವಹಿಸಲಿದ್ದಾರೆ.

‘ಜರ್ನಿ ಥಿಯೇಟರ್’ ತಂಡ ಅಮೃತ ಸೋಮೇಶ್ವರ ಅವರು ರಚಿಸಿದ ತುಳು ಹಾಗೂ ಕನ್ನಡ ಭಾಷೆಯಲ್ಲಿನ ರಂಗ ಹಾಗೂ ಭಾವಗೀತೆಗಳ ಗಾಯನ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಸಮಾರೋಪ ಭಾಷಣವನ್ನು ಹಿರಿಯ ಜಾನಪದ ವಿದ್ವಾಂಸ ಡಾ. ಕೆ. ಚಿನ್ನಪ್ಪ ಗೌಡ ಆವರು ಮಾಡಲಿದ್ದು. ಹಿರಿಯ ವಿದ್ವಾಂಸರಾದ ಡಾ. ತಾಳ್ತಜೆ ವಸಂತಕುಮಾರ್ ಅವರು ಅಧ್ಯಕ್ಷತೆ ವಹಿಸುತ್ತಾರೆ.

Leave a Reply

Your email address will not be published. Required fields are marked *