ಮೂಡುಬಿದಿರೆ: ಸ್ವಯಂ ಅರಿವು, ಸ್ಪಷ್ಟ ಗುರಿ ಸಾಧನೆಗೆ ಬಲವಾದ ಅಡಿಪಾಯ – ಡಾ. ಕುರಿಯನ್

ಮೂಡುಬಿದಿರೆ: ಆಳ್ವಾಸ್(ಸ್ವಾಯತ್ತ) ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮೊದಲ ವರ್ಷದ ಎಂಸಿಎ ವಿದ್ಯಾರ್ಥಿಗಳಿಗೆ ಓರಿಯೆಂಟೇಷನ್ ಕಾರ್ಯಕ್ರಮವು ಗುರುವಾರ ಕಾಲೇಜಿನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಗುರಿ ಸಾಧನೆಯ ಬಗೆಗಿನ ದೃಢ ಸಂಕಲ್ಪಕ್ಕೆ ಸೂಕ್ತ ಕಾರ್ಯಯೋಜನೆ ಜೊತೆಯಾದಾಗ ಯಶಸ್ಸು ಸಾಧ್ಯ. ವಿದ್ಯಾರ್ಥಿಗಳು ತಮ್ಮ ಸಾಮಥ್ರ್ಯ, ಆಸಕ್ತಿ ಹಾಗೂ ದೌರ್ಬಲ್ಯಗಳನ್ನು ಅರಿತುಕೊಂಡು ವೈಯಕ್ತಿಕ ಬೆಳವಣಿಗೆಗೆ ಆದ್ಯತೆ ನೀಡಬೇಕು. ಸ್ಪಷ್ಟ ಗುರಿಗಳನ್ನು ರೂಪಿಸಿಕೊಂಡು ಅವುಗಳ ಸಾಧನೆಗೆ ನಿರಂತರ ಪ್ರಯತ್ನಿಸಬೇಕು ಎಂದರು.
ಕಂಪ್ಯೂಟರ್ ಅಪ್ಲಿಕೇಶನ್ಸ್ ಕ್ಷೇತ್ರವು ನಿರಂತರವಾಗಿ ಬದಲಾಗುತ್ತಿರುವ ತಂತ್ರಜ್ಞಾನಗಳೊಂದಿಗೆ ಹೆಜ್ಜೆ ಹಾಕುವ ಕ್ಷೇತ್ರವಾಗಿದೆ. ಎಂಸಿಎ ವಿದ್ಯಾರ್ಥಿಗಳು ಪಠ್ಯಕ್ರಮದ ಜ್ಞಾನಕ್ಕೆ ಮಾತ್ರ ಸೀಮಿತವಾಗದೆ, ಪ್ರಾಯೋಗಿಕ ಕೌಶಲ, ಸಮಸ್ಯೆ ಪರಿಹಾರ ಸಾಮಥ್ರ್ಯ, ಸೃಜನಶೀಲತೆ ಮತ್ತು ಹೊಸ ತಂತ್ರಜ್ಞಾನಗಳನ್ನು ಕಲಿಯುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.

ಕೃತಕ ಬುದ್ಧಿಮತ್ತೆ, ಡೇಟಾ ಅನಾಲಿಟಿಕ್ಸ್, ಸೈಬರ್ ಭದ್ರತೆ ಹಾಗೂ ಸಾಫ್ಟ್ ವೇರ್ ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ಅಪಾರ ಅವಕಾಶಗಳಿದ್ದು, ವಿದ್ಯಾರ್ಥಿಗಳು ತಮ್ಮ ಆಸಕ್ತಿ ಮತ್ತು ಸಾಮಥ್ರ್ಯಕ್ಕೆ ಅನುಗುಣವಾಗಿ ವಿಶೇಷ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ತಂತ್ರಜ್ಞಾನವನ್ನು ಕೇವಲ ಉದ್ಯೋಗಕ್ಕಾಗಿ ಕಲಿಯದೆ, ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಧನವಾಗಿ ಬಳಸುವ ದೃಷ್ಟಿಕೋನವನ್ನು ಹೊಂದಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಂಸಿಎ ಸಂಯೋಜಕ ಡಾ. ಬಿಕ್ರಮ್‍ಜಿತ್ ಹಾಗೂ ವಿಭಾಗದ ಮುಖ್ಯಸ್ಥ ರಮೇಶ್ ಉಪಸ್ಥಿತರಿದ್ದರು. ವಿನಿತಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *