ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಂಗಸಂಸ್ಥೆಯಾದ ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆ್ಯಂಡ್ ರಿಸರ್ಚ್ ಸೆಂಟರ್ ಗೆ ತುಳು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯ ಕೋಟಾದಡಿ ಅನುಮೋದನೆ ದೊರೆತಿದೆ. 2026–27ನೇ ಶೈಕ್ಷಣಿಕ ವರ್ಷಕ್ಕೆ ಒಟ್ಟು 150 ಎಮ್ಬಿಬಿಎಸ್ ಸೀಟುಗಳಿಗೆ ಮಂಜೂರಾತಿ ದೊರೆತಿದ್ದು, ಈ ಪೈಕಿ 54 ಸೀಟುಗಳು ತುಳು ಭಾಷಿಕ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ.

ತುಳು ಸಮುದಾಯದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣದಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ಬೆಳವಣಿಗೆ ಮಹತ್ವ ಪಡೆದಿದೆ. ವಿಶೇಷವಾಗಿ ಕರಾವಳಿ ಕರ್ನಾಟಕದ ತುಳು ಭಾಷಿಕ ವೈದ್ಯಕೀಯ ಶಿಕ್ಷಣದ ಆಕಾಂಕ್ಷಿಗಳಿಗೆ ತಮ್ಮದೇ ನೆಲದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಇದು ಉತ್ತಮ ಅವಕಾಶವಾಗಲಿದೆ.
ವೈದ್ಯಕೀಯ ಶಿಕ್ಷಣದ ಗುಣಮಟ್ಟದೊಂದಿಗೆ ಪ್ರಾಯೋಗಿಕ ಹಾಗೂ ಕ್ಲಿನಿಕಲ್ ತರಬೇತಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನೂ ಸಂಸ್ಥೆ ಹೊಂದಿದೆ. ಆಳ್ವಾಸ್ ವೈದ್ಯಕೀಯ ವ್ಯವಸ್ಥೆಯಡಿ 650 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದ್ದು, ಎಮ್ಬಿಬಿಎಸ್ ವಿದ್ಯಾರ್ಥಿಗಳಿಗೆ ವಿವಿಧ ವೈದ್ಯಕೀಯ ವಿಭಾಗಗಳಲ್ಲಿ ಪ್ರಾಯೋಗಿಕ ಅನುಭವ ಹಾಗೂ ಕ್ಲಿನಿಕಲ್ ತರಬೇತಿ ಪಡೆಯಲು ಇದು ನೆರವಾಗಲಿದೆ. ವಿದ್ಯಾರ್ಥಿಗಳ ವಸತಿ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಬಾಲಕರು ಮತ್ತು ಬಾಲಕಿಯರಿಗೆ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಆಕಾಂಕ್ಷಿಗಳಿಗೆ ಅವಕಾಶ ವೈದ್ಯಕೀಯ ಶಿಕ್ಷಣದ ಕನಸು ಹೊಂದಿರುವ ತುಳು ಭಾಷಿಕ ಅಲ್ಪಸಂಖ್ಯಾತ ಸಮುದಾಯದ ಅರ್ಹ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ. ಪ್ರವೇಶಕ್ಕೆ ಸಂಬಂಧಿಸಿದ ಅರ್ಹತೆ, ಅಗತ್ಯ ದಾಖಲೆಗಳು ಹಾಗೂ ಪ್ರವೇಶ ಪ್ರಕ್ರಿಯೆಯ ಕುರಿತು ಅಭ್ಯರ್ಥಿಗಳು ಅಧಿಕೃತ ಮಾಹಿತಿಯನ್ನು ಪರಿಶೀಲಿಸಿ, ನಿಗದಿತ ನಿಯಮಾನುಸಾರ ಅರ್ಜಿ ಸಲ್ಲಿಸಬಹುದಾಗಿದೆ.
