
ಮಾಸ್ಟರ್….. ✍️Naveen Habib
ನನ್ನ ಮಾತುಗಳಲ್ಲಿದೆ ಒಂದು ಸುಂದರವಾದ ಮುಖದ ವರ್ಣನೆ ಭರಿತ ಕವಿತೆ. ಆ ಕವಿತೆ ಆರಂಭವಾಗುವುದು ನನ್ನರಸಿಯ ಮುದ್ದಾದ ನಗುಭರಿತ ಮುಖದಿಂದ, ಅಷ್ಟು ಅದ್ಭುತ ನಗು ನನ್ನ ಕವಿತೆ.
ನನ್ನ ಸ್ನೇಹಿತ ಕೇಳಿದ ಗೆಳೆಯಾ ನಿನ್ನರಸಿ ಹೇಗಿರಬೇಕೆಂದು,,? ನಾ ತಡಮಾಡದೆ ಹೇಳಿದೆ,
ನನ್ನರಸಿ ಹೇಗಿರಬೇಕೆಂದರೆ, ಅವಳ ಮುದ್ದಾದ ನಗು ನನ್ನ ಜೀವನದ ಎಲ್ಲಾ ನೋವುಗಳನ್ನು ಒಂದೇ ಕ್ಷಣದಲ್ಲಿ ಮರೆಸುವಂತಹ, ವಾಸಿಮಾಡುವಂತಹ ಅರಸಿಯಾಗಬೇಕು.

ಅವಳ ಉದ್ದನೆಯ ರೇಷ್ಮೆಯಂತಹ ಸಮುದ್ರದ ಅಲೆಗಳಂತಿರುವ ಕೂದಲುಗಳು ಅದ್ಭುತ. ಅವಳ ಆ ಕೇಶಗಳ ಜೊತೆ ಸದಾ ಆಟ ಆಡುವ ಗಾಳಿಯು ಸಹ, ಅವಳು ತನ್ನ ಕೇಶಗಳನ್ನು ಕಟ್ಟಿರುವ ಕಾರಣ, ನನ್ನರಸಿಯ ಮೇಲೆ ಬೇಸರಮಾಡಿಕೊಂಡಿದೆ.
ಸದಾ ನನ್ನನ್ನೇ ಹುಡುಕುವ ಮತ್ತು ನೋಡುವ ಆ ಸುಂದರ ಕಮಲದಂತಹ ಅವಳ ಎರಡು ಕಣ್ಣುಗಳು, ಸದಾ ನನ್ನ ತರ್ಲೆ ಮಾತುಗಳನ್ನು ಹಾಗೂ ಕಾಳಜಿ ಭರಿತ ಕೋಪದ ಮಾತುಗಳನ್ನು ಸಮಾಧಾನದಿಂದ ಕೇಳುವ ಅವಳ ಶಂಖದಂತಹ ಕಿವಿಗಳು ಅದ್ಭುತ.
ಸದಾ ನನ್ನನ್ನು ಹಾಗೂ ನನ್ನ ಕುಟುಂಬವನ್ನು ಪ್ರೀತಿಪೂರ್ವಕವಾಗಿ, ಕಾಳಜಿಭರಿತವಾಗಿ ನೋಡಿಕೊಳ್ಳುವ ನಿಷ್ಕಲ್ಮಶ ಮನಸ್ಸು ಅವಳದು.
ನಾ ಏನನ್ನು ಹೇಳದೆಯೇ ನನ್ನ ಮನಸಿನ ಮಾತನ್ನು ಕೇಳಿ, ಅರ್ಥಮಾಡಿಕೊಂಡು ಸ್ಪಂದಿಸುವ ಮುಗ್ಧ ಮನಸ್ಸು ಅವಳದು.
ಆ ಮನಸ್ಸಿನ ಎಲ್ಲಾ ನೋವುಗಳನ್ನು ಕೇಳುತ್ತಾ, ಅದನ್ನು ಮರೆಸಿ ಆಸರೆಯಾಗುವ ಜವಾಬ್ದಾರಿ ನನ್ನದು.
ಅವಳ ಕೋಪ, ಹಠ, ಬೇಸರ ಎಲ್ಲವೂ ಕೇವಲ ನನ್ನ ಮುಂದೆ ತೋರುವ ಕರ್ತವ್ಯ ಅವಳದು. ಆ ಕ್ಷಣ ಅವಳನ್ನು ಮನ್ನಿಸಿ ಮುದ್ದಿಸಿ, ಅವಳ ಹಠ ಕೋಪ ಬೇಸರ ಕಡಿಮೆ ಮಾಡಿ ಅವಳನ್ನು ರಾಣಿಯಂತೆ ನೋಡಿಕೊಳ್ಳುವ ಕರ್ತವ್ಯ ನನ್ನದು.
ನನಗೆ ಅವಳ ಮೇಲಿನ ಸೌಂದರ್ಯ ನೋಡಿ ಪ್ರೀತಿಯಾಗುವುದಿಲ್ಲ, ಬದಲಾಗಿ ಅವಳ ಮುಗ್ಧ ಸುಂದರ ನಿಷ್ಕಲ್ಮಶ ಮನಸ್ಸು ನೋಡಿ ಪ್ರೀತಿಯಾಗುತ್ತದೆ. ನನ್ನ ಮತ್ತು ಅವಳ ಸಂಬಂಧ ಮನಸ್ಸಿನ ಭಾವನೆಗಳ ಸಂಬಂಧ.
ಇನ್ನೇನು ಬರೆಯಲಿ ಓ ನನ್ನ ಹೃದಯದರಸಿ,
ನಿನ್ನ ವರ್ಣನೆಯನ್ನು ಪ್ರತಿದಿನ ಯೋಚನೆ ಮಾಡುತ್ತೇನೆ ಜಗತ್ತಿನ ಎಲ್ಲಾ ಹಾಳೆಗಳ ಮೇಲೆ ನಿನ್ನ ಕುರಿತು ವರ್ಣನೆ ಮಾಡಬೇಕೆಂದು, ಆದರೆ ನಿನ್ನ ಸುಂದರ ಮುಖದ ಮುಗ್ಧತೆಯನ್ನು ನೋಡಿ ಶಬ್ದಗಳು ಕಡಿಮೆ ಬೀಳುತ್ತಿವೆ.
“ಎಂದು ಭೇಟಿಯಾಗುವೆ” ನನ್ನ ಹೃದಯದರಸಿ,
ನಾ ನಿನ್ನ ಬರುವಿಕೆಗಾಗಿ ಪ್ರತಿಕ್ಷಣ, ಪ್ರತಿದಿನ, ಕಾಯುತ್ತಿರುವೆ…
ಎಂದು ನಿನ್ನ ಭೇಟಿ…..
