
ನವೀನ್ ಮಾಸ್ಟರ್…. ✍️
ಬೆಳಕಿನ ಸ್ಪರ್ಶವಿಲ್ಲದೆ ಮುಂಜಾನೆಯಿಲ್ಲ,
ಮಣ್ಣಿನ ಗರ್ಭವಿಲ್ಲದೆ ಹೂವಿನ ನಗುವಿಲ್ಲ;
ಈ ಸೃಷ್ಟಿಯ ಮೂಲದ ಮಹಾ ಸ್ಪಂದನ ನೀನು,
ಅಂಬರದ ಕರುಳಿನಲಿ ಅಡಗಿದ ಬಂಧನ ನೀನು!
ಅಬಲೆ ಎಂದವರ ಮುಂದೆ ದುರ್ಗೆಯಾಗಿ ನಿಲ್ಲುವೆ,
ಕಷ್ಟದ ಕಡಲನುಂಟಾಗಿ ಧೈರ್ಯದಿ ಗೆಲ್ಲುವೆ;
ನಿನ್ನ ಉದರದಿ ಜಗವೆಲ್ಲವೂ ಉಸಿರನು ಪಡೆಯುವುದು,
ನಿನ್ನಿಂದಲೇ ಈ ಧರೆಗೆ ಅಸ್ತಿತ್ವ ಮೂಡುವುದು.
ನಗುತಲೇ ಬದುಕಿನ ಭಾರವ ಹೊತ್ತು ಸಾಗುವೆ,
ಕತ್ತಲೆಯ ಕೋಣೆಯೊಳು ಸೂರ್ಯನ ತಂದು ಬಿಡುವೆ;
ಹೆಣ್ಣೆಂದರೆ ಕೇವಲ ಒಂಟಿ ಜೀವವಲ್ಲ,
ಬ್ರಹ್ಮಾಂಡವನ್ನೇ ಹೆಗಲಮೇಲೆ ಹೊತ್ತ ಅದ್ಭುತ ಶಕ್ತಿ ಅದು!

ಕಣ್ಣೀರು ಬಂದಾಗ ಅಳುವುದರಲ್ಲಿ ಯಾವ ಕಂದಮ್ಮತನವೂ ಇಲ್ಲ; ಅದೇ ಕಣ್ಣೀರನ್ನು ಒರೆಸಿಕೊಂಡು ಮತ್ತೆ ನಗುವಾಗ ಮೂಡುವ ಆ ಧೈರ್ಯವೇ ಹೆಣ್ಣಿನ ಅತಿ ದೊಡ್ಡ ಸೌಂದರ್ಯ.
ಪ್ರತಿಯೊಬ್ಬರ ಜೀವನದಲ್ಲೂ ಒಂಟಿತನದ ಕ್ಷಣಗಳು ಬಂದೇ ಬರುತ್ತವೆ. ಆ ಸಮಯದಲ್ಲಿ ಅಳುವುದಕ್ಕಿಂತ, ಆ ಮೌನದಲ್ಲೇ ನಿನ್ನ ಶಕ್ತಿಯನ್ನು ಹುಡುಕಿಕೋ; ಯಾಕೆಂದರೆ ನಿನ್ನ ಬದುಕಿನ ನಿಜವಾದ ನಾಯಕಿ ನೀನೇ.
ಮತ್ತೊಬ್ಬರ ಖುಷಿಗಾಗಿ ತನ್ನ ಸಂತೋಷವನ್ನು ತ್ಯಾಗ ಮಾಡುವುದೇ ಹೆಣ್ಣಿನ ಗುಣ ಎನ್ನುತ್ತಾರೆ, ಆದರೆ ಮೊದಲು ನಿನ್ನನ್ನು ನೀನು ಖುಷಿಯಾಗಿಟ್ಟುಕೋ; ಆಗ ಮಾತ್ರ ನಿನ್ನ ಸುತ್ತಲಿನ ಪ್ರಪಂಚ ನಳನಳಿಸುತ್ತದೆ.
ಎಲ್ಲರಿಗಾಗಿ ಬದುಕುವುದು ಒಳ್ಳೆಯದೇ, ಆದರೆ ನಿಮಗಾಗಿ ನೀವು ಸ್ವಲ್ಪ ಸಮಯ ಮೀಸಲಿಡಿ. ನಿಮ್ಮ ಕನಸುಗಳಿಗೆ ರೆಕ್ಕೆ ಕಟ್ಟುವುದು ಸ್ವಾರ್ಥವಲ್ಲ, ಅದು ನಿಮ್ಮ ಮೇಲಿರುವ ಪ್ರೀತಿ.
ಬದುಕು ನೀಡುವ ಪ್ರತಿ ಸೋಲನ್ನೂ ಮೆಟ್ಟಿ ನಿಂತು, ಯಾರ ಸಹಾಯವೂ ಇಲ್ಲದೆ ತನ್ನ ಕನಸುಗಳ ಸಾಮ್ರಾಜ್ಯವನ್ನು ತಾನೇ ಕಟ್ಟಿಕೊಳ್ಳುವ ಗಟ್ಟಿಗಿತಿ ನೀನು; ಯಾರ ದಯೆಗೂ ಕಾಯಬೇಡ, ನಿನ್ನ ಹೆಜ್ಜೆಗಳೇ ನಿನ್ನ ದಾರಿ…
ಎಲ್ಲರಿಗೂ ಆಸರೆಯಾಗಿ ನಿಲ್ಲುವ ಅಪ್ರತಿಮ ಶಕ್ತಿ ಹಾಗೂ ಸ್ಫೂರ್ತಿಯ ಸಂಕೇತವಾಗಿರುವ ಹೆಣ್ಣು,ಜಗಕೆ ಸ್ಪೂರ್ತಿಯಾಗಿ ನಿಂತು ತನ್ನನ್ನೇ ತಾನು ಮರೆತಳು!
ನಿಮ್ಮ ಅನಿಸಿಕೆ ಹಂಚಿಕೊಳ್ಳಿ ಪ್ರೋತ್ಸಾಹಿಸಿ..
