ಯುವಶಕ್ತಿ, ತಂತ್ರಜ್ಞಾನ ಮತ್ತು ಸೇವಾ ಮನೋಭಾವ ದೇಶದ ಭವಿಷ್ಯ ರೂಪಿಸಲಿ: ವಿವೇಕ ಆಳ್ವ

ಮೂಡುಬಿದಿರೆ: ಯುವಕರಲ್ಲಿರುವ ಶಕ್ತಿ, ಆತ್ಮವಿಶ್ವಾಸ ಹಾಗೂ ಸೃಜನಶೀಲತೆಯನ್ನು ಸಮಾಜ ಮತ್ತು ದೇಶದ ಅಭಿವೃದ್ಧಿಗೆ ಸದುಪಯೋಗಪಡಿಸಿಕೊಳ್ಳುವ ಅಗತ್ಯವಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಸಾಂಸ್ಕೃತಿಕ ವಿನಿಮಯ ವಿಭಾಗದ ರಾಷ್ಟ್ರೀಯ ಉಪ ಆಯುಕ್ತ ವಿವೇಕ ಆಳ್ವ ಹೇಳಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಅ.2ರಿಂದ 6ರವರೆಗೆ ಆಯೋಜಿಸಿರುವ ಎರಡನೇ ವರ್ಷದ ರಾಷ್ಟ್ರೀಯ ಮಟ್ಟದ ರೋಬೋಟಿಕ್ಸ್, ಕೃತಕ ಬುದ್ಧಿಮತ್ತೆ (ಎಐ), ಯುವ ಉದ್ಯಮಶೀಲತೆ ಹಾಗೂ ಸ್ಟೆಮ್ ತರಬೇತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಹಾತ್ಮ ಗಾಂಧೀಜಿಯವರ ಚಿಂತನೆಗಳು ಇಂದಿಗೂ ಜಗತ್ತಿನಾದ್ಯಂತ ಗೌರವಿಸಲ್ಪಡುತ್ತವೆ. ಅಂತಹ ಮಹನೀಯರನ್ನು ಸ್ಮರಿಸುವ ದಿನದಂದೇ ಯುವಕರಿಗಾಗಿ ಇಂತಹ ಕಾರ್ಯಾಗಾರ ಆರಂಭವಾಗುತ್ತಿರುವುದು ಅರ್ಥಪೂರ್ಣವಾಗಿದೆ. ಯುವಜನತೆಯಲ್ಲಿ ಅಪಾರ ಶಕ್ತಿ, ಆತ್ಮವಿಶ್ವಾಸ ಹಾಗೂ ಸೃಜನಶೀಲತೆ ಇದೆ. ಆದರೆ ಅದಕ್ಕೆ ಸರಿಯಾದ ನಿರ್ದೇಶನ ದೊರೆಯಬೇಕು. ಸ್ಕೌಟಿಂಗ್ ಜೀವನದಲ್ಲಿ ಉತ್ತಮ ಮೌಲ್ಯಗಳು ಮತ್ತು ಸೇವಾ ಮನೋಭಾವವನ್ನು ಬೆಳೆಸುವ ಸಾಮಥ್ರ್ಯ ಹೊಂದಿದೆ. ನಮ್ಮ ಜೀವನದಲ್ಲಿ ದೊರೆಯುವ ಕಲಿಕೆಯ ಬಹುಪಾಲು ಸ್ವಾನುಭವದಿಂದಲೇ ಬರುತ್ತದೆ. ಇಂದು ಇಲ್ಲಿ ಕಲಿಯುವ ವಿಷಯಗಳು ಕೇವಲ ಕಾರ್ಯಾಗಾರದ ಅವಧಿಗೆ ಸೀಮಿತವಾಗದೆ, ಮುಂದಿನ ಜೀವನದಲ್ಲಿಯೂ ನಿಮ್ಮೊಂದಿಗೆ ಉಳಿಯಬೇಕು ಎಂದರು.

ಕಾರ್ಯಾಗಾರದಲ್ಲಿ ಮಾತನಾಡಿದ ಅಪ್ಲೈಡ್ ಸಿಸ್ಟಮ್ಸ್ ನ ಉತ್ಪನ್ನ ವಿತರಣೆ ಮತ್ತು ಸೇವೆಗಳ ಉಪಾಧ್ಯಕ್ಷ ವೆಂಕಟೇಶ್ ಸಂಗನಾಳ್, ಅಗತ್ಯವಿರುವವರಿಗೆ ನೆರವಾಗುವುದು, ಸಮಾಜಕ್ಕೆ ಸೇವೆ ಸಲ್ಲಿಸುವುದು ಹಾಗೂ ಪರಿಸರವನ್ನು ಸಂರಕ್ಷಿಸುವುದು ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿಯ ಪ್ರಮುಖ ಆಶಯಗಳಾಗಿವೆ. ದೇಶಸೇವೆಯನ್ನು ದೊಡ್ಡ ಮಟ್ಟದಲ್ಲಿ ಮಾತ್ರವಲ್ಲದೆ, ತಾವು ಇರುವ ಕ್ಷೇತ್ರದಲ್ಲಿಯೇ ಹೇಗೆ ಪರಿಣಾಮಕಾರಿಯಾಗಿ ಮಾಡಬಹುದು ಎಂಬುದನ್ನು ಯುವಕರು ಕಲಿಯಬೇಕು ಎಂದು ಹೇಳಿದರು. ಕೌಶಲ್ಯವೇ ಹೊಸ ತೈಲ ವಾಗಿದ್ದು, ಬದಲಾಗುತ್ತಿರುವ ಜಗತ್ತಿನಲ್ಲಿ ಯುವಕರು ನಿರಂತರವಾಗಿ ಹೊಸ ಕೌಶಲ್ಯಗಳನ್ನು ಗಳಿಸಬೇಕು. ತಂತ್ರಜ್ಞಾನದಲ್ಲಿ ದೊರೆಯುವ ಪ್ರತಿಯೊಂದು ದೊಡ್ಡ ಅವಕಾಶದ ಜತೆಗೆ ಸವಾಲುಗಳೂ ಇರುತ್ತವೆ. ಆದ್ದರಿಂದ ಕೃತಕ ಬುದ್ಧಿಮತ್ತೆಯನ್ನು ಕೇವಲ ಬಳಸುವುದಷ್ಟೇ ಅಲ್ಲದೆ, ಅದನ್ನು ಜವಾಬ್ದಾರಿಯುತವಾಗಿ ಬಳಸುವ ಸಾಮಥ್ರ್ಯವನ್ನು ಬೆಳೆಸಿಕೊಳ್ಳಬೇಕು ಎಂದರು. ಉದ್ಯೋಗ ಹುಡುಕುವವರಾಗುವುದಕ್ಕಿಂತ ಉದ್ಯೋಗ ಸೃಷ್ಟಿಸುವ ಉದ್ಯಮಿಗಳಾಗುವ ಮನೋಭಾವ ಯುವಕರಲ್ಲಿ ಬೆಳೆಯಬೇಕು. ಭಾರತದ ಆರ್ಥಿಕ ಶಕ್ತಿ ಕೇವಲ ಸಾಫ್ಟ್ ವೇರ್ ಕ್ಷೇತ್ರದಿಂದ ಬಂದದ್ದಲ್ಲ; ದೇಶದ ಸ್ವಾವಲಂಬನೆ, ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಜನರ ಕೊಡುಗೆ ಹಾಗೂ ಉದ್ಯಮಶೀಲತೆಯೂ ಅದರ ಪ್ರಮುಖ ಆಧಾರವಾಗಿದೆ ಎಂದರು.

ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಯುವ ಕಾರ್ಯಕ್ರಮಗಳ ಸಹಾಯಕ ನಿರ್ದೇಶಕ ಅನಲೇಂದರ್ ಶರ್ಮಾ, ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರು ದೇಶದ ಯುವಜನತೆಗೆ ಸದಾ ಆದರ್ಶ ಪ್ರಾಯರು. ದೇಶದ ಪ್ರತಿಯೊಬ್ಬ ಯುವಕ-ಯುವತಿಯೂ ಸ್ಕೌಟಿಂಗ್‍ನ ಮೌಲ್ಯಗಳನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಮಹತ್ವದ ಬದಲಾವಣೆ ಸಾಧ್ಯ. ಸೇವೆ, ಶಿಸ್ತು, ನಾಯಕತ್ವ ಹಾಗೂ ದೇಶಪ್ರೇಮದಂತಹ ಮೌಲ್ಯಗಳನ್ನು ಬೆಳೆಸುವಲ್ಲಿ ಸ್ಕೌಟಿಂಗ್ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ರೋಬೋಟಿಕ್ಸ್, ಎಐ ಮತ್ತು ಸ್ಟೆಮ್ ಕ್ಷೇತ್ರಗಳೊಂದಿಗೆ ಯುವ ಉದ್ಯಮಶೀಲತೆಯನ್ನು ಜೋಡಿಸಿರುವ ಈ ಕಾರ್ಯಾಗಾರವು ಕುತೂಹಲ, ಹೊಸ ಆಲೋಚನೆ ಹಾಗೂ ಆವಿಷ್ಕಾರದ ಮನೋಭಾವವನ್ನು ಬೆಳೆಸುವ ವೇದಿಕೆಯಾಗಬೇಕು. ಪ್ರಶ್ನೆಗಳನ್ನು ಕೇಳುವುದು, ಪ್ರಯೋಗ ನಡೆಸುವುದು, ತಂತ್ರಜ್ಞಾನವನ್ನು ವಿವೇಚನೆಯಿಂದ ಬಳಸುವುದು ಮತ್ತು ಕಲಿತದ್ದನ್ನು ಕಾರ್ಯರೂಪಕ್ಕೆ ತರುವುದು ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿದೆ ಎಂದರು.

ಜಿಲ್ಲಾ ಗೈಡ್ ಕಮಿಷನರ್ ವಿಮಲಾ ರಂಗಯ್ಯ, ಕಾರ್ಯಾಗಾರವು ಯುವಕರ ಭವಿಷ್ಯದ ಬೆಳವಣಿಗೆಗೆ ಪೂರಕವಾಗಿದ್ದು, ಇಲ್ಲಿ ಪಡೆಯುವ ಅನುಭವವನ್ನು ಮುಂದಿನ ಶೈಕ್ಷಣಿಕ ಮತ್ತು ವೃತ್ತಿ ಬದುಕಿನಲ್ಲಿ ಬಳಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರೊ. ಹರೀಶ್ ಕುಂದರ್, ಯೋಗೇಂದ್ರ, ವೇಣುರಾವ್ ದೇವ್, ಚಂದ್ರ, ಸೃಜಿತ್ ಶ್ರೀನಾಥ್, ಸಂಧ್ಯಾ, ಭರತ್‍ರಾಜ್ ಸೇರಿದಂತೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿವಿಧ ವಿಭಾಗಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಭಾರತದ ಎಲ್ಲಾ ರಾಜ್ಯಗಳಿಂದ ಒಟ್ಟು 161 ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಅಪೇಕ್ಷಾ ಭಂಡಾರಿ ಕಾರ್ಯಕ್ರಮ ನಿರೂಪಿಸಿ, ಕೋಶಾಧಿಕಾರಿ ನವೀನ್ ಅಂಬೂರಿ ವಂದಿಸಿದರು.

Leave a Reply

Your email address will not be published. Required fields are marked *