ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಅಭಿವೃದ್ಧಿ ಮತ್ತು ಪರಿಸರದ ನಡುವೆ ಸಮತೋಲನ ಅಗತ್ಯ: ವಿವೇಕ್ ಆಳ್ವ

ಮೂಡುಬಿದಿರೆ: ಪಶ್ಚಿಮ ಘಟ್ಟಗಳು ಜಾಗತಿಕ ಮಟ್ಟದಲ್ಲಿ ಅತ್ಯಂತ ಸೂಕ್ಷ್ಮ ಪರಿಸರ ವ್ಯವಸ್ಥೆ ಹೊಂದಿರುವ ಪ್ರದೇಶವಾಗಿದ್ದು, ಅಭಿವೃದ್ಧಿಯ ಹೆಸರಿನಲ್ಲಿ ಅಲ್ಲಿನ ನೈಸರ್ಗಿಕ ಸಂಪನ್ಮೂಲಗಳಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು. ಪರಿಸರ ಸಂರಕ್ಷಣೆ, ಜನರ ಜೀವನೋಪಾಯ ಹಾಗೂ ಅಭಿವೃದ್ಧಿಯ ನಡುವೆ ಸಮತೋಲನ ಸಾಧಿಸುವುದು ಇಂದಿನ ಅಗತ್ಯವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.

ಬೆಂಗಳೂರು ಚಾಣಕ್ಯ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಎಂಜಿನಿಯರಿಂಗ್ ಆಯೋಜಿಸಿದ್ದ ‘ಲೇಕ್ ಕಾನ್ಫರೆನ್ಸ್–2026’ರಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಪಶ್ಚಿಮ ಘಟ್ಟಗಳ ಜೀವವೈವಿಧ್ಯ, ಜಲಮೂಲಗಳ ಸಂರಕ್ಷಣೆ ಮತ್ತು ಪರಿಸರ ಸ್ನೇಹಿ ಅಭಿವೃದ್ಧಿಯ ಅಗತ್ಯವನ್ನು ವಿವರಿಸಿದರು.

ಬಹುತೇಕ ದೇಶಗಳಲ್ಲಿ ಕೇವಲ 30ರಿಂದ 40 ಸಸ್ಯ ಮತ್ತು ಪ್ರಾಣಿ ಪ್ರಭೇದಗಳು ಕಂಡುಬರುವ ಪ್ರದೇಶಗಳಿದ್ದರೆ, ಪಶ್ಚಿಮ ಘಟ್ಟಗಳಲ್ಲಿ ಸುಮಾರು 6,800 ಪ್ರಭೇದಗಳ ಜೀವವೈವಿಧ್ಯವಿದೆ. ಇದರಲ್ಲಿ ನಮ್ಮ ಭಾಗದ ಪಶ್ಚಿಮ ಘಟ್ಟಗಳಲ್ಲಿಯೇ ಸುಮಾರು 3,500 ಪ್ರಭೇದಗಳಿವೆ. ಒಂದು ಬದಿಯಲ್ಲಿ ಪಶ್ಚಿಮ ಘಟ್ಟಗಳು, ಮತ್ತೊಂದು ಬದಿಯಲ್ಲಿ ಅರಬ್ಬಿ ಸಮುದ್ರ ಹೊಂದಿರುವ ದಕ್ಷಿಣ ಕನ್ನಡದ ಜನರು ನಿಜಕ್ಕೂ ಭಾಗ್ಯವಂತರು. ಇಂತಹ ಸೂಕ್ಷ್ಮ ಪರಿಸರ ವ್ಯವಸ್ಥೆಯ ನಡುವೆ ಬದುಕುತ್ತಿರುವ ನಾವು ಅದರ ಸಂರಕ್ಷಣೆಯ ಹೊಣೆಗಾರಿಕೆಯನ್ನೂ ಅರಿತುಕೊಳ್ಳಬೇಕು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ನಿರಂತರವಾಗಿ ಸ್ವಚ್ಛತಾ ಅಭಿಯಾನಗಳನ್ನು ನಡೆಸುವುದರ ಜೊತೆಗೆ, ಪರಿಸರ ಮತ್ತು ಸ್ವಚ್ಛತೆಯ ಕುರಿತು ಜನರ ಮನಸ್ಥಿತಿಯನ್ನು ಬದಲಾಯಿಸುವ ನಿಟ್ಟಿನಲ್ಲಿಯೂ ಕಾರ್ಯನಿರ್ವಹಿಸುತ್ತಿದೆ. ಕೇವಲ ಸ್ವಚ್ಛತಾ ಅಭಿಯಾನಗಳನ್ನು ನಡೆಸುವುದμÉ್ಟೀ ಮುಖ್ಯವಲ್ಲ; ಪ್ರತಿಯೊಬ್ಬರಲ್ಲೂ ಪರಿಸರದ ಬಗ್ಗೆ ಕಾಳಜಿ ಮತ್ತು ಸ್ವಚ್ಛತೆಯ ಜವಾಬ್ದಾರಿಯನ್ನು ಬೆಳೆಸುವುದು ಅಗತ್ಯ. ಈ ನಿಟ್ಟಿನಲ್ಲಿ ಜನರ ಮನಸ್ಸನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೂ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಪರ್ಯಾವರಣ ಸಂರಕ್ಷಣಾ ತಂಡದ ಸಹಯೋಗದಲ್ಲಿ ‘ಹಸಿರು ಸಂವಾದ’ ಅಭಿಯಾನದ ಮೂಲಕ ಪರಿಸರ ಸಂರಕ್ಷಣೆಯನ್ನು ಜನಾಂದೋಲನವನ್ನಾಗಿಸುವ ನಿಟ್ಟಿನಲ್ಲಿ 56 ಗ್ರಾಮಗಳನ್ನು ಒಳಗೊಂಡು ಪರಿಸರ ಜಾಗೃತಿ, ಹಸಿರು ದೀಪಾವಳಿ, ನಾಗರ ಪಂಚಮಿ ಹಾಗೂ ಹಸಿರು ಗಣೇಶೋತ್ಸವದಂತಹ ಆಚರಣೆಗಳ ಮೂಲಕ ಪರಿಸರ ಸ್ನೇಹಿ ಜೀವನಶೈಲಿಯನ್ನು ಉತ್ತೇಜಿಸಲಾಗುತ್ತಿದೆ. ಮುಂದಿನ ಜನವರಿ 6 ಹಾಗೂ 7ರಂದು ಹಸಿರು ಸಂವಾದದ ಹಿನ್ನಲೆಯಲ್ಲಿ ಎರಡು ದಿನದ ಸಮ್ಮೇಳನ ಆಳ್ವಾಸ್‍ನಲ್ಲಿ ನಡೆಯಲಿದೆ ಎಂದರು.

ಎತ್ತಿನಹೊಳೆ ಯೋಜನೆಯ ಪರಿಸರ ಪರಿಣಾಮಗಳ ಬಗ್ಗೆ ಗಂಭೀರ ಚಿಂತನೆ ಅಗತ್ಯ
ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಾಗ ಪರಿಸರದ ಮೇಲಿನ ಪರಿಣಾಮಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕು. ಎತ್ತಿನಹೊಳೆ ಯೋಜನೆಯಂತಹ ಯೋಜನೆಗಳಿಂದ ಪಶ್ಚಿಮ ಘಟ್ಟಗಳ ಸೂಕ್ಷ್ಮ ಪರಿಸರದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಗಂಭೀರವಾಗಿ ಚಿಂತಿಸಬೇಕು. ಹಿಂದೆ ಎತ್ತಿನಹೊಳೆ ಮತ್ತು ಬಿಸಿಲೆ ಘಾಟ್ ಪ್ರದೇಶಗಳಲ್ಲಿ ಕಾಣಸಿಗುತ್ತಿದ್ದ ನೀಲಗಿರಿ ಮಾರ್ಟೆನ್‍ಗಳು ಕಳೆದ ಸುಮಾರು 15 ವರ್ಷಗಳಿಂದ ಕಾಣಿಸುತ್ತಿಲ್ಲ ಎಂಬುದು ಜೀವವೈವಿಧ್ಯದ ಮೇಲೆ ಉಂಟಾಗುತ್ತಿರುವ ಬದಲಾವಣೆಗಳ ಬಗ್ಗೆ ಎಚ್ಚರಿಕೆ ನೀಡುತ್ತದೆ. ಈ ಯೋಜನೆಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವೂ ಆಕ್ಷೇಪಣೆ ನೀಡಿದ್ದನ್ನು ಉಲ್ಲೇಖಿಸಿದರು.
ಎತ್ತಿನಹೊಳೆ ಯೋಜನೆಯಿಂದ ಪರಿಸರಕ್ಕೆ ಆಗಬಹುದಾದ ಪರಿಣಾಮಗಳ ಬಗ್ಗೆ ಮಾತ್ರವಲ್ಲದೆ, ಶರಾವತಿ ಕಣಿವೆಯಲ್ಲಿ ಪ್ರಸ್ತಾಪಿತವಾಗಿರುವ 2,000 ಮೆಗಾವ್ಯಾಟ್ ಸಾಮಥ್ರ್ಯದ ಶರಾವತಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆಯ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದರು. ಪಶ್ಚಿಮ ಘಟ್ಟಗಳ ಸೂಕ್ಷ್ಮ ಪರಿಸರದಲ್ಲಿ ಇಂತಹ ಬೃಹತ್ ಯೋಜನೆಗಳು ಜೀವವೈವಿಧ್ಯಕ್ಕೆ ಅಪಾಯ ತಂದೊಡ್ಡಬಹುದು. ವಿಶೇಷವಾಗಿ ಸಿಂಗಳಿಕ (ಲಯನ್‍ಟೈಲ್ಡ್ ಮಕಾಕ್)ನಂತಹ ಅಪರೂಪದ ಪ್ರಭೇದಗಳ ಉಳಿವಿನ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ. ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೂ ಮುನ್ನ ಪರಿಸರದ ಮೇಲಿನ ದೀರ್ಘಕಾಲೀನ ಪರಿಣಾಮಗಳನ್ನು ಪರಿಗಣಿಸಬೇಕು ಎಂದರು.

ಕೋಲಾರದ ನೀರಿನ ಬವಣೆ ನೀಗಿಸಲು ವೈಜ್ಞಾನಿಕ ಪರಿಹಾರ ಅಗತ್ಯ
ಕೋಲಾರ ಸೇರಿದಂತೆ ಬರಪೀಡಿತ ಪ್ರದೇಶಗಳ ಜನರಿಗೆ ನೀರಿನ ಅಗತ್ಯವಿರುವುದು ವಾಸ್ತವ. ಅಲ್ಲಿನ ರೈತರು ಕೃಷಿಯ ಮೂಲಕ ದೇಶದ ಆಹಾರ ಭದ್ರತೆಯನ್ನು ಕಾಪಾಡುತ್ತಿದ್ದಾರೆ. ಅವರ ಕೃಷಿ ಮತ್ತು ಬದುಕಿಗೆ ಅಗತ್ಯವಾದ ನೀರನ್ನು ಒದಗಿಸುವುದು ಸರ್ಕಾರ ಹಾಗೂ ಜನಪ್ರತಿನಿಧಿಗಳ ಪ್ರಮುಖ ಜವಾಬ್ದಾರಿಯಾಗಿದೆ. ಈ ಸಮಸ್ಯೆಗೆ ಶಾಶ್ವತ ಹಾಗೂ ವೈಜ್ಞಾನಿಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಮತ್ತು ಚುನಾಯಿತ ಪ್ರತಿನಿಧಿಗಳು ಗಂಭೀರವಾಗಿ ಕಾರ್ಯಪ್ರವೃತ್ತರಾಗಬೇಕು. ಆದರೆ ಒಂದು ಪ್ರದೇಶದ ನೀರಿನ ಬವಣೆಯನ್ನು ನೀಗಿಸುವ ಪ್ರಯತ್ನದಲ್ಲಿ ಮತ್ತೊಂದು ಪ್ರದೇಶದ ಸೂಕ್ಷ್ಮ ಪರಿಸರ ವ್ಯವಸ್ಥೆಗೆ ಹಾನಿಯಾಗಬಾರದು. ಕೋಲಾರದ ಜನರ ನೀರಿನ ಸಮಸ್ಯೆಗೆ ಪರ್ಯಾಯ ಜಲಮೂಲಗಳು ಮತ್ತು ಸುಸ್ಥಿರ ಪರಿಹಾರಗಳನ್ನು ಗುರುತಿಸುವ ಮೂಲಕ ಜನರ ಹಿತಾಸಕ್ತಿ ಹಾಗೂ ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆ ಎರಡನ್ನೂ ಕಾಯ್ದುಕೊಳ್ಳಬೇಕು.
ಕರಾವಳಿ ಜಿಲ್ಲೆಗಳ ಕೃಷಿ ಮತ್ತು ಜಲಮೂಲಗಳ ಬದಲಾವಣೆಯನ್ನು ಉಲ್ಲೇಖಿಸಿದ ಅವರು, ಸುಮಾರು 150 ವರ್ಷಗಳ ಹಿಂದೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 4.73 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿತ್ತು. ಆದರೆ ಇಂದು ಭತ್ತದ ಕೃಷಿ ಗಣನೀಯವಾಗಿ ಕುಸಿದಿದೆ. ಹಿಂದೆ ಸಮೃದ್ಧವಾಗಿದ್ದ ನೀರಿನ ಲಭ್ಯತೆ ಕಡಿಮೆಯಾಗಿರುವುದು ಇದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.
ಬೆಂಗಳೂರಿನಲ್ಲಿ ಒಂದು ಕಾಲದಲ್ಲಿ ನದಿಯಾಗಿ ಹರಿಯುತ್ತಿದ್ದ ವೃಷಭಾವತಿ ಇಂದು ಕಲುಷಿತ ಒಳಚರಂಡಿಯಂತಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ನೈಸರ್ಗಿಕ ಜಲಮೂಲಗಳನ್ನು ಕಳೆದುಕೊಂಡರೆ ಮುಂದಿನ ಪೀಳಿಗೆಗೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಆದ್ದರಿಂದ ಅಭಿವೃದ್ಧಿ ಮತ್ತು ಪರಿಸರದ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳು ಮತ್ತು ಯುವ ಸಂಶೋಧಕರು ಕೈಗೊಳ್ಳುವ ಯೋಜನೆಗಳು ಕೇವಲ ಶೈಕ್ಷಣಿಕ ಪ್ರಾತ್ಯಕ್ಷಿಕೆಗಳಾಗಿ ಉಳಿಯದೆ, ಸಮಾಜದ ನೈಜ ಸಮಸ್ಯೆಗಳಿಗೆ ಪರಿಹಾರ ನೀಡುವಂತಿರಬೇಕು. ಅವರ ಸಂಶೋಧನೆಗಳು ಸಮುದಾಯದ ಪಾಲ್ಗೊಳ್ಳುವಿಕೆಗೆ ಪ್ರೇರಣೆ ನೀಡಬೇಕು. ಪ್ರತಿಯೊಂದು ಯೋಜನೆಯೂ ಸಮುದಾಯದ ಚಳವಳಿಯಾಗಿ, ಸ್ಥಳೀಯ ಅಭಿವೃದ್ಧಿಗೆ ಪೂರಕವಾಗಿ ರೂಪುಗೊಳ್ಳಬೇಕು ಎಂದರು.
‘ವಿಕಸಿತ ಭಾರತಕ್ಕಾಗಿ ಜೌಗು ಪ್ರದೇಶಗಳ ಸಂರಕ್ಷಣೆ, ಸಾಂಪ್ರದಾಯಿಕ ಜ್ಞಾನ ಮತ್ತು ನವೀನ ಪ್ರಕೃತಿ ಆಧಾರಿತ ತಂತ್ರಜ್ಞಾನಗಳು’ ಎಂಬ ವಿಷಯದಡಿ ನಡೆಯುವ ಈ 15ನೇ ದ್ವೈವಾರ್ಷಿಕ ಲೇಕ್ ಸಿಂಪೋಸಿಯಂ ನವೆಂಬರ್ 18ರಿಂದ 20ರ ವರೆಗೆ ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಎಂಜಿನಿಯರಿಂಗ್ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಸೆಂಟರ್ ಫಾರ್ ಇಕಲಾಜಿಕಲ್ ಸೈನ್ಸಸ್‍ನ ಎನರ್ಜಿ ಆ್ಯಂಡ್ ವೆಟ್‍ಲ್ಯಾಂಡ್ಸ್ ರಿಸರ್ಚ್ ಗ್ರೂಪ್ ಜಂಟಿಯಾಗಿ ಆಯೋಜಿಸಿದೆ.

ಕಾರ್ಯಕ್ರಮದಲ್ಲಿ ಪಶ್ಚಿಮ ಘಟ್ಟಗಳ ಕಾರ್ಯಪಡೆಯ ಮಾಜಿ ಅಧ್ಯಕ್ಷ ಹಾಗೂ ಪರಿಸರ ಹೋರಾಟಗಾರ ಅನಂತ ಹೆಗಡೆ ಆಶಿಸರ, ಚಾಣಕ್ಯ ವಿಶ್ವವಿದ್ಯಾಲಯದ ಕುಲಪತಿ ಪ್ರೋ. ಯಶವಂತ ಡೋಂಗ್ರೆ, ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ಟಿ.ವಿ. ರಾಮಚಂದ್ರ, ಚಾಣಕ್ಯ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಎಂಜಿನಿಯರಿಂಗ್‍ನ ಪ್ರಾಧ್ಯಾಪಕ ಡಾ. ಶ್ರೀಶ ಚೊಕ್ಕಾಡಿ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಸೆಂಟರ್ ಫಾರ್ ಇಕಲಾಜಿಕಲ್ ಸೈನ್ಸ್ ನ ಸಲಹೆಗಾರ ಡಾ. ಎಂ.ಡಿ. ಸುಭಾಷ್ ಚಂದ್ರನ್ ಇದ್ದರು.

Leave a Reply

Your email address will not be published. Required fields are marked *