ಮಲೆನಾಡು ಅಥವಾ ಮಳೆ ನಾಡು ಎಂದರೆ ಸಾಕು ಪ್ರತಿಯೊಬ್ಬರ ಮೈ ಮನ ರೋಮಾಂಚನಗೊಳ್ಳುತ್ತದೆ. ಇದಕ್ಕೆ ಕಾರಣ ಇಲ್ಲಿನ ಪ್ರಾಕೃತಿಕ ಸೌಂದರ್ಯ. ದಟ್ಟವಾಗಿ ಹಬ್ಬಿರುವ ಕಾಡು , ಆ ಕಾಡಿನ ನಡುವೆ ಹರಿಯುವ ಝರಿ ತೊರೆಗಳು,ಮರದಿಂದ ಮರಕ್ಕೆ ಹಾರಾಡುವ ಮಂಗಗಳ ಹಿಂಡು,ಕಂಗೊಳಿಸುವ ಚುಕ್ಕಿ ಜಿಂಕೆ , ಮೊಲ, ಬರ್ಕ , ಕುರ್ಕಿ,ನವಿಲು , ಮುಳ್ಳು ಹಂದಿ ,ಚಿಪ್ಪು ಹಂದಿ, ಹಾರ್ನ್ ಬಿಲ್ ನಂತಹ ವೈವಿಧ್ಯ ಖಗ ಮಿಗಗಳು,ಗಗನಕ್ಕೆ ಮುತ್ತಿಕ್ಕುವ ಕೊಡಚಾದ್ರಿಯಂತಹ ಪರ್ವತಗಳು, ಕಾಫಿ ಅಡಿಕೆ ತೋಟಗಳು,ಸಾವಿರಾರು ಜೀವ ವೈವಿಧ್ಯ ಪ್ರಬೇಧಗಳನ್ನು ತನ್ನೊಳಗೆ ಹೊಂದಿರುವ ಮಲೆನಾಡು ಸ್ವರ್ಗಕ್ಕೆ ಕನ್ನಡಿ ಹಿಡಿದಂತಿರುವ ರಮಣೀಯ ದೃಶ್ಯ ಕಾವ್ಯ.

ಕುವೆಂಪು ಸಾಹಿತ್ಯದ ಬೇರು ಮಲೆನಾಡ ಮಣ್ಣಿನದೇ. ಇಲ್ಲಿನ ಪ್ರಕೃತಿಯ ಕವಿಗಳನ್ನು ಸೃಜಿಸುತ್ತದೆ
ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ
ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ
ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವು
ಕಲೆಯುತಲೆಯಲೆಯಾಗಿ ತೇಲಿ ಬರುತಿರಲಿ..
ಕುವೆಂಪು ಸಾಹಿತ್ಯದ ಈ ಸಾಲುಗಳು ಮಲೆನಾಡ ಅನುಭೂತಿಯ ಮಳೆಗರೆಯುತ್ತವೆ.
ಹೀಗೆ ಸದ್ದಿಲ್ಲದೆ ಪ್ರಶಾಂತವಾಗಿದ್ದ ಪರಿಸರದಲ್ಲಿ ಕೇಳುವುದು ಕೇವಲ ತಂಗಾಳಿಯ ನಾದ, ಹಕ್ಕಿಗಳ ಕಲರವ, ಹರಿಯುವ ನೀರ ಸವಿನಾದ.
ಇಂತಹ ಸಮೃದ್ಧವಾದ ಶಾಂತವಾದ ಮಲೆನಾಡಲ್ಲಿ ಅಪಾಯದ ಸದ್ದನ್ನು ತುಂಬಲು ಸರ್ಕಾರ ಮುಂದಾಗುತ್ತಿರುವುದು ಆತಂಕಕಾರಿ ಬೆಳವಣಿಗೆ.ಹಿಂದಿನಿಂದಲೂ ಅಭಿವೃದ್ಧಿಯ ಹೆಸರಿನಲ್ಲಿ ಮಲೆನಾಡು ನಿರಂತರವಾಗಿ ಶೋಷಣೆಯಾಗುತ್ತಲೇ ಬರುತ್ತಿದೆ. ಅಂದು ನಾಡಿನ ಬೆಳಕಿಗಾಗಿ ತನ್ನೊಡಲ ಕಟ್ಟಲಾಗಿಸಿಕೊಂಡು ಅಣೆಕಟ್ಟಿನ ಭಾರ ಹೊತ್ತು ನಿಂತಿತು. ಇಂದು ಬೇಸೂರು ಅಣುವಿದ್ಯುತ್ ಸ್ಥಾವರದ ಕೂಗು.
ಕರ್ನಾಟಕದ ಹೃದಯದಂತಿರುವ ಪಶ್ಚಿಮ ಘಟ್ಟಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ .ವಿಶ್ವದಲ್ಲೇ ಜೀವ ವೈವಿಧ್ಯತೆಯ ಹಾಟ್ ಸ್ಪಾಟ್ ಎಂದು ಗುರುತಿಸಿಕೊಂಡಿರುವ ಪಶ್ಚಿಮ ಘಟ್ಟಗಳನ್ನು ಮನಬಂದಂತೆ ಶೋಷಿಸುವುದು ಖಂಡನೀಯ.ಮಲೆನಾಡು ಸಾವಿರಾರು ಜಾತಿಯ ಸಸ್ಯ ಪ್ರಾಣಿ ಸಂಕುಲಕ್ಕೆ ಆಶ್ರಯ ನೀಡಿ ಪೊರೆಯುವ ಜನನಿ.ಈ ಪುಣ್ಯ ನೆಲಕ್ಕೆ ವಿಕಿರಣ ಹಾಯಿಸಿ ಮಲೆನಾಡ ಬಸಿರ ಬಗೆಯುವ ಇಂತಹ ಪ್ರಬುದ್ದ ಯೋಜನೆಯ ಅಗತ್ಯತೆಯ ಪ್ರಶ್ನೆ ಮರುಪರಿಶೀಲನೆಗೊಳ್ಳಬೇಕು.
ಭೂಮಿಯಲ್ಲಿನ ಪ್ರತಿ ಜೀವಿಗೂ ಬದುಕುವ ಹಕ್ಕಿದೆ ಎನ್ನುತ್ತಲೇ ಜೀವ ಸಂಕುಲದ ಅವನತಿಗೆ ಹೆಜ್ಜೆ ಇಟ್ಟು ಅಭಿವೃದ್ಧಿ ಎಂಬ ಕಾರಣ ನೀಡುತ್ತಾ ಬರುತ್ತಿದ್ದೇವೆ.ಇದು ನಮ್ಮಂತಹ ವಿದ್ಯಾವಂತ ನಾಗರಿಕ ಮನುಷ್ಯನ ಸ್ವಾರ್ಥದ ಪರಮಾವಧಿ.ಉಗ್ರ ಎನ್ನಿಸುವ ಹುಲಿಯಾದರೂ ಒಮ್ಮೆ ಬೇಟೆಯಾಡಿ ತನ್ನ ಹಸಿವನ್ನು ತೀರಿಸಿಕೊಳ್ಳುತ್ತದೆ. ಆದರೆ ಮನುಷ್ಯನ ಹಸಿವಿಗೆ ಮಿತಿ ಇಲ್ಲ.
ಸಾಗರ ತಾಲೂಕಿನ ಬೇಸೂರು ಪುಟ್ಟ ಗ್ರಾಮ ವಾಗಿದ್ದು ತಾಲೂಕು ಕೇಂದ್ರದಿಂದ ಬಹು ದೂರದಲ್ಲಿದೆ. ಇಲ್ಲಿ ಕೈ ಕೊಳ್ಳಲು ಪ್ರಸ್ತಾಪಿತವಾದ ಅಣು ವಿದ್ಯುತ್ ಸ್ಥಾವರ ಯೋಜನೆಯನ್ನು ಸರ್ಕಾರ ಕೈಬಿಡಬೇಕು. ಈ ಯೋಜನೆ ಜಾರಿಯಾದರೆ ಅಣುಸ್ತಾವರದಿಂದ ಉಂಟಾಗುವ ವಿಕಿರಣಗಳು ಜನರಿಗೆ ಕ್ಯಾನ್ಸರ್ ಕಾರಕ ಕಾಯಿಲೆಯ ಭೀತಿ ಹುಟ್ಟಿಸುವ ಜೊತೆಗೆ ಸಕಲ ಜೀವ ಸಂಕುಲಕ್ಕೆ ವಿಷ ಉಣಿಸುವುದರಲ್ಲಿ ಸಂಶಯವಿಲ್ಲ. ಸ್ವಚ್ಛಂದವಾದ ಗಾಳಿ ನೀರು ಪರಿಸರವನ್ನು ಮಾಲಿನ್ಯದ ಸುಳಿಗೆ ಬಲಿಕೊಡುವುದು ಮುಂದಿನ ಪೀಳಿಗೆಯ ಅವನತಿಗೆ ಬರೆಯುತ್ತಿರುವ ಮುನ್ನುಡಿ. ಮುಂದಿನ ತಲೆಮಾರಿಗೆ ಆರೋಗ್ಯಕರ ಭೂಮಿಯನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ.
ಪಶ್ಚಿಮ ಘಟ್ಟದ ಅಸ್ತಿತ್ವಕ್ಕೆ ಧಕ್ಕೆ ತರುವ ಇಂತಹ ಯಾವುದೇ ಯೋಜನೆಯನ್ನು ಮಲೆನಾಡಿಗರು ಒಪ್ಪುವುದಿಲ್ಲ.
ಪದೇಪದೇ ಮರೆ ನಾಡಿಗೆ ಅಪಾಯದ ಭೀತಿಯಲ್ಲಿ ಎದುರಾಗುತ್ತಲೇ ಇದೆ. ದಶಕಗಳ ಹಿಂದಿ ಜಲವಿದ್ಯುತ್ ಎಂದು ಜನರು ಎರಡೆರಡು ಬಾರಿ ಮುಳುಗಿದ್ದಾರೆ. ಅಣೆಕಟ್ಟು ನಿರ್ಮಾಣದಿಂದ ಹಲವಾರು ಕುಟುಂಬಗಳು ಅಸ್ತಿತ್ವ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಸಂತ್ರಸ್ತರಿಗೆ ಇಂದಿಗೂ ಸರಿಯಾಗಿ ಪರಿಹಾರ ದೊರೆತಿಲ್ಲ. ವರ್ಷಗಳ ಹಿಂದೆ ಶರಾವತಿ ಪಂಪ್ ಯೋಜನೆಯ ಭೀತಿ ಎದುರಾಗಿತ್ತು. ಇದೀಗ ಅಡವಿತ್ತು ಸ್ಥಾವರದ ಆತಂಕ. ವಿಶ್ವದ ಪ್ರಮುಖ ಜೈವಿಕ ಹಾಟ್ ಸ್ಪಾಟ್ ಎಂದು ಗುರುತಿಸಿಕೊಂಡಿರುವ ಇಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಜಾತಿಯ ಸಸ್ಯ ವರ್ಗವಿದೆ. ನಿತ್ಯ ಹರಿದ್ವರ್ಣ ಶೋಲಾ ಕಾಡಿನಿಂದ ಕೂಡಿರುವ ಈ ಪ್ರದೇಶ ಹಲವಾರು ಅಳಿವಿ ನಂಚಿನಲ್ಲಿರುವ ಪ್ರಾಣಿ ಪಕ್ಷಿಗಳ ಉಭಯಚರಗಳ ಆಶ್ರಯ ತಾಣವಾಗಿದೆ.( ಚಿಪ್ಪು ಹಂದಿ/ ಪ್ಯಾಂಗೋಲಿನ್,ಸಿಂಹ ಬಾಲದ ಮಕಾಕ್ ,ಹಾರ್ನ್ ಬಿಲ್) .
ಇಂತಹ ಶ್ರೀಮಂತ ಮಲೆನಾಡನ್ನು ವಿಕಿರಣಗಳಿಗೆ ಹೊಟ್ಟೆ ಮಲಿನ ನಾಡನ್ನಾಗಿಸುವ ನಿರ್ಧಾರ ಕೊನೆಗೊಳ್ಳಲಿ. ಮುಂದಿನ ದಿನಗಳಲ್ಲಿ ಪಶ್ಚಿಮ ಘಟ್ಟ ಅಥವಾ ಮಲೆನಾಡು ರಕ್ಷಣಾ ಯೋಜನೆಗಳು ಸರ್ಕಾರದಿಂದ ಹೊರ ಬಂದು ಮಲೆನಾಡಿಗರು ನಿಟ್ಟಿಸಿರು ಬಿಡುವಂತಾಗಲಿ.ಕವಿ, ಕಾವ್ಯ, ಪ್ರವಾಸಕ್ಕೆ ಸ್ಪೂರ್ತಿಯಾದ ಮಲೆನಾಡ ಧರಿತ್ರಿ ಇನ್ನೇನು ಮಳೆಯನ್ನು ಮೈದುಂಬಿಕೊಂಡು ಅರಳುವ ತವಕದಲ್ಲಿದ್ದಾಳೆ.ಖುಷಿಯಿಂದ ಹಾಲಿನಂತೆ ಉಕ್ಕಿ ಭೋರ್ಗರೆಯಲು ಜಲಪಾತದ ತುದಿಯತ್ತ ಬಳುಕುವ ಶರಾವತಿ ಮಡಿಲಿಗೆ ಮಾಲಿನ್ಯ ತುಂಬಿ ಉಸಿರುಗಟ್ಟಿಸುವ ಯೋಚನೆ. ಅಭಿವೃದ್ಧಿ ತಂದಿರುವ ದುರಂತವಲ್ಲದೆ ಇನ್ನೇನು? ಮಲೆನಾಡು ಪ್ರವಾಸೋದ್ಯಮದ ನಾಡಾಗಿ ,ಪ್ರಕೃತಿ ಸೌಂದರ್ಯದ ಬೀಡಾಗಿ ,ಸದಾ ಹಸಿರಾಗಿ ಕಂಗೊಳಿಸಲಿ.
ಟಿ.ಜಿ ಪುಷ್ಪಲತಾ
ಯುವ ಲೇಖಕಿ ( ಶಿಕ್ಷಕಿ)
ಸಾಗರ
