ಮೂಡುಬಿದಿರೆ: ಸ್ವಸ್ತಿಶ್ರೀ ಜೈನ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಜುಲೈ 13, 2026ರಂದು ಧವಳತ್ರಯ ಜೈನ ಕಾಶಿ ಟ್ರಸ್ಟ್ನ ಸಹಕಾರದಿಂದ, ಕಾಲೇಜಿನ ಸಮಾಜಸೇವಾ ಸಂಘ ಹಾಗೂ ಮೂಡುಬಿದಿರೆ ಪುರಸಭೆಯ ಸಹಯೋಗದೊಂದಿಗೆ ಕಸ ವಿಲೇವಾರಿ ಕುರಿತು ಪ್ರಾತ್ಯಕ್ಷಿಕೆ ಮತ್ತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಸ್ಥಾಪಕ ಅಧ್ಯಕ್ಷರಾದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳು ಪಾವನ ಸಾನ್ನಿಧ್ಯ ವಹಿಸಿ ಮಾತನಾಡಿ, “ನಮ್ಮ ಊರಿನ ಪರಿಸರವನ್ನು ಸ್ವಚ್ಛ ಹಾಗೂ ಸುಂದರವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕಸವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಿದಾಗ ಮಾತ್ರ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿರಲು ಸಾಧ್ಯ” ಎಂದು ಹೇಳಿದರು.



ಕಾರ್ಯಕ್ರಮದಲ್ಲಿ ಮೂಡುಬಿದಿರೆ ಪುರಸಭೆಯ ಮುಖ್ಯಾಧಿಕಾರಿ ಇಂದು ಅವರು ಹಾಗೂ ಪುರಸಭೆಯ ಪರಿಸರ ಅಭಿಯಂತರರಾದ ಶಿಲ್ಪಾ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪೂಜ್ಯ ಸ್ವಾಮೀಜಿಗಳು ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
ಶಿಲ್ಪಾ ಅವರು ವಿದ್ಯಾರ್ಥಿಗಳಿಗೆ ಕಸ ವಿಲೇವಾರಿಯ ಕುರಿತು ಸಮಗ್ರ ಮಾಹಿತಿ ನೀಡಿದರು. ಒಣ ಕಸ, ಹಸಿ ಕಸ ಹಾಗೂ ಇತರ ತ್ಯಾಜ್ಯಗಳನ್ನು ಹೇಗೆ ಪ್ರತ್ಯೇಕಿಸಿ, ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎಂಬುದರ ಬಗ್ಗೆ ವಿವರವಾಗಿ ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಪ್ರಜ್ವಲ್ ಶೆಣೈ ಅವರು ವಿವಿಧ ಮಾದರಿಗಳ ಮೂಲಕ ಕಸ ವಿಲೇವಾರಿಯ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳಿಗೆ ಪ್ರದರ್ಶಿಸಿ, ಪರಿಸರ ಸಂರಕ್ಷಣೆಯ ಮಹತ್ವವನ್ನು ಮನದಟ್ಟು ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಕಾಲೇಜಿನ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷೆ, ನೋಟರಿ ಹಾಗೂ ನ್ಯಾಯವಾದಿ ಶ್ವೇತಾ ಜೈನ್ ಅವರು ಉಪಸ್ಥಿತರಿದ್ದು, ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಟ್ಟೆಯ ಚೀಲಗಳನ್ನು ವಿತರಿಸಿದರು.
ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲೆ ಸೌಮ್ಯ ಶ್ರೀ ಅವರು ಸ್ವಾಗತಿಸಿದರು. ಉಪನ್ಯಾಸಕಿ ಸರಸ್ವತಿ ಅವರು ವಂದಿಸಿದರು.
