
ದಯಾನಂದ ರೈ. ಕೆ
ನ್ಯಾಯವಾದಿ, ಮಾನಸ ಟವರ್ಸ್, ಮಂಗಳೂರು
ಕರ್ನಾಟಕ ಸರಕಾರವು, ಅಪಾರ್ಟ್ಮೆಂಟ್ ಮಾಲೀಕತ್ವದ ನಿರ್ವಹಣೆ, ಅಪಾರ್ಟ್ಮೆಂಟ್ ಮಾಲೀಕರ ಸಂಘ, ಸಂಘದ ನೋಂದಾವಣೆ ಮತ್ತು ಪುನರ್ ನಿರ್ಮಾಣಕ್ಕೆ ಸಂಬಂಧಿಸಿದ ದೀರ್ಘಕಾಲದ ಬೇಡಿಕೆಗಳಿಗೆ ಪೂರ್ಣವಿರಾಮ ಹಾಕುವ ಸದುದ್ದೇಶದಿಂದ ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ಕರಡು ಮಸೂದೆಯನ್ನು ಜಾರಿಗೊಳಿಸುವ ಕುರಿತು, ಸಾರ್ವಜನಿಕ ವಿಮರ್ಶೆಗೆ ಮೊದಲ ಬಾರಿಗೆ ಹೊರ ತಂದಿದೆ. 1972ರ ಅಪಾರ್ಟ್ಮೆಂಟ್ ಗೆ ಸಂಬಂಧಪಟ್ಟ ಕಾನೂನುಗಳು, ಪ್ರಕೃತ ಅಪಾರ್ಟ್ಮೆಂಟ್ ನಿವಾಸಿಗಳ ಲೇ-ಔಟ್ ಮತ್ತು ವಾಣಿಜ್ಯ ಸಂಕೀರ್ಣಗಳ ಮಾಲೀಕತ್ವ ನಿರ್ವಹಣೆಗೆ, ವಾಸ್ತವಿಕವಾಗಿ ಸರಿಹೊಂದದೆ ಇರುವುದರಿಂದ, ಸಮಗ್ರ ಸುಧಾರಣೆಗೆ ಈ ಹೊಸ ಕರಡು ಮಸೂದೆಯನ್ನು ಸಾರ್ವಜನಿಕ ವಿಮರ್ಶೆಗೆ ಹೊರತಂದಿರುವುದು ಮೊದಲ ಹೆಜ್ಜೆಯಾಗಿದ್ದು ಸ್ವಾಗತಾರ್ಹ ಕ್ರಮವಾಗಿರುತ್ತದೆ.
ಈ ಮಸೂದೆಯ ವಿಶೇಷತೆ ಏನೆಂದರೆ ಮಾಲೀಕತ್ವ ಮತ್ತು ಬಹುಮಹಡಿ ಕಟ್ಟಡದ ನಿರ್ವಹಣೆಯ ವ್ಯವಸ್ಥೆಯನ್ನು ಬಲಪಡಿಸಿರುವುದು, ಜಾಗ ಮತ್ತು ಎಲ್ಲಾ ಮಾಲಕರಿಗೆ ಸೇರುವ ಸಾಮಾನ್ಯ ಪ್ರದೇಶಗಳ ಒಡೆತನ, ಬಹುಮಹಡಿ ಅಪಾರ್ಟ್ಮೆಂಟ್ ಮಾಲೀಕರಿಗೆ ಸೇರಿದ, ಬಹುಮಹಡಿ ಸಂಘದ, ಕಟ್ಟಡ ನಿರ್ವಹಣೆ ಮತ್ತು ಆಡಳಿತಕ್ಕೆ ಮಾತ್ರ ಸೀಮಿತವಾಗಿರುತ್ತವೆ ಎಂಬ ಹಳೆಯ ಕಾಲದ ವಿಷಯಗಳನ್ನು ಮತ್ತು ತಕರಾರುಗಳನ್ನು ಸಾಧ್ಯವಾದ ಮಟ್ಟಿಗೆ ಕಡಿಮೆ ಮಾಡಲು ತಂದಿರುವ ಇದೊಂದು ಹೊಸ ಕರಡು ಕಾಯ್ದೆಯಾಗಿರುತ್ತದೆ. 30 ವರ್ಷಕ್ಕಿಂತ ಹಳೆಯ ಬಹುಮಹಡಿ ಕಟ್ಟಡಗಳಿಗೆ ಕಟ್ಟಡದ ಸ್ಥಿರತೆಯ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಂದ ಪ್ರಮಾಣ ಪತ್ರ ಕಡ್ಡಾಯಗೊಳಿಸಿರುವುದು ಹಾಗೂ 75% ಮಾಲೀಕರ ಅನುಮತಿಯಿಂದ ಹಳೆಯ ಕಟ್ಟಡದ ಪುನರಾಭಿವೃದ್ಧಿಗೆ ಎಡೆ ಮಾಡಿಕೊಟ್ಟಿರುವುದು, ಅಪಾರ್ಟ್ಮೆಂಟ್ ನಿವಾಸಿಗಳ ಮತ್ತು ಸಾರ್ವಜನಿಕರ ಸುರಕ್ಷತೆ ಮತ್ತು ಹಿತ ದೃಷ್ಟಿಯಿಂದ ಒಳಗೊಂಡಿರುವ ಅಂಶಗಳು ಕರಡು ಮಸೂದೆಯ ಸಂಗತಿಗಳಾಗಿರುವುದು ಸ್ವಾಗತಾರ್ಹವಾಗಿದೆ.
ಸಂಕೀರ್ಣದ ಈ ಕರಡು ಮಸೂದೆಯಲ್ಲಿ ಎರಡನೇ ಹಂತದ ಬಿ-ಶ್ರೇಣಿ ಸರ್ಕಾರಿ ಅಧಿಕಾರಿಯವರಿಗೆ ಸಕ್ಷಮ ಪ್ರಾಧಿಕಾರ ಮತ್ತು ಒಂದನೇ ಹಂತದ ಎ-ಶ್ರೇಣಿಯ ಸರಕಾರಿ ಅಧಿಕಾರಿಯವರಿಗೆ ಮೇಲ್ಮನವಿ ಪ್ರಾಧೀಕಾರ ಎಂಬ ಅಧಿಕಾರವನ್ನು ಕೊಟ್ಟು ಹಲವು ರೀತಿಯ ತಕರಾರುಗಳನ್ನು ನಿರ್ವಹಣೆ, ವಿಲೇವಾರಿ ಮತ್ತು ಮೇಲ್ಮನವಿ ಮಾಡಲು ಕೊಟ್ಟಿರುವ ಅಧಿಕಾರವು ಇನ್ನಷ್ಟು ವಿವಾದಗಳನ್ನು ಸೃಷ್ಟಿ ಮಾಡಬಹುದು. ಸರಕಾರದ ಎರಡನೇ ಶ್ರೇಣಿ ಅಧಿಕಾರಿಗಳು ಹೆಚ್ಚಾಗಿ ಕಾರ್ಯಾಂಗದಲ್ಲಿ ತೊಡಗಿಕೊಳ್ಳುವುದರಿಂದ, ಬೇರೆ ಬೇರೆ ಅಪಾರ್ಟ್ಮೆಂಟ್, ಲೇ ಔಟ್, ವಾಣಿಜ್ಯ ಕಾನೂನುಗಳ, ಕಾನೂನು ವ್ಯಾಖ್ಯಾನಗಳನ್ನು ಒಳಗೊಂಡಿರುವುದರಿಂದ ಮತ್ತು ಕೆಲವೊಂದು ಅಪಾರ್ಟ್ಮೆಂಟ್ ವಿವಾದಗಳು ಸಂಕೀರ್ಣತೆಯಿಂದ ಒಳಗೊಂಡಿರುವುದರಿಂದ, ಸಂಘಗಳ ನೋಂದಣಿ, ಉಪನಿಯಮಗಳ ಮಾನ್ಯತೆ, ದಾಖಲೆಗಳ ನಿರ್ವಹಣೆ ಮತ್ತು ಫ್ಲಾಟ್ ಖರೀದಿ ಹಕ್ಕುಗಳನ್ನು ಅಥವಾ ಇನ್ನು ಯಾವುದೇ ಸಮಸ್ಯೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ತೀರ್ಮಾನಿಸಲು ಸಕ್ಷಮ ಪ್ರಾಧೀಕಾರದಲ್ಲಿ ವ್ಯವಹರಿಸಲು ಅಪಾರ್ಟ್ಮೆಂಟ್ ಮಾಲೀಕರಿಗೆ ಅಥವಾ ಸಾರ್ವಜನಿಕರಿಗೆ ಕಷ್ಟವಾಗಬಹುದು. ಅಪಾರ್ಟ್ಮೆಂಟ್ ವಿವಾದಗಳು ಸಾಮಾನ್ಯವಾಗಿ ಸಿವಿಲ್ ನ್ಯಾಯಾಲಯಗಳಲ್ಲಿ ಪ್ರಮಾಣಪತ್ರ ಮತ್ತು ಪ್ರಮಾಣಪತ್ರದಲ್ಲಿ ಅಡ್ಡ ವಿಚಾರಣೆಯನ್ನು ಮತ್ತು ದಾಖಲೆ ಆಧಾರಗಳಲ್ಲಿ ನಿಗಧಿಪಡಿಸಿದ ಕಾಲ ಮಿತಿಯೊಂದಿಗೆ ಇತ್ಯರ್ಥಪಡಿಸಲು ಅಥವಾ ಕರಡು ಮಸೂದೆಯಲ್ಲಿ ಕಾಣಿಸಿದ ಎಲ್ಲಾ ಸಕ್ಷಮ ಪ್ರಾಧೀಕಾರದ ಅಧಿಕಾರಗಳನ್ನು ಗ್ರಾಹಕರ ನ್ಯಾಯಾಲಯದ ವ್ಯಾಪ್ತಿಗೆ ತಂದಲ್ಲಿ, ಇದರಿಂದ ಎರಡು ಹಂತದ ನ್ಯಾಯಾಲಯಗಳ ಕಾರ್ಯ ನಿರ್ವಹಣೆ ತಪ್ಪಿ ಎಲ್ಲಾ ಅಪಾರ್ಟ್ಮೆಂಟ್ ನ ವಿವಾದಗಳನ್ನು ಒಂದೇ ಸ್ವರೂಪದ ಸಿವಿಲ್ ನ್ಯಾಯಾಲಯಗಳಲ್ಲಿ ಬಗೆಹರಿಸಿಕೊಳ್ಳಲು ದಾರಿಮಾಡಿಕೊಟ್ಟಂತಾಗುತ್ತದೆ. ಉದಾಹರಣೆಗೆ: ಈಗಾಗಲೆ ಅಪಾರ್ಟ್ಮೆಂಟ್ ಗೆ ಸಂಬಂಧಪಟ್ಟ ಹೆಚ್ಚಿನ ಪ್ರಕರಣಗಳು ಗ್ರಾಹಕರ ನ್ಯಾಯಾಲಯಕ್ಕೆ ಬರುತ್ತಿರುವ ವಿಷಯವನ್ನು ನಾವು ಗಮನಿಸಬೇಕಾಗುತ್ತದೆ.
ಕೆಲವೊಂದು ವಿಷಯಗಳು ಸಕ್ಷಮ ಪ್ರಾಧಿಕಾರದ ಕರಡು ಮಸೂದೆಯಲ್ಲಿ ಒಳಗೊಳ್ಳದೇ ಇದ್ದ ಪಕ್ಷದಲ್ಲಿ ಪ್ರಕರಣ ತನಿಖೆ ಬರುವ ಸಂದರ್ಭದಲ್ಲಿ ಸಕ್ಷಮ ಪ್ರಾಧಿಕಾರ ವಿಚಾರದಲ್ಲಿ ಮತ್ತೆ ಪುನಃ ತಕರಾರು ಬರುವ ಸಾಧ್ಯತೆಗಳಿವೆ. ಸಾಮಾನ್ಯವಾಗಿ ಬಹುಮಹಡಿ ಕಟ್ಟಡಗಳು ಮತ್ತು ಅದಕ್ಕೆ ಹೊಂದಿರುವ ಸಾಮಾನ್ಯ ಜಾಗಗಳು ಕೆಲವೊಂದು ವಿಷಯಗಳಲ್ಲಿ ಸಿವಿಲ್ ರೂಪದ ಪ್ರಕರಣಗಳಾಗಿದ್ದು, ಮತ್ತು ಜಟಿಲತೆಗಳಿಂದ ಕೂಡಿರುವುದರಿಂದ ಸದ್ರಿ ಪ್ರಕರಣಗಳ ವಿಚಾರಣೆಗಳನ್ನು ಸಿವಿಲ್ ನ್ಯಾಯಾಲಯದ ವ್ಯಾಪ್ತಿಗೆ ಮಾತ್ರ ವಹಿಸುವುದು ಎನ್ನುವುದು ಹೆಚ್ಚಿನವರ ಅಭಿಪ್ರಾಯವಾಗಿರುತ್ತದೆ.
ಈಗಾಗಲೇ ಎಷ್ಟೋ ಸಕ್ಷಮ ಪ್ರಾಧಿಕಾರಗಳು ಇರುವ ಪ್ರಕರಣಗಳು ಸಿವಿಲ್ ನ್ಯಾಯಾಲಯಕ್ಕಿಂತಲೂ ಹೆಚ್ಚಿನ ಸಮಯವನ್ನು ಪ್ರಕರಣಕ್ಕೆ ವಿಲೇವಾರಿ ಮಾಡಲು ತೆಗೆದುಕೊಳ್ಳುವುದರಿಂದ ಮತ್ತು ಸದ್ರಿ ಪ್ರಾಧಿಕಾರಗಳು ನ್ಯಾಯಾಂಗದ ಕಕ್ಷೆಗಳಿಂದ ಹೊರಗಿರುವುದರಿಂದ ಅಲ್ಲಿ ಪ್ರಕರಣಗಳು ಸರಿಯಾಗಿ ವಿಲೇವಾರಿ ಮಾಡಲು ಅಡೆತಡೆಗಳು ಬರಬಹುದು. ಆದ್ದರಿಂದ, ಈ ಕರಡು ಮಸೂದೆ ಈ ವಿಚಾರದಲ್ಲಿ ದುರ್ಬಲವಾಗಬಹುದು ಹಾಗೂ ಇದು ಸ್ವಾಗತಾರ್ಹ ಅಂಶವು ಕೂಡಾ ಆಗಿರುವುದಿಲ್ಲ.
ಈ ಕರಡು ಮಸೂದೆ ಕೆಲವು ಹಳೆಯ ಕಾನೂನುಗಳಿದ್ದ ಸಮಸ್ಯೆಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದರೂ ಕೆಲವೊಂದು ವಿಚಾರಗಳಲ್ಲಿ ಆಡಳಿತಾತ್ಮಕ ಪ್ರಶ್ನೆಗಳನ್ನು ಹಾಕಿವೆ. ಉದಾಹರಣೆಗೆ ಈಗಾಗಲೇ ವಿವಿಧ ಕಾನೂನುಗಳಡಿಯಲ್ಲಿ ನೋಂದಾಯಿತವಾಗಿರುವ ಅಪಾರ್ಟ್ಮೆಂಟ್ ಸಂಘಗಳ ಸ್ಥಿತಿ-ಗತಿ, ಕಟ್ಟಡ ನಿರ್ಮಾಣದಾರರ/ಸ್ಥಳ ಮಾಲೀಕರ ಬಾಕಿ ಕೊಡದಿರುವ ದಾಖಲೆಗಳ ಹಸ್ತಾಂತರ ಮತ್ತು ಮುಂಗಡ ಹಣ, ಈಗಿರುವ ಕಾನೂನು ಮತ್ತು ಹಿಂದಿರುವ ಕಾನೂನಿನ ಅನ್ವಯಿಸುವಿಕೆ ಈಗಾಗಲೇ ಅಪಾರ್ಟ್ಮೆಂಟ್ ಖರೀದಿಸಿದವರ ಪಾತ್ರದ ಬಗ್ಗೆ ಕೂಲಂಕುಷವಾಗಿ ತಿಳಿಯಪಡಿಸದಿರುವುದು. ಆದ್ದರಿಂದ ಈಗಿನ ಹೊಸ ಕಾನೂನು ಹಳೆಯ ಕಾನೂನನ್ನು ಸರಿದೂಗಿಸುವಂತಾಗುವುದಿಲ್ಲ.
ಈ ಕರಡು ಮಸೂದೆಯ ದುರ್ಬಲತೆ ಏನೆಂದರೆ ಅಪಾರ್ಟ್ಮೆಂಟ್ ಸಂಘವು ಹೆಚ್ಚಿನ ನಿರ್ವಹಣೆಗೆ ಸಕ್ಷಮ ಪ್ರಾಧೀಕಾರವನ್ನೇ ಅವಲಂಬಿಸಿರುವಂತದ್ದು. ಹೆಚ್ಚಿನ ಅಪಾರ್ಟ್ಮೆಂಟ್ ಗಳಲ್ಲಿ ತಿಂಗಳ ನಿರ್ವಹಣಾ ವೆಚ್ಚವನ್ನು ಪಾವತಿ ಮಾಡಲು ಬಾಕಿ ಮಾಡಿರುವುದರಿಂದ ಸಂಘದ ಆಡಳಿತವನ್ನು ನಡೆಸುವುದು ಕಷ್ಟಕರವಾಗಿರುತ್ತದೆ. ಇದರಿಂದ ಹೆಚ್ಚಿನ ಅಪಾರ್ಟ್ಮೆಂಟ್ ಗಳಲ್ಲಿ ಮಾಲಕರು ಸಂಘವು ಬಹುಮಹಡಿ ಕಟ್ಟಡವನ್ನು ನಿರ್ವಹಿಸುವುದರಲ್ಲಿ ವಿಫಲವಾಗಿರುತ್ತದೆ. ಕಟ್ಟಡದ ಮಾಲೀಕರು ಆರ್ಥಿಕ ಒಂದು ವರ್ಷದಲ್ಲಿ, 2 ತಿಂಗಳು ಅವಧಿಯಲ್ಲಿ ತಿಂಗಳ ನಿರ್ವಹಣಾ ವೆಚ್ಚವನ್ನು ಸಂಘಕ್ಕೆ ಬಾಕಿ ಮಾಡಿದಲ್ಲಿ, ಮೂಲಭೂತ ಸೌಕರ್ಯಗಳಾದ ವಿದ್ಯುಚ್ಛಕ್ತಿ, ನೀರು ಮತ್ತು ಇತರ ಸವಲತ್ತುಗಳನ್ನು, 15 ದಿವಸ ನೋಟೀಸ್ ಜಾರಿ ಮಾಡಿ, ಕಡಿತಗೊಳಿಸುವ ಅಧಿಕಾರವನ್ನು ಸಂಘಕ್ಕೆ ನೀಡಲೇಬೇಕು. ಹಾಗಿದ್ದಲ್ಲಿ ಮಾತ್ರ ಮಾಲೀಕರ ಸಂಘವು ನಿಗದಿತ ಸಮಯದಲ್ಲಿ ಕಟ್ಟಡದ ಎಲ್ಲಾ ಸೌಕರ್ಯಗಳನ್ನು ಕೊಡಬಲ್ಲದು.
ಈ ವಿಷಯದಲ್ಲಿ ತೆಲಂಗಾಣ ಸರ್ಕಾರವು ತೆಲಂಗಾಣ ಬಹುಮಹಡಿ Promotional Construction ಮತ್ತು Ownership Act 1987 ಕಾಯಿದೆ ಅಡಿಯಲ್ಲಿ ಸೆಕ್ಷನ್ 21ನ್ನು ಅಳವಡಿಸಿ ಬಹು ಮಹಡಿ ಸಂಘಕ್ಕೆ ಮಾಸಿಕ ನಿರ್ವಹಣಾ ವೆಚ್ಚವನ್ನು ಕೊಡದ ಸಂದರ್ಭದಲ್ಲಿ ಸಂಘಕ್ಕೆ ಮೂಲಭೂತ ಸೌಕರ್ಯಗಳನ್ನು ಖಡಿತಗೊಳಿಸುವ ವಿಶೇಷ ಅಧಿಕಾರವನ್ನು ಕೊಟ್ಟಿತು. ಸದ್ರಿ ಅಧಿನಿಯಮವನ್ನು ತೆಲಂಗಾಣ ಉಚ್ಚ ನ್ಯಾಯಾಲಯದಲ್ಲಿ `ಶ್ರೀಕಾಂತ ಬೋಳ ಎನ್ನುವವರು ತಾವು ವಾಸಿಸುತ್ತಿದ್ದ ಮಿಲೇನಿಯಂ ಸೆಂಟರ್ ಅಪಾರ್ಟ್ಮೆಂಟ್ ಮೇಲೆ ತೆಲಂಗಾಣ ಉಚ್ಚ ನ್ಯಾಯಾಲಯದಲ್ಲಿ ಸದ್ರಿ ಅಧಿನಿಯಮವು ಕಾನೂನು ಬಾಹಿರವೆಂದು ಮತ್ತು ಮೂಲಭೂತ ಸೌಕರ್ಯಗಳು, ಮೂಲಭೂತ ಹಕ್ಕುಗಳು ಎಂದು ಮತ್ತು ಅವುಗಳನ್ನು ಕಾನೂನಡಿಯಲ್ಲಿ ಕಡಿತಗೊಳಿಸಲು ಬರುವುದಿಲ್ಲ ಎಂದು ವಾದಿಸಿದ್ದರು. ಆದರೆ ಸದ್ರಿ ಸದಿ ಪ್ರಕರಣದಲ್ಲಿ ತೆಲಂಗಾಣ ಸರಕಾರವು ಜಾರಿಗೆ ತಂದ ಕಾಯಿದೆಯು ಸರಿಯಾಗಿದೆಯೆಂದು ಮತ್ತು ತಿಂಗಳ ಮಾಸಿಕ ನಿರ್ವಹಣಾ ವೆಚ್ಚವನ್ನು ಬಾಕಿ ಮಾಡಿದ್ದಲ್ಲಿ ಮತ್ತು ಈ ಬಾಬ್ರು ಮೂಲಭೂತ ಸೌಕರ್ಯವನ್ನು ಸಂಘವು ಕಡಿತಗೊಳಿಸಿದಲ್ಲಿ ವ್ಯಕ್ತಿಯ ಮೂಲಭೂತ ಹಕ್ಕನ್ನು ಕಸಿದು ಕೊಂಡಂತಾಗುವುದಿಲ್ಲ ಮತ್ತು ಕೆಲವೊಂದು ಮೂಲಭೂತ ಹಕ್ಕುಗಳು ಸಮಂಜಸವಾದ ನಿರ್ಭಂಧಕ್ಕೆ ಕಾನೂನಡಿಯಲ್ಲಿ ಒಳಪಟ್ಟಿದೆ ಎಂದು ತೆಲಂಗಾಣದ ಉಚ್ಚ ನ್ಯಾಯಾಲಯ ಹೇಳಿರುವ ಅಂಶವನ್ನು ಇಲ್ಲಿ ಗಮನಕ್ಕೆ ತೆಗೆದುಕೊಳ್ಳಬಹುದಾಗಿದೆ. ಅದೇ ರೀತಿ ಸರ್ವೋಚ್ಚ ನ್ಯಾಯಾಲಯವು Special Leave Petition (Criminal Diary No. 40397/2022) ಎಂಬ ಪ್ರಕರಣದಲ್ಲಿ ರವಿ ಕುಮಾರ್ ಎನ್ನುವವರು ಕರ್ನಾಟಕ ಸರಕಾರದ ವಿರುದ್ಧ ಹಾಕಿದ ಪ್ರಕರಣದಲ್ಲಿ ಮಾಸಿಕ ನಿರ್ವಹಣಾ ವೆಚ್ಚವನ್ನು ಅಪಾರ್ಟ್ಮೆಂಟ್ ಮಾಲೀಕರು ಬಾಕಿ ಮಾಡಿದ್ದಲ್ಲಿ ಸಂಘವು ಮೂಲಭೂತ ಸೌಕರ್ಯವನ್ನು ಕಡಿತಗೊಳಿಸಿದ್ದಲ್ಲಿ, ಕಾನೂನಿನಡಿಯಲ್ಲಿ ಸದಿ ಪ್ರಕರಣವು ಕ್ರಿಮಿನಲ್ ಅಪರಾಧವೆನಿಸುವುದಿಲ್ಲವೆಂದು ಹೇಳಿ ರೂಪಾಯಿ 30,000/- ದಂಡವನ್ನು ವಿಧಿಸಿ ಅರ್ಜಿಯನ್ನು ವಜಾ ಮಾಡಿರುವ ವಿಷಯವನ್ನು ಈ ಸಮಯದಲ್ಲಿ ಸ್ಮರಿಸಬಹುದಾಗಿದೆ.
ಒಂದು ವೇಳೆ ಮಾಲೀಕರ ಸಂಘವು ಸರಿಯಾದ ಲೆಕ್ಕಪತ್ರಗಳನ್ನು ಇಟ್ಟುಕೊಳ್ಳದೇ ಅಥವಾ ತಿಂಗಳ ನಿರ್ವಹಣಾ ವೆಚ್ಚವನ್ನು ಕಟ್ಟಿದ್ದರೂ, ಮೂಲಭೂತ ಸೌಕರ್ಯವನ್ನು ಕಡಿತಗೊಳಿಸಿದ್ದಲ್ಲಿ ಸಂಘದ ಮೇಲೆ ಕ್ರಿಮಿನಲ್ ಕೇಸ್ ಹಾಕುವ ಹಕ್ಕನ್ನು ಮಾಲೀಕನಿಗೆ ಕಾಯ್ದಿರಿಸಬೇಕು
ಅಥವಾ ಒಂದು ವೇಳೆ ಅಪಾರ್ಟ್ಮೆಂಟ್ ಮಾಲೀಕ ಸದ್ರಿ ಪ್ರಕರಣಗಳಲ್ಲಿ ಕೋರ್ಟಿಗೆ ದಾವೆ ಹಾಕಿದ್ದಲ್ಲಿ ಆತ ನ್ಯಾಯಾಲಯಕ್ಕೆ ಹೋಗುವ ಮೊದಲು ಆತನ ಯಾವುದೇ ರೀತಿಯ ಹಕ್ಕು ಬಾಧ್ಯತೆಗಳು ನ್ಯಾಯಾಲಯದಲ್ಲಿ ಧಕ್ಕೆಯಾಗದಂತೆ ನಿರ್ವಹಣಾ ವೆಚ್ಚವನ್ನು ಸಂಘಕ್ಕೆ ಪಾವತಿಸಿ ನ್ಯಾಯಾಲಯದಲ್ಲಿ ದಾವೆ ಹೂಡುವ ಹಕ್ಕನ್ನು ಕೊಡಬೇಕು. ಒಂದು ವೇಳೆ ಆತನ ದಾವೆಯು ಸಮಂಜಸವೆಂದು ಕಂಡು ಬಂದಲ್ಲಿ ಸದ್ರಿ ಹಣವನ್ನು ಕೋರ್ಟ್ ವಿಧಿಸುವ ದಂಡ, ಬಡ್ಡಿ, ಖರ್ಚು ಸಮೇತ ಮಾಲೀಕರ ಸಂಘವು ಪಾವತಿ ಮಾಡಲು ಬದ್ಧವಾಗಿರಬೇಕು.
ಸದ್ರಿ ವಿಷಯಗಳಲ್ಲಿ ಕರಡು ಮಸೂದೆಯಲ್ಲಿ ಸದಿ ಮಾಹಿತಿಯನ್ನು ಸರಿಯಾಗಿ ನಮೂದಿಸಬೇಕು. ಸ್ವತಂತ್ರ ನಿರ್ವಹಣೆ ವ್ಯವಸ್ಥೆಯನ್ನು ಮಾಲೀಕರ ಸಂಘಕ್ಕೆ ಕೊಟ್ಟಾಗ ಮಾತ್ರ ಸಂಘದ ನಿರ್ವಹಣೆ ಮತ್ತು ಸಂಘವು ಬಲಿಷ್ಟವಾಗಿ ರೂಪುಗೊಳ್ಳುವುದು. ಆದರೆ ಕರಡು ಮಸೂದೆಯಲ್ಲಿ ಸಂಘಕ್ಕೆ ಕೊಟ್ಟಿರುವ ಅಧಿಕಾರ ವ್ಯಾಪ್ತಿಗಳು ಬಲಹೀನವಾಗಿದ್ದು, ಎಲ್ಲಾ ಅಧಿಕಾರಗಳು ಸಕ್ಷಮ ಪ್ರಾಧೀಕಾರಕ್ಕೆ ಒಳಪಡುವುದರಿಂದ ಸಂಘಕ್ಕೆ ಆಡಳಿತಾತ್ಮಕ ಕಷ್ಟಗಳು ಎದುರುಗೊಳ್ಳಬಹುದು ಮತ್ತು ಸಂಘದ ಹಣವನ್ನು ಮಾಸಿಕ ನಿರ್ವಹಣಾ ವೆಚ್ಚವನ್ನು ವಸೂಲು ಮಾಡಲು ಸಕ್ಷಮ ಪ್ರಾಧೀಕಾರಕ್ಕೆ ಅಥವಾ ಕೋರ್ಟ್ ಕಚೇರಿಗಳಿಗೆ ಖರ್ಚು ಮಾಡಬೇಕಾಗಬಹುದು ಮತ್ತು ಇದು ಸಂಘದ ನೈತಿಕ ಬಲವನ್ನು ಕುಗ್ಗಿಸಬಹುದು.
ಕರ್ನಾಟಕದ ಅಪಾರ್ಟ್ಮೆಂಟ್ ಕರಡು ಮಸೂದೆಯನ್ನು ಸಕ್ಷಮ ಪ್ರಾಧಿಕಾರ, ರೇರಾ ಕಾಯಿದೆ, ಸಹಕಾರ ಸಂಘಗಳ ಕಾಯಿದೆಗಳಿಂದ ಹೊರತು ಪಡಿಸಿ ಸಿವಿಲ್ ಅಥವಾ ಗ್ರಾಹಕರ ನ್ಯಾಯಾಲಯಕ್ಕೆ ಮಾತ್ರ ಅಧಿಕಾರ ಕೊಟ್ಟಲ್ಲಿ ಕರಡು ಮಸೂದೆ ಕಾರ್ಯಗತಗೊಳ್ಳಬಹುದು. ಒಂದು ವೇಳೆ ಸಕ್ಷಮ ಪ್ರಾಧಿಕಾರವೇ ಬೇಕೆಂದಾದಲ್ಲಿ ನ್ಯಾಯಾಂಗದ ನ್ಯಾಯಾಧೀಶರನ್ನ ಸಕ್ಷಮ ಪ್ರಾಧೀಕಾರದಲ್ಲಿ ಸಕ್ಷಮ ಅಧಿಕಾರಿಯಾಗಿ ನೇಮಿಸಿಕೊಳ್ಳಬೇಕು, ಇಲ್ಲವಾದಲ್ಲಿ ಸರಿಯಾಗಿ ಅಡಿಪಾಯ ಹಾಕದೆ ಕಟ್ಟಿದ ಕಟ್ಟಡವಾಗಿ ಕರಡು ಮಸೂದೆ ಖಾಯಂ ಮಸೂದೆಯಾಗಿ ಹೊರಹೊಮ್ಮಬಹುದು, ಇದರಿಂದ ಅನಾನುಕೂಲವಾಗಬಹುದು.
ಒಟ್ಟಿನಲ್ಲಿ ಈ ಕರಡು ಮಸೂದೆ ಒಂದು ಮಿಶ್ರ ಪರಿಣಾಮಕರವಾಗಿದ್ದು, ಅದು ಸಮರ್ಪಕವಾಗಿ ಜಾರಿಗೆ ಬರಬೇಕಾದರೆ ಸಕ್ಷಮ ಪ್ರಾಧಿಕಾರವನ್ನು ಬಿಟ್ಟು ಸಿವಿಲ್ ನ್ಯಾಯಾಲಯಗಳ ಅಧಿಕಾರ ಅಥವಾ ನ್ಯಾಯಲಯದ ವ್ಯಾಪ್ತಿಗೆ ಬರುವುದೇ ಸೂಕ್ತವಾಗಿರುತ್ತದೆ.
