ಬದುಕಿಗೆ ಕೃತಜ್ಞರಾಗಿರೋಣ – Article by Anjali Srinivas

ಹೆಣ್ಣಿನ ಜೀವನ ಅಂದರೆ ನಿರಂತರ ಸವಾಲುಗಳ ಸರಪಳಿ. ಪ್ರತಿ ಹಂತದಲ್ಲೂ ಹೊಸತನ, ಹೊಸ ಜವಾಬ್ದಾರಿ, ಹೊಸ ಸಂಬಂಧ. ಮಗಳಾಗಿ, ಹೆಂಡತಿಯಾಗಿ, ತಾಯಿಯಾಗಿ, ಮನೆಯ ಸ್ತಂಭವಾಗಿ… ಎಲ್ಲಾ ಪಾತ್ರವನ್ನೂ ಒಂದೇ ಕೈಯಲ್ಲಿ ಸಂಭಾಳಿಸುವುದು ಆಕೆಗೆ ಸಹಜವಾದರೂ, ಅದು ನಿಜಕ್ಕೂ ಒಂದು ಸವಾಲು. ಆ ಸವಾಲುಗಳನ್ನೇ ನಾವು ಕೆಲವೊಮ್ಮೆ “ಕಷ್ಟ” ಎಂದುಕೊಂಡು ಕುಗ್ಗಿ ಹೋಗುತ್ತೇವೆ.

ನಾವು ಒಂದು ತಪ್ಪು ಮಾಡ್ತೀವಿ. ನಮಗೆ ಸಿಕ್ಕಿರುವುದಕ್ಕೆ ಕೃತಜ್ಞರಾಗಿರುವುದಿಲ್ಲ. ಯಾವಾಗಲೂ ನಮಗಿಂತ ಉಚ್ಚ ಸ್ಥಾನದಲ್ಲಿರುವವರನ್ನು ನೋಡಿ “ಆ ಬದುಕು ನಮಗಿಲ್ಲವಲ್ಲ” ಎಂದು ಬೇಸರ ಪಡುತ್ತೇವೆ.

ಗರ್ಭಾವಸ್ಥೆಯಲ್ಲಿ ನಮಗೆ ಕೆಲಸ ಮಾಡೋಕೆ ಆಗಲ್ಲ, “ಬದುಕಲ್ಲಿ ಬ್ರೇಕ್ ಬೇಕು” ಅಂತ ಅನಿಸುತ್ತೆ. ಆದ್ರೆ ಒಬ್ಬ ತುಂಬು ಗರ್ಭಿಣಿ ಇದ್ದಾಳೆ. ಗಂಡನಿಗೆ ಆಕ್ಸಿಡೆಂಟ್ ಆಗಿ ಕಾಲು ಸ್ವಾಧೀನ ಕಳೆದುಕೊಂಡು ಅವನು ಮನೆಯಲ್ಲಿದ್ದಾನೆ. ಆಕೆ ಬಡತನದ ಬೆಂಕಿಯಲ್ಲಿ ಬೇಯುತ್ತಾ, ಮನೆಗೆಲಸ ಮಾಡಿ, ಸ್ಮಶಾನದಲ್ಲಿ ಶವ ಸುಟ್ಟು ಉಳಿದ ಕಟ್ಟಿಗೆಗಳನ್ನು ಆರಿಸಿ ತಂದು ಒಲೆ ಹಚ್ಚಿ ಮಕ್ಕಳ ಹೊಟ್ಟೆ ತುಂಬಿಸುತ್ತಾಳೆ. ಅಂತ ತುಂಬು ಗರ್ಭಿಣಿಯ ಕಷ್ಟ ಯಾರಿಗೂ ಬೇಡ.

ನನ್ನ ಸ್ನೇಹಿತೆ ಒಬ್ಬಳು UKG ಮಗುವಿನ ತಾಯಿ. “ಮಗ ಇನ್ನು ಸರಿಯಾಗಿ ಪೆನ್ಸಿಲ್ ಹಿಡಿಯೋಕೆ ಬರ್ತಿಲ್ಲ” ಅಂತ ಚಿಂತೆ ಮಾಡ್ತಾಳೆ.

ಆದರೆ ಅದೇ ದಿನ ಅಲ್ಲೊಬ್ಬ ತಾಯಿಯನ್ನು ನೋಡಿದೆವು. 16 ವರ್ಷದ ಕೈಯಿಲ್ಲದ ಬುದ್ಧಿಮಾಂದ್ಯ ಮಗನನ್ನು ಅವಳು ಪ್ರತಿದಿನ ಕಂಕುಳಲ್ಲಿ ಕೂರಿಸಿಕೊಂಡು ಗುರುಕುಲಕ್ಕೆ ಕರೆತರುತ್ತಾಳೆ. ಅವನು 2 ರ ಮಗ್ಗಿ ಹೇಳಿದ್ದಕ್ಕೆ ಆನಂದ ಭಾಷ್ಪ ಸುರಿಸುತ್ತಾ ಚಪ್ಪಾಳೆ ತಟ್ಟುತ್ತಾಳೆ.

ಹಾಕೋಕೆ ಚಪ್ಪಲಿ ಇಲ್ಲ ಎಂದು ಅಳುವವರೇ ಹಲವರು. ಕಾಲಿಲ್ಲದವರ ಗೋಳು ಕೇಳುವವರಾರು?

ಅವರಿಂತ ಕಷ್ಟ ನಮಗಿಲ್ಲ. ನಾವು ನಿಂತಿರುವ ಜಾಗ, ನಮ್ಮ ಆರೋಗ್ಯ, ನಮ್ಮ ಕೈ-ಕಾಲು, ನಮ್ಮ ಬುದ್ಧಿ… ಎಲ್ಲವೂ ದೇವರು ಕೊಟ್ಟ ವರ.

ಆದ್ದರಿಂದ ನಾವು ನಮ್ಮ ಬದುಕಿಗೆ ಕೃತಜ್ಞರಾಗೋಣ. ಹೋಲಿಕೆ ಬಿಟ್ಟು, ಇರುವುದರಲ್ಲಿ ಸಂತೋಷ ಕಾಣೋಣ. ಯಾಕಂದ್ರೆ ನಾವು ಪಡುವ ಪ್ರತಿ ಕಷ್ಟದ ಹಿಂದೆಯೂ ನಮ್ಮನ್ನ ಬಲಿಷ್ಠ ಮಾಡೋ ಪಾಠ ಇರುತ್ತೆ.

ಅಂಜಲಿ ಶ್ರೀನಿವಾಸ್ ಖಟವಟೆ, ಹುಬ್ಬಳ್ಳಿ

Leave a Reply

Your email address will not be published. Required fields are marked *