ಮಂಗಳೂರು ಆಟೋರಿಕ್ಷಾ ಚಾಲಕ ಮತ್ತು ಕಾರು ಚಾಲಕ ಸಹಕಾರಿ ಸಂಘ ನಿಯಮಿತ ಇದರ ಅಧ್ಯಕ್ಷರಾದ ಐವನ್ ಡಿʼಸೋಜಾರವರ ನೇತೃತ್ವದಲ್ಲಿ ಮಂಗಳೂರಿನ ಮಹಾಜನತೆಗೆ ಹಾಗೂ ರಿಕ್ಷಾ ಚಾಲಕರಿಗಾಗಿ ಉಚಿತವಾಗಿ ಬಿ.ಪಿ. ಮತ್ತು ಶುಗರ್ (ರಕ್ತದೊತ್ತಡ ಮತ್ತು ಮಧುಮೇಹ) ಮತ್ತು ಹಿಮೋಗ್ಲೋಬಿನ್ ತಪಾಸಣೆ ಮಾಡಿ ಅಲ್ಲಿಯೇ ಕಾರ್ಡ್‌ಗಳನ್ನು ನೀಡಿ ಮುಂದಕ್ಕೂ ನಿಯತಕಾಲಿಕವಾಗಿ ತಪಾಸಣೆ ಮಾಡಲು ಎಜೆ ಆಸ್ಪತ್ರೆ ಮಹಾವಿದ್ಯಾಲಯ ಡಾ| ಕವಿತಾ ಡಿʼಸೋಜಾ ಇವರ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಕವಿತಾ ಡಿʼಸೋಜಾರವರು, ರಕ್ತದೊತ್ತಡ ಮತ್ತು ಮಧುಮೇಹವನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿ ನಿಯಂತ್ರಣದಲ್ಲಿಟ್ಟುಕೊಳ್ಳುವುದರಿಂದ ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು. ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವುದರ ಜೊತೆಗೆ ಜೀವನಶೈಲಿಯಲ್ಲಿಯೂ ಅಗತ್ಯ ನಿಯಂತ್ರಣವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಐವನ್ ಡಿʼಸೋಜಾರವರು, ಡಾ. ಕವಿತಾ ಡಿʼಸೋಜಾರವರ ನೇತೃತ್ವದಲ್ಲಿ ಸುಮಾರು 100ಕ್ಕೂ ಹೆಚ್ಚು ಆರೋಗ್ಯ ಶಿಬಿರಗಳನ್ನು ಆಯೋಜಿಸಿ, ಅನೇಕ ಉಚಿತ ಶಸ್ತ್ರಚಿಕಿತ್ಸೆಗಳನ್ನು ನಡೆಸುವ ಮೂಲಕ ಹಲವಾರು ಜನರ ಆರೋಗ್ಯ ರಕ್ಷಣೆಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎ.ಜೆ. ಆಸ್ಪತ್ರೆ ಮತ್ತು ವೈದ್ಯಕೀಯ ಮಹಾವಿದ್ಯಾಲಯದ ವೈದ್ಯರಾದ ಡಾ. ಬಿಂದು ಹಾಗೂ ಕಾರ್ಯಕ್ರಮದ ಸಂಯೋಜಕರಾದ ಜಯರಾಮ್ ಅವರು ಆರೋಗ್ಯದ ಕುರಿತು ಸಲಹೆ ಮತ್ತು ಸೂಚನೆಗಳನ್ನು ನೀಡಿದರು. ವಸಂತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಉಪಾಧ್ಯಕ್ಷರಾದ ಸಿರಿಲ್ ಡಿಸೋಜಾ ಡೈರೆಕ್ಟರ್‌ಗಳಾದ ಭಾಸ್ಕರ್ ರಾವ್, ಬಬಿತಾ ಡಿಸೋಜಾ, ಜೇಮ್ಸ್ ಮಾಡ್ತಾ, ವಸಂತ್ ಶೆಟ್ಟಿ ಶೇಖರ್ ಹಾಗೂ ವಿದ್ಯಾ ತೋರಸ್ ಅವರು ಉಪಸ್ಥಿತರಿದ್ದರು.
