ಮೂಡುಬಿದಿರೆಯ 18 ಬಸದಿಗಳಲ್ಲಿ ನಾಗಪಂಚಮಿ ಆಚರಣೆ: ನಾಗದೇವರಿಗೆ ವಿಶೇಷ ಪೂಜೆ

ಮೂಡುಬಿದಿರೆ, ಆ. 17: ಜೈನಕಾಶಿ ಮೂಡುಬಿದಿರೆಯ ಎಲ್ಲಾ 18 ಬಸದಿಗಳಲ್ಲಿ ಇಂದು, ಸೋಮವಾರ ನಾಗಪಂಚಮಿ ಅಂಗವಾಗಿ ಬಸದಿ ಮೂಲ ಸ್ವಾಮಿಗೆ ವಿಶೇಷ ಅಭಿಷೇಕ ನೆರವೇರಿಸಲಾಯಿತು. ಆಯಾ ಬಸದಿಗಳಿಗೆ ಸಂಬಂಧಪಟ್ಟ ಭಕ್ತರು ನಾಗಬನಕ್ಕೆ ತೆರಳಿ ಹಾಲು, ಹಣ್ಣು, ಕಾಯಿ ಸಮರ್ಪಿಸಿ ನಾಗದೇವರಿಗೆ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗುರು ಬಸದಿಯಲ್ಲಿ ಉಪಸ್ಥಿತರಿದ್ದು ಭಕ್ತರಿಗೆ ಆಶೀರ್ವಾದ ನೀಡಿದ ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಪೂಜೆಯಲ್ಲಿ ಭಾಗವಹಿಸಿದ ಸರ್ವರಿಗೂ ಒಳಿತಾಗಲಿ ಹಾಗೂ ಲೋಕಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದರು.

ಜೈನ ಧರ್ಮದಲ್ಲಿ ಪ್ರತಿದಿನದ ನಿತ್ಯಪೂಜೆಯ ಸಂದರ್ಭದಲ್ಲಿ ಪಂಚಕುಮಾರ ಪೂಜೆ ಹಾಗೂ ಶ್ರೀ ಜಿನೇಂದ್ರ ಭಗವಂತನ ಪೂಜೆಗೆ ಮೊದಲು ನಡೆಯುವ ಸಂಧ್ಯಾವಂದನೆ ವಿಧಿಯಲ್ಲಿ ನಾಗದೇವರಿಗೆ ಉಪಚಾರ ಪೂಜೆ ಸಲ್ಲಿಸುವ ಪದ್ಧತಿ ಇದೆ. ಅಲ್ಲದೆ, ಕಲಶ ಸ್ಥಾಪನೆ ಮತ್ತು ಪುಣ್ಯಾಹವಾಚನದ ಸಂದರ್ಭದಲ್ಲಿ ‘ನಾಗ ಮಂತ್ರ’ಗಳನ್ನು ಉಚ್ಚರಿಸಿ ನಾಗದೇವರನ್ನು ಸ್ಮರಿಸಲಾಗುತ್ತದೆ.

ಜೈನ ಧರ್ಮದಲ್ಲಿ ನಾಗಪೂಜೆ ಹಾಗೂ ನಾಗಾರಾಧನೆಗೆ ಪ್ರಾಚೀನ ಇತಿಹಾಸವಿದ್ದು, ಚತುರ್ಥ ಕಾಲದ ಪ್ರಥಮ ತೀರ್ಥಂಕರರಾದ ಭಗವಾನ್ ಆದಿನಾಥರ ಕಾಲದಿಂದಲೂ ಈ ಆರಾಧನಾ ಪರಂಪರೆ ನಡೆದುಕೊಂಡು ಬಂದಿದೆ ಎಂದು ಸ್ವಾಮೀಜಿ ತಿಳಿಸಿದರು.

ನಾಗಪೂಜೆಯಲ್ಲಿ ಅಷ್ಟಕುಲನಾಗರು ಪ್ರಮುಖರಾಗಿದ್ದು, ಒಟ್ಟು ಅರುವತ್ತು ಸಾವಿರ ನಾಗಕುಲಗಳನ್ನು ನಿತ್ಯ ಸ್ಮರಿಸಿ ಅರ್ಘ್ಯ ಸಮರ್ಪಿಸಲಾಗುತ್ತದೆ. 23ನೇ ತೀರ್ಥಂಕರರಾದ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಯ ಯಕ್ಷರಾದ ಧರಣೇಂದ್ರ ದೇವರು ಹಾಗೂ ಪದ್ಮಾವತಿ ದೇವಿಯವರು ಭವನವಾಸಿ ದೇವತೆಗಳಾಗಿದ್ದು, ಜಿನಶಾಸನ ರಕ್ಷಣಾ ದೇವರುಗಳೆಂದು ಜೈನ ಪರಂಪರೆಯಲ್ಲಿ ಆರಾಧಿಸಲಾಗುತ್ತದೆ. ಇವರನ್ನು ಉಪಚಾರ, ವಿನಯ ಮತ್ತು ಕೃತಜ್ಞತಾಪೂರ್ವಕ ಭಕ್ತಿಯಿಂದ ಪೂಜಿಸಲಾಗುತ್ತದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ದರ ಸೇನ, ನೇಮಿ ರಾಜ್, ವೀರೇಂದ್ರ, ಅಭಯ ಕುಮಾರ್, ಪಾರ್ಶ್ವನಾಥ, ವೃಂದಾ ರಾಜೇಂದ್ರ ಅರಮನೆ, ಶ್ರೀಮತಿ ಮಂಜುಳಾ ಅಭಯ ಚಂದ್ರ, ಶ್ರೀಮತಿ ಸುಧಾ, ಶ್ರೀಮತಿ ದಿವ್ಯಾ ಹಾಗೂ ಆರತಿ ಉಪಸ್ಥಿತರಿದ್ದರು.

ಗುರು ಬಸದಿಯಲ್ಲಿ ವಿರಾಜ್ ಇಂದ್ರ ಹಾಗೂ ಸಾವಿರ ಕಂಬ ಬಸದಿಯಲ್ಲಿ ಜಗತ್ಪಾಲ ಇಂದ್ರ ಅವರು ಪೂಜಾ ವಿಧಿಗಳನ್ನು ನೆರವೇರಿಸಿದರು.

Leave a Reply

Your email address will not be published. Required fields are marked *