ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪ.ಪೂ ಕಾಲೇಜಿನಲ್ಲಿ ಆಟಿ ಸಂಭ್ರಮ

ಮಡಂತ್ಯಾರು: ತುಳುನಾಡಿನ ವಿಶಿಷ್ಟ ಸಂಸ್ಕೃತಿ, ಪರಂಪರೆ, ಆಹಾರ ಪದ್ಧತಿ ಹಾಗೂ ಜನಜೀವನದ ಸೊಗಡನ್ನು ಪರಿಚಯಿಸುವ ಉದ್ದೇಶದಿಂದ ಸೇಕ್ರೆಡ್ ಹಾರ್ಟ್ ಪದವಿಪೂರ್ವ ಕಾಲೇಜು, ಮಡಂತ್ಯಾರು ಇಲ್ಲಿನ ಪರಿಸರ ಸಂಘ ಹಾಗೂ ಸಾಹಿತ್ಯ ಸಂಘದ ಸಹಯೋಗದಲ್ಲಿ ‘ಆಟಿ ಸಂಭ್ರಮ’ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸೈಂಟ್ ಜಾರ್ಜ್ ಪದವಿಪೂರ್ವ ಕಾಲೇಜು, ನೆಲ್ಯಾಡಿಯ ಇತಿಹಾಸ ಉಪನ್ಯಾಸಕ ವಿಶ್ವನಾಥ ಕೆ. ಶೆಟ್ಟಿ ಭಾಗವಹಿಸಿ, ಆಟಿ ತಿಂಗಳ ವೈಶಿಷ್ಟ್ಯ, ತುಳುನಾಡಿನ ಜನಪದ ಸಂಸ್ಕೃತಿ ಹಾಗೂ ಹಿರಿಯರು ಉಳಿಸಿಕೊಂಡು ಬಂದಿರುವ ಸಾಂಪ್ರದಾಯಿಕ ಆಚರಣೆಗಳ ಮಹತ್ವವನ್ನು ವಿವರಿಸಿದರು. ಆಧುನಿಕ ಜೀವನಶೈಲಿಯ ನಡುವೆ ನಮ್ಮ ನೆಲದ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಸಂರಕ್ಷಿಸುವ ಜವಾಬ್ದಾರಿ ಯುವಜನರ ಮೇಲಿದೆ ಎಂದು ಅವರು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಸೂರಜ್ ಚಾರ್ಲ್ಸ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು, ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಪಠ್ಯಜ್ಞಾನದ ಜೊತೆಗೆ ನಮ್ಮ ನಾಡಿನ ಇತಿಹಾಸ, ಸಂಸ್ಕೃತಿ ಮತ್ತು ಜೀವನಮೌಲ್ಯಗಳ ಪರಿಚಯವನ್ನು ನೀಡುತ್ತವೆ. ನಮ್ಮ ಮಣ್ಣಿನ ಬೇರುಗಳನ್ನು ಅರಿತುಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಜವಾಬ್ದಾರಿ ಬೆಳೆಸಬಹುದು ಎಂದರು.
ಸಾಹಿತ್ಯ ಸಂಘದ ನಿರ್ದೇಶಕ ವಸಂತ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಪಲ್ಲವಿ ವಂದಿಲಸಿದರು, ಆರಿಫಾ ಬಾನು ಕಾರ್ಯಕ್ರಮವನ್ನು ನಿರ್ವಹಿಸಿದರು.

ಆಟಿ ಸಂಭ್ರಮದ ವಿಶೇಷ ಆಕರ್ಷಣೆಯಾಗಿ ವಿಶ್ವನಾಥ ಕೆ. ಶೆಟ್ಟಿ ಹಾಗೂ ಅವರ ಪುತ್ರಿ ಸಾಯಿ ಧೃತಿ ಶೆಟ್ಟಿ ಅವರು ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ತುಳುನಾಡಿನ ಪರಂಪರೆಯ ಸೊಗಡು, ಸಾಹಿತ್ಯದ ಕಂಪು, ಸಂಗೀತದ ಮಾಧುರ್ಯ ಹಾಗೂ ಪರಿಸರ ಪ್ರಜ್ಞೆಯನ್ನು ಒಂದೇ ವೇದಿಕೆಯಲ್ಲಿ ಬೆಸೆದ ಈ ಆಟಿ ಸಂಭ್ರಮವು ವಿದ್ಯಾರ್ಥಿಗಳಲ್ಲಿ ತಮ್ಮ ನೆಲ, ನುಡಿ ಮತ್ತು ಸಂಸ್ಕೃತಿಯ ಬಗ್ಗೆ ಹೆಮ್ಮೆ ಮೂಡಿಸುವ ಅರ್ಥಪೂರ್ಣ ಕಾರ್ಯಕ್ರಮವಾಗಿ ಮೂಡಿಬಂತು.

Leave a Reply

Your email address will not be published. Required fields are marked *