ಜೆರೊಸಾ ಸ್ಕೂಲ್‌ನಿಂದ ರೋಷನಿ ನಿಲಯದವರೆಗೆ ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ವೀಕ್ಷಣೆ: ಹೆಚ್ಚುವರಿ ಅನುದಾನ ಬಿಡುಗಡೆಗೆ ಐವನ್ ಡಿʼಸೋಜಾ ಒತ್ತಾಯ

ಮಂಗಳೂರು: ಮಹಾತ್ಮಾ ಗಾಂಧಿ ವಿಕಾಸ ಯೋಜನೆ–2ರ ಅಡಿಯಲ್ಲಿ ಜೆರೊಸಾ ಸ್ಕೂಲ್‌ನಿಂದ ರೋಷನಿ ನಿಲಯದವರೆಗೆ ನಡೆಯುತ್ತಿರುವ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಯನ್ನು ವಿಧಾನ ಪರಿಷತ್ ಸದಸ್ಯರಾದ ಐವನ್ ಡಿʼಸೋಜಾ ಅವರು ಸ್ಥಳೀಯರು, ಇಂಜಿನಿಯರ್‌ಗಳು ಹಾಗೂ ಕಾರ್ಪೊರೇಟರ್‌ಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಪ್ರಸ್ತುತ ಕಾಮಗಾರಿಯ ಸುಮಾರು 50ರಿಂದ 60ರಷ್ಟು ಕೆಲಸ ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವ ಕುರಿತು ಸ್ಥಳದಲ್ಲೇ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು. ಕಾಮಗಾರಿ ಸಂದರ್ಭದಲ್ಲಿ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಗಳು ಹಾಗೂ ಕೈಗೊಳ್ಳಬೇಕಾದ ಹೆಚ್ಚುವರಿ ಕಾಮಗಾರಿಗಳ ಕುರಿತು ಸ್ಥಳೀಯರಿಂದ ಮಾಹಿತಿ ಪಡೆಯಲಾಯಿತು.ಕಾಮಗಾರಿಗೆ ಸಂಬಂಧಿಸಿದ ಕಾನೂನು ಹಾಗೂ ತಾಂತ್ರಿಕ ಅಂಶಗಳ ಬಗ್ಗೆಯೂ ಇಂಜಿನಿಯರ್ ಅಶೋಕ್ ಮೆಂಡೋನ್ಸಾ ಅವರೊಂದಿಗೆ ಚರ್ಚಿಸಿ, ಮುಂದಿನ ಹಂತದ ಕಾಮಗಾರಿಯನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ಸಲಹೆ ನೀಡಲಾಯಿತು.

ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ತುಂಬಿಸುವ ಬದಲು ಅಗತ್ಯವಿರುವ ಕಡೆಗಳಲ್ಲಿ ಹೆಚ್ಚುವರಿ ಕಾಂಕ್ರೀಟೀಕರಣ ಅಥವಾ ಇಂಟರ್‌ಲಾಕ್ ಅಳವಡಿಸುವಂತೆ ಐವನ್ ಡಿʼಸೋಜಾ ಅವರು ಸಲಹೆ ನೀಡಿದರು. ಅಲ್ಲದೆ, ಬಾಕಿ ಇರುವ ಕಾಮಗಾರಿಯನ್ನು ಪೂರ್ಣಗೊಳಿಸಲು ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಬೂತ್ ಅಧ್ಯಕ್ಷರಾದ ಅನಿಲ್ ಜೆರಾಲ್ಡ್ ಲೋಬೋ, ಎಂಜಿನಿಯರ್ ಅಶೋಕ್ ಮೆಂಡೋನ್ಸಾ, ಜೆರೋಸಾ ಶಾಲೆಯ ವ್ಯವಸ್ಥಾಪಕರಾದ ಸಿಸ್ಟರ್ ಅರ್ಪಿತಾ, ಮಂಗಳೂರು ನಗರಪಾಲಿಕೆಯ ಎಂಜಿನಿಯರ್ ಶಿವಲಿಂಗಪ್ಪ, ಸಯೀದಾ, ಸ್ಥಳೀಯರಾದ ಸಿಸಿಲಿಯಾ ಮೊಂತೆರೋ, ಶಾಲೆಟ್ ನೊರೊನ್ಹಾ, ಹಬೀಬ್ ಹಾಗೂ ಗುತ್ತಿಗೆದಾರರಾದ ಇಕ್ಬಾಲ್ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *