ಡಾ. ಶಿವರಾಮ ಕಾರಂತರು ಕನ್ನಡ ಸಾಹಿತ್ಯ ಮಾತ್ರವಲ್ಲ ಭಾರತೀಯ ಸಾಹಿತ್ಯದಲ್ಲಿ ಮಹತ್ವದ ಹೆಸರು. ಸ್ವಾತಂತ್ರ್ಯ ಪೂರ್ವದಲ್ಲಿ ತಮ್ಮ ಕೃತಿಗಳ ಮೂಲಕ ಶೋಷಣೆ, ಕಂದಾಚಾರ, ಅಸಮಾನತೆ, ದಬ್ಬಾಳಿಕೆ ಇತ್ಯಾದಿಗಳನ್ನು ವಿಮರ್ಶಿಸಿದ್ದಾರೆ. ವೈಚಾರಿಕ ಮತ್ತು ವೈಜ್ಞಾನಿಕ ದೃಷ್ಟಿಕೋನ ಅವರ ಸಾಹಿತ್ಯದ ಮುಖ್ಯ ಲಕ್ಷಣವಾಗಿದೆ. ಈ ದೃಷ್ಟಿಯಿಂದ ರಾಷ್ಟ್ರಮಟ್ಟದಲ್ಲಿ ಡಾ.ಕಾರಂತರು ಕರಾವಳಿಯ ಬದುಕು ಮತ್ತು ಸಂಸ್ಕೃತಿಯನ್ನು ಬಿಂಬಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ದೃಷ್ಟಿಯಿಂದ ಅವರ ಬದುಕು-ಬರಹಗಳ ಬಗ್ಗೆ ಇಂದಿನ ಪೀಳಿಗೆಗೆ ಅರಿವು ಮೂಡಿಸುವುದು ಅತಿಅಗತ್ಯ ಇದಕ್ಕಾಗಿ ಕರ್ನಾಟಕ ಸರಕಾರವು 2002ರಲ್ಲಿ ಡಾ.ಶಿವರಾಮ ಕಾರಂತ ಟ್ರಸ್ಟನ್ನು ಸ್ಥಾಪಿಸಿದೆ.

2024 ಡಿಸೆಂಬರ್ ನಲ್ಲಿ ಡಾ.ಗಣನಾಥ ಶೆಟ್ಟಿ ಎಕ್ಕಾರು ಅವರ ಅಧ್ಯಕ್ಷತೆಯಲ್ಲಿ ಹೊಸ ಸಮಿತಿ ಅಸ್ಥಿತ್ವಕ್ಕೆ ಬಂದಿದೆ. ಕಳೆದ ಒಂದೂವರೆ ವರ್ಷದಲ್ಲಿ ಸುಮಾರು 75 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಅರಿವಿನ ಬೆಳಕು, ಮಕ್ಕಳಿಗಾಗಿ ಕಾರಂತರು, ತರಬೇತಿ ಶಿಬಿರಗಳು, ರಾಷ್ಟ್ರೀಯ ವಿಚಾರ ಸಂಕಿರಣ, ರಂಗಪ್ರದರ್ಶನಗಳನ್ನು ನಡೆಸಲಾಗಿದೆ. ಕೇವಲ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಗೆ ಮಾತ್ರ ಸೀಮಿತವಾಗಿರದೆ ಕರ್ನಾಟಕ ಮಟ್ಟದಲ್ಲಿ ಕಾರ್ಯಕ್ರಮವನ್ನು ರೂಪಿಸುವ ಪ್ರಯತ್ನ ಟ್ರಸ್ಟ್ ಮಾಡುತ್ತಿದೆ. ಈಗಾಗಲೇ ಹಾವೇರಿ, ಕೊಪ್ಪಳ ಮತ್ತು ಬೆಂಗಳೂರಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ನಡೆದಿದೆ.
ಕಾರಂತ ಜನ್ಮ ದಿನಾಚರಣೆಯ ಪ್ರಯುಕ್ತ ಡಾ.ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅಕ್ಟೋಬರ್ 24 ರಂದು ಸಂಜೆ 04 ಗಂಟೆಗೆ ಕುಂದಾಪುರದ ಡಾ.ಬಿ.ಬಿ ಹೆಗ್ಡೆ ಪ್ರಥಮದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ. ಉಡುಪಿ ಚಿಕ್ಕಮಗಳೂರು ಲೋಕಸಭಾಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡದ ಹಿರಿಯ ವಿದ್ವಾಂಸರು ಸಂಸ್ಕೃತಿ ಚಿಂತಕರಾದ ಪ್ರೊ.ಬರಗೂರು ರಾಮಚಂದ್ರಪ್ಪ ಇವರಿಗೆ ಡಾ.ಶಿವರಾಮ ಕಾರಂತ ಪ್ರಶಸ್ತಿಯನ್ನು ಮಾನ್ಯ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಡಾ.ಕೆ.ಎಂ ವಸುಂಧರಾ, ಕೆ.ಎಂ.ಎಸ್ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು ರೂ.25,000/- ಪ್ರಶಸ್ತಿ ಮೊತ್ತ, ಪ್ರಶಸ್ತಿ ಪತ್ರ, ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಇದೇ ಸಂದರ್ಭದಲ್ಲಿ ಖ್ಯಾತ ಮನೋವೈದ್ಯ, ಲೇಖಕ ಮತ್ತು ಸಾಮಾಜಿಕ ಹೋರಾಟಗಾರ ಡಾ.ಪಿ.ವಿ ಭಂಡಾರಿ, ಸಮಾಜ ಸೇವಕ ಗಣೇಶ್ಕೊರಗ ಕುಂಭಾಶಿ, ನಿವೃತ್ತ ಪ್ರಾಧ್ಯಾಪಕಿ ಮತ್ತು ಲೇಖಕಿಯು ಮಹೇಶ್ವರಿ ಕಾಸರಗೋಡು, ಪತ್ರಕರ್ತ ಜಾನ್ ಡಿಸೋಜ ಕುಂದಾಪುರ ಹಾಗೂ ಖ್ಯಾತ ರಂಗತಜ್ಞ ಡಾ.ಶ್ರೀಪಾದ್ ಭಟ್ ಅವರಿಗೆ ಕಾರಂತ ವಿಶೇಷ ಪುರಸ್ಕಾರ ನೀಡಲಾಗುವುದು. ಮಂಗಳೂರು ವಿಶ್ವವಿದ್ಯಾನಿಲಯದ ಎಸ್ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಡಾ.ಧನಂಜಯ ಕುಂಬ್ಳೆ, ಚಿಂತಕಿ ರೇಖಾ ಬನ್ನಾಡಿ, ಕಾರ್ಕಳ ಕರಾವಳಿ ರಂಗಾಯಣ ನಿರ್ದೇಶಕ ವೆಂಕಟರಮಣಐತಾಳ ಇವರ ಸಮಿತಿಯು ಈ ಆಯ್ಕೆ ನಡೆಸಿದೆ.
ಮಾಜಿ ಸಚಿವಜಯ ಪ್ರಕಾಶ್ ಹೆಗ್ಡೆ ಟ್ರಸ್ಟಿನ ತ್ರೈಮಾಸಿಕ ಬುಲೆಟಿನ್ ಅನ್ನು ಬಿಡುಗಡೆಗೊಳಿಸಲಿದ್ದಾರೆ. ಮಾಜಿ ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ, ಕುಂದಾಪುರ ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ ಕ್ರಾಸ್ತಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಹೆಚ್ ಹರಿಪ್ರಸಾದ ಶೆಟ್ಟಿ, ಕಾರ್ಕಳ ಕರಾವಳಿ ರಂಗಾಯಣದ ನಿರ್ದೇಶಕ ಡಾ.ಬಿ.ಆರ್ ವೆಂಕಟರಮಣಐತಾಳ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಕುಂದಾಪುರದ ಡಾ.ಬಿ.ಬಿ.ಹೆಗ್ಡೆ ಪ್ರಥಮದರ್ಜೆ ಕಾಲೇಜಿನಲ್ಲಿ ಅಂದು ಬೆಳಿಗ್ಗೆ 10 ರಿಂದ 3 ಗಂಟೆಯ ವರೆಗೆ ಕಾರಂತರ ಕಥನಗಳ ವರ್ತಮಾನದ ಮರುಓದು ವಿಷಯದ ಕುರಿತಾಗಿ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ. ವಿಚಾರ ಸಂಕಿರಣವನ್ನು ಸಾಂಸ್ಕøತಿಕ ಚಿಂತಕ ಮತ್ತು ಹಿರಿಯ ನ್ಯಾಯವಾದಿ ಎ.ಎಸ್.ಎನ್ ಹೆಬ್ಬಾರ್ ಉದ್ಘಾಟಿಸಲಿದ್ದು, ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಬಿ.ಎಂ ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಭಾಗವಹಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಎಸ್ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಡಾ.ಧನಂಜಯ ಕುಂಬ್ಳೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಸಂಪನ್ಮೂಲ ವ್ಯಕ್ತಿಗಳಾಗಿ ಕಾಸರಗೋಡು ಕೇರಳ ಕೇಂದ್ರಿಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪ್ರೊ.ಚೇತನ್ ಮುಂಡಾಜೆ, ವಿಶ್ರಾಂತ ಕನ್ನಡ ಪ್ರಾಧ್ಯಾಪಕಿ ಮತ್ತು ಲೇಖಕಿ ಡಾ.ರೇಖಾ ಬನ್ನಾಡಿ, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಡಾ.ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ಸಹಾಯಕ ಪ್ರಾಧ್ಯಾಪಕ ಡಾ.ಮಲ್ಲಪ್ಪ ಎಸ್ ಬಂಡಿ ಭಾಗವಹಿಸಲಿದ್ದು, ಮಂಗಳೂರು ವಿಶ್ವವಿದ್ಯಾನಿಲಯ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಉಪನ್ಯಾಸಕ ಡಾ. ಯಶುಕುಮಾರ್ ಡಿ, ಕೋಟೇಶ್ವರ, ಸರಕಾರಿ ಪದವಿ-ಪೂರ್ವಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಸುಧಾಕರ್ ದೇವಾಡಿಗ, ವಿಶ್ರಾಂತ ಇಂಗ್ಲೀಷ್ ಪ್ರಾಧ್ಯಾಪಕಿ ಮತ್ತು ಲೇಖಕಿಡಾ. ಪಾರ್ವತಿ ಜಿ. ಐತಾಳ್, ಪ್ರಾಂಶುಪಾಲೆ ಮತ್ತು ಚಿಂತಕಿ ಡಾ.ನಿಕೇತನ, ರಂಗತಜ್ಞ ಡಾ.ಶ್ರೀಪಾದ್ ಭಟ್, ಡಾ.ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಹಾಗೂ ಪ್ರಾಧ್ಯಾಪಕ ಡಾ.ಪ್ರಸಾದ್ರಾವ್ ಪ್ರತಿಕ್ರಿಯೆ ನೀಡಲಿದ್ದಾರೆ.
ಸಂಜೆ 3 ರಿಂದ ಕರಾವಳಿ ರಂಗಾಯಣ ಕಾರ್ಕಳದ ರೆಪರ್ಟರಿ ತಂಡದವರು ಪ್ರಸ್ತುತ ಪಡಿಸುವ ಬಿ.ಆರ್ ವೆಂಕಟರಮಣ ಐತಾಳ ನಿರ್ದೇಶನದ ಕಾರಂತಕಥನ ನಾಟಕ ಪ್ರದರ್ಶನ ನಡೆಯಲಿದೆ. ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನಗಳನ್ನು ವಿತರಿಸಲಾಗುವುದು.
