ಮೂಡುಬಿದಿರೆ ಜೈನ ಮಠಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ಉಷಾರಾಣಿ ಭೇಟಿ

ಮೂಡುಬಿದಿರೆ: ನವರಾತ್ರಿ ಮಹಾನವಮಿಯ ಶುಭ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಶ್ರೀಮತಿ ಉಷಾರಾಣಿ ಅವರು ಅಕ್ಟೋಬರ್ 20, 2026ರಂದು ಬೆಳಿಗ್ಗೆ 10.30ಕ್ಕೆ ಮೂಡುಬಿದಿರೆಯ ಶ್ರೀ ದಿಗಂಬರ ಜೈನ ಮಠಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಅವರು ಭಗವಾನ್ ಪಾರ್ಶ್ವನಾಥ ಸ್ವಾಮಿ ಹಾಗೂ ಮಹಾಮಾತೆ ಪಟ್ಟದ ಕುಲದೇವಿ ಕೂಷ್ಮಾಂಡಿನಿ ದೇವಿಯ ದರ್ಶನ ಪಡೆದು, ಪೂಜೆ ಸಲ್ಲಿಸಿದರು. ಬಳಿಕ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರ ಆಶೀರ್ವಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಸ್ವಸ್ತಿಶ್ರೀ ಸ್ವಾಮೀಜಿಯವರು ನ್ಯಾಯಮೂರ್ತಿ ಉಷಾರಾಣಿ ಅವರಿಗೆ ಶಾಲು ಹೊದಿಸಿ, ಹಾರ ಹಾಗೂ ಸ್ಮರಣಿಕೆಯ ರೂಪದಲ್ಲಿ ಶಾಸ್ತ್ರ ಮತ್ತು ಶ್ರೀಫಲ ನೀಡಿ ಗೌರವಿಸಿ ಆಶೀರ್ವದಿಸಿದರು.

ಬಳಿಕ ಮಾತನಾಡಿದ ನ್ಯಾಯಮೂರ್ತಿ ಉಷಾರಾಣಿ ಅವರು, ಬಾಲ್ಯದಿಂದಲೇ ಶಿಸ್ತಿನ ಜೀವನ ಹಾಗೂ ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ ಮತ್ತು ಸಮ್ಯಕ್ ಚಾರಿತ್ರದ ತತ್ವಗಳು ನ್ಯಾಯಾಂಗದ ಉನ್ನತ ಹುದ್ದೆಯನ್ನು ಅಲಂಕರಿಸಲು ಪ್ರೇರಣೆ ನೀಡಿವೆ ಎಂದು ತಿಳಿಸಿದರು. ನ್ಯಾಯಾಂಗದ ಈ ಪವಿತ್ರ ಸ್ಥಾನಕ್ಕೆ ಗೌರವ ತರುವ ರೀತಿಯಲ್ಲಿ ಕಾರ್ಯನಿರ್ವಹಿಸುವ ಸಂಕಲ್ಪವಿದ್ದು, ಗುರುಹಿರಿಯರ ಆಶೀರ್ವಾದ ಸದಾ ಇರಲಿ ಎಂದು ಆಶಿಸಿದರು.

ರಜೆಯ ಸಂದರ್ಭದಲ್ಲಿ ಕ್ಷೇತ್ರ ದರ್ಶನಕ್ಕೆ ಆಗಮಿಸಿದಾಗಲೆಲ್ಲ ಮನಸ್ಸಿಗೆ ಸಂತೋಷ ಹಾಗೂ ನೆಮ್ಮದಿ ದೊರೆಯುತ್ತದೆ ಎಂದು ಅವರು ತಮ್ಮ ಅನಿಸಿಕೆ ಹಂಚಿಕೊಂಡರು.

ಈ ಸಂದರ್ಭದಲ್ಲಿ ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷ ಶರದ್ ಶೆಟ್ಟಿ, ಹಿರಿಯರಾದ ಕೋಟ್ಯಾನ್ ತಂತ್ರಿ, ಶಾಂತಿಪ್ರಸಾದ್, ಶ್ವೇತಾ ಜೈನ್, ಪದ್ಮಪ್ರಸಾದ್, ಜಯರಾಜ್ ಕಂಬ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಎಂ. ಬಾಹುಬಲಿ ಪ್ರಸಾದ್ ಸ್ವಾಗತಿಸಿದರು.

Leave a Reply

Your email address will not be published. Required fields are marked *