ಕಾರ್ಕಳ: ವಿದ್ಯಾರ್ಥಿಗಳ ಶೈಕ್ಷಣಿಕ ಯಶಸ್ಸಿನ ಹಾದಿಗೆ ಸೂಕ್ತ ಮಾರ್ಗದರ್ಶನ ಮತ್ತು ಸಮಯಪರಿಪಾಲನೆಯ ಉದ್ದೇಶದಿಂದ ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ PCMB ವಿಭಾಗದ ವಿದ್ಯಾರ್ಥಿಗಳ ಶಿಕ್ಷಕ- ಪಾಲಕರ ಸಭೆ ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ಅಕ್ಟೋಬರ್ 26 ರಂದು ನಡೆಯಿತು.


ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಅಶ್ವತ್ ಎಸ್. ಎಲ್. ರವರು ಮಾತುಗಳನ್ನಾಡಿ, ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ತಕ್ಕಂತೆ ಉನ್ನತ ಶಿಕ್ಷಣದ ಆಯ್ಕೆಗಳನ್ನು ಗುರುತಿಸಿಕೊಂಡು ತಮ್ಮ ಗುರಿ ಸಾಧನೆಯತ್ತ ಆತ್ಮವಿಶ್ವಾಸದಿಂದ ಹೆಜ್ಜೆ ಇಟ್ಟು ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು. ಕಾಲೇಜಿನ ಸಹಸಂಸ್ಥಾಪಕರು ಹಾಗೂ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ರವರು, ಇಂದಿನ ಆಧುನಿಕ ಕಾಲಘಟ್ಟದಲ್ಲಿ ಮಕ್ಕಳ ಮನಸ್ಥಿತಿಯ ಬಗ್ಗೆ ನಾವು ಅರಿತುಕೊಳ್ಳದೆ ಹೋದರೆ ನಮ್ಮ ಉದ್ದೇಶ ಈಡೇರದು ಮಾತ್ರವಲ್ಲದೆ ವಿದ್ಯಾರ್ಥಿಗಳು ತಮ್ಮ ಕನಸನ್ನು ಈಡೇರಿಸಿಕೊಳ್ಳುವಲ್ಲಿ ಗುರು ಮತ್ತು ತಂದೆ ತಾಯಿಯ ಪಾತ್ರ ಪ್ರಮುಖವಾದುದು ಎಂದು ತಿಳಿಸಿದರು. ಸಹ ಸಂಸ್ಥಾಪಕರಾದ ಗಣನಾಥ ಶೆಟ್ಟಿ ಬಿ. ರವರು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾದರೆ ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಅತಿ ಮುಖ್ಯ ಇದರ ಜೊತೆಗೆ ಗುರು ಹಾಗೂ ಪೋಷಕರು ಶ್ರಮಿಸಿದ್ದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ತಿಳಿಸಿದರು. ಸಹ ಸಂಸ್ಥಾಪಕರಾದ ಗಣಪತಿ ಭಟ್ ಕೆ.ಎಸ್. ರವರು, ಸ್ಪರ್ಧಾತ್ಮಕ ಯುಗದಲ್ಲಿ ಅಂಕಗಳ ಗಳಿಕೆಯೊಂದೇ ಯಶಸ್ಸಿನ ಮಾನದಂಡವಲ್ಲ ಸಂವಹನ ಕೌಶಲ್ಯ, ಆತ್ಮವಿಶ್ವಾಸ, ನಾಯಕತ್ವ ಗುಣ,ಸಮಸ್ಯೆ ಪರಿಹರಿಸುವ ಸಾಮರ್ಥ್ಯ ಮತ್ತು ವೈಜ್ಞಾನಿಕ ಮನೋಭಾವವನ್ನು ವಿದ್ಯಾರ್ಥಿಗಳು ಹೊಂದುವುದು ಅತಿ ಮುಖ್ಯ ಎಂದು ಪೋಷಕರನ್ನು ಉದ್ದೇಶಿಸಿ ಮಾತುಗಳನ್ನಾಡಿದರು.
ಸಭೆಯ ಕಾರ್ಯಕ್ರಮವನ್ನು ಕನ್ನಡ ವಿಭಾಗದ ಉಪನ್ಯಾಸಕರಾದ ವರುಣ್ ವಾಲಿ ನಿರೂಪಿಸಿದರು. ವೇದಿಕೆಯಲ್ಲಿ ಆಂಗ್ಲ ಭಾಷ ಉಪನ್ಯಾಸಕರಾದ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು. ಪೋಷಕರು ವರ್ಗದವರು ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಉಪಸ್ಥಿತರಿದ್ದರು.
