ಕಾರ್ಕಳ, ನ. 22: ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಮಸ್ತಕಾಭಿಷೇಕ ಮಹೋತ್ಸವದ ಶ್ರೀಮುಖ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಕಾರ್ಯಾಲಯದ ಸಭಾಭವನದಲ್ಲಿ ನಡೆಯಿತು. ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕ ಸಮಿತಿ ಕಾರ್ಯಾಧ್ಯಕ್ಷ ಸಹಕಾರರತ್ನ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲಚಾರ್ಯ 106 ಶ್ರೀ ಪ್ರಸಂಗಸಾಗರ ಮುನಿ ಮಹಾರಾಜರ ಪಾವನ ಸಾನಿಧ್ಯದಲ್ಲಿ ಕಾರ್ಕಳ ಜೈನ ಮಠದ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಸಮ್ಮುಖದಲ್ಲಿ ಮೂಡುಬಿದಿರೆ ಜೈನ ಮಠದ ಡಾ. ಚಾರುಕೀರ್ತಿ ಪಟ್ಟಾರಕ ಪಂಡಿತಚಾರ್ಯ ವರ್ಯ ಮಹಾಸ್ವಾಮೀಜಿ ಬಿಡುಗಡೆಗೊಳಿಸಿದರು..


ಏಲಾಚಾರ್ಯ ಶ್ರೀ ಪ್ರಸಂಗ ಸಾಗರ ಮುನಿಮಹಾರಾಜರು ಆಶೀರ್ವಚನ ನೀಡಿ, ಬಂಗಾರ ಮೃದುವಾದಾಗ ಆಭರಣವಾಗುತ್ತದೆ, ಮಣ್ಣು ಮೃದುವಾದಾಗ ಮಡಿಕೆಯಾಗುತ್ತದೆ. ಅದೇ ರೀತಿ ಮನುಷ್ಯನಲ್ಲಿನ ಮೃದುತ್ವ, ವಿನಯ ಮತ್ತು ಸೌಮ್ಯ ಗುಣಗಳು ಆತನನ್ನು ಜಿನರ ಪಾವನ ಸಾನಿಧ್ಯದತ್ತ ಕೊಂಡೊಯ್ಯಬಲ್ಲವು. ಬದುಕಿನಲ್ಲಿ ಅಹಂಕಾರವನ್ನು ಬದಿಗಿಟ್ಟು ಮೃದುತ್ವವನ್ನು ಬೆಳೆಸಿಕೊಂಡಾಗ ಧರ್ಮದ ನಿಜವಾದ ಮೌಲ್ಯ ಅರಿವಾಗುತ್ತದೆ ಎಂದರು.
ಮೂಡುಬಿದಿರೆ ಜೈನ ಮಠದ ಸ್ವಾಮೀಜಿ ಆಶೀರ್ವಚನ ನೀಡಿ, ಬಾಹುಬಲಿ ಮಹಾಮಸ್ತಕಾಭಿಷೇಕದ ಹಿಂದೆ ಆದಿನಾಥ ತೀರ್ಥಂಕರರ ಪುತ್ರರಾದ ಭರತ ಮತ್ತು ಬಾಹುಬಲಿಯವರ ಇತಿಹಾಸ ಹಾಗೂ ಅಹಿಂಸೆಯ ಸಂದೇಶವಿದೆ. ದೃಷ್ಟಿಯುದ್ಧ, ಜಲಯುದ್ಧ ಮತ್ತು ಮಲ್ಲಯುದ್ಧಗಳ ಮೂಲಕ ಶಸ್ತ್ರಾಸ್ತ್ರಗಳ ಬಳಕೆಯಿಲ್ಲದೇ ಸಂಘರ್ಷಕ್ಕೆ ಅಂತ್ಯ ಹಾಡಿದ ಬಾಹುಬಲಿಯವರ ಆದರ್ಶ ಜಗತ್ತಿಗೆ ಶಾಂತಿ ಮತ್ತು ಅಹಿಂಸೆಯ ಮಹತ್ವವನ್ನು ಸಾರುತ್ತದೆ. ಕೃಷಿ ಹಾಗೂ ನೀರಾವರಿಗೆ ಅನುಕೂಲವಾಗುವಂತೆ ಆನೆಕೆರೆಯ ನಿರ್ಮಾಣ ಸೇರಿದಂತೆ ಜೈನ ಅರಸರು ಕಾರ್ಕಳದ ಇತಿಹಾಸಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಕಾರ್ಯಾಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಬಾಹುಬಲಿ ಮಹಾಮಸ್ತಕಾಭಿಷೇಕದ ಅಂಗವಾಗಿ ಕಾರ್ಕಳ ನಗರದ ರಸ್ತೆ ಅಭಿವೃದ್ಧಿ, ವಿದ್ಯುತ್ ದೀಪಾಲಂಕಾರ ಹಾಗೂ ಗೊಮ್ಮಟ ಬೆಟ್ಟದ ವಿದ್ಯುತ್ ಅಲಂಕಾರಕ್ಕೆ ವಿಶೇಷ ಆದ್ಯತೆ ನೀಡಲಾಗುವುದು. ಈಗಾಗಲೇ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಗೆ 10 ಕೋ.ರೂ ಅನುದಾನಕ್ಕೆ ಮನವಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿ ನಿಧಿಯಿಂದ ರಸ್ತೆ ಅಭಿವೃದ್ಧಿಗೆ ಅನುದಾನ ಪಡೆಯುವ ಪ್ರಯತ್ನ ನಡೆಯಲಿದೆ. ಇದಲ್ಲದೇ ಚತುರ್ಮುಖ ಬಸದಿ ಹಾಗೂ ಬಾಹುಬಲಿ ಬೆಟ್ಟಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು. ಬಾಹುಬಲಿ ಮಸ್ತಕಾಭಿಷೇಕ ಯಶಸ್ವಿಯಾಗಲು ಸಮಾಜದ ಪ್ರತಿಯೊಬ್ಬರ ಸಹಕಾರ ಮತ್ತು ಪಾಲ್ಗೊಳ್ಳುವಿಕೆ ಅಗತ್ಯವಿದೆ.ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಿದರೆ ಈ ಮಹಾಮಸ್ತಕಾಭಿಷೇಕ ಎಲ್ಲರ ನೆನಪಿನಲ್ಲಿ ಉಳಿಯುವ ಐತಿಹಾಸಿಕ ಉತ್ಸವವಾಗಲಿದೆ ಎಂದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಜೈನ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ರತ್ನಾಕರ್ ರಾಜ್ ಅರಸ್, ಎ. ಮೋಹನ್ ಪಡಿವಾಳ್, ಅನಂತರಾಜ್ ಪುವಣಿ ಹಾಗೂ ಡಾ. ಜೀವಂದರ್ ಬಳ್ಳಾಲ್ ಉಪಸ್ಥಿತರಿದ್ದರು.
