ಜಗತ್ತಿನ ಪ್ರತಿ ದಂಪತಿಗಳಿಗೂ ಅಪ್ಪ ಅಮ್ಮ ಆಗೋದು ಒಂದು ಸುಂದರವಾದ ಕ್ಷಣ. ಆದರೆ ಮತ್ತೊಂದು ಕಡೆಗೆ ತಂದೆ ತಾಯಿಯಾಗೋದು ಅಷ್ಟು ಸುಲಭದ ಕೆಲಸವಲ್ಲ. ಕೆಲವು ಸಂದರ್ಭಗಳು ನಿಮ್ಮ ಜೀವನದಲ್ಲಿ ಬರುತ್ತವೆ. ಅವು ಬಂದಾಗ ನಿಮಗೆ ಎಲ್ಲೋ ಒಂದು ಕಡೆಗೆ ನಾವು ಉತ್ತಮ ಪಾಲಕರು ಅಲ್ಲ ಅನ್ನೋ ಮನೋಭಾವನೆ ಬರುತ್ತದೆ. ಅದಕ್ಕೆ ಇವತ್ತು ನಾವು ನೋಡೋಣ ನೀವು ಹೇಗೆ ಉತ್ತಮ ಪಾಲಕರಾಗಲು ಸಾಧ್ಯ ಅಂತ ಅದಕ್ಕೆ ನೀವು ಜಾಸ್ತಿ ಏನು ಮಾಡಬೇಕಿಲ್ಲ ಕೆಲವು ಸಣ್ಣಪುಟ್ಟ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡರೆ ಸಾಕು. ಅವು ಈ ಕೆಳಗಿನಂತಿವೆ
- ಮಕ್ಕಳ ಬಗ್ಗೆ ಹೆಮ್ಮೆಪಡಿ, ಶಪಿಸಬೇಡಿ
ಪ್ರಪಂಚದಲ್ಲಿ ದಂಪತಿಗಳಿಗೆ ತಂದೆ ತಾಯಿ ಆಗೋ ಭಾಗ್ಯ ಸಿಗೋದು ಒಂದು ಸುಂದರವಾದ ಅನುಭವ ಹಾಗೂ ಅದೃಷ್ಟ, ಇನ್ನೊಂದು ಕಡೆಗೆ ಎಷ್ಟೋ ದಂಪತಿಗಳು ಕೆಲ ಕಾರಣಾಂತರಗಳಿಂದ ತಂದೆ ತಾಯಿಯಾಗೋ ಅದೃಷ್ಟದಿಂದ ವಂಚಿತರಾಗಿದ್ದಾರೆ. ಅವರ ಪ್ರಾರ್ಥನೆ ಕನಸು ಒಂದೇ ನಮಗೆ ಒಂದು ಮಗು ಬೇಕು ಅನ್ನೋದು, ಭಗವಂತ ನಿಮಗೆ ಪಾಲಕರಗೋ ಭಾಗ್ಯ ಸುಂದರವಾದ ಮಕ್ಕಳನ್ನು ನೀಡಿದ್ದಾನೆ ಅದರ ಬಗ್ಗೆ ಅವರ ಬಗ್ಗೆ ಹೆಮ್ಮೆಪಡಿ,, ಯಾವತ್ತೂ ಶಾಪಿಸಬೇಡಿ. - ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಬೇಡಿ: ನಮ್ಮ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡುವದು ಒಂದು ದೊಡ್ಡ ಅಪರಾಧ ಅದನ್ನ ಪ್ರತಿ ಪಾಲಕರು ಅರಿಯಬೇಕು. ಪ್ರತಿಯೊಂದು ಮಗುವು ಕೂಡ ವಿಶೇಷ, ಪ್ರತಿ ಮಗುವಿನ ಕನಸು ಹಾಗೂ ವಿಚಾರಗಳು ಬೇರೆ ಬೇರೆ ಇರುತ್ತವೆ. ನೀವು ನಿಮ್ಮ ಮಕ್ಕಳನ್ನು ಬೇರೆ ಅಕ್ಕಪಕ್ಕದ ಮಕ್ಕಳ ಜೊತೆಗೆ ಹೋಲಿಸಿದರೆ ಅವರಲ್ಲಿ “ಹೀನಭಾವನೆ”ಯ ಜನ್ಮವಾಗುತ್ತದೆ. ಅವರ ಆತ್ಮವಿಶ್ವಾಸ ಕುಗ್ಗಿ ಹೋಗುತ್ತದೆ ಆದ್ದರಿಂದ ಈ ತಪ್ಪನ್ನು ಯಾವತ್ತೂ ಮಾಡಬೇಡಿ.
- ಕಠಿಣ ಶಿಕ್ಷೆಯನ್ನು ನೀಡಬೇಡಿ: ಯಾವ ಮಕ್ಕಳು ತಪ್ಪು ಮಾಡೋಲ್ಲ ಹೇಳಿ ಮನೇಲಿ ಕಿಡಿಗೇಡಿತನ, ಹಠ ಮಾಡೋದು ಮಕ್ಕಳ ಕರ್ತವ್ಯ. ಇದೆಲ್ಲ ನಾವು ಮಾಡೋಕ್ ಆಗುತ್ತಾ ಹೇಳಿ.. ಹಾಗಂತ ಅವರು ಮಾಡೋ ಎಲ್ಲದನ್ನು ನೋಡಿ ಸುಮ್ಮನಿರಿ ಅಂತ ನಾನು ಹೇಳೊಲ್ಲ. ಆದರೆ ನೀವು ಕೊಡೊ ಶಿಕ್ಷೆಗೆ ಒಂದು ಮಿತಿ ಇರಬೇಕು ಯಾವದೇ ಕಾರಣಕ್ಕೂ ಮಕ್ಕಳ ಮನಸಲ್ಲಿ ನಿಮ್ಮ ಬಗ್ಗೆ ತಪ್ಪಾದ ಭಾವನೆ ನಿಮ್ಮ ಮೇಲೆ ಕೀಳರಿಮೆ ಬರುವಂತಹ ಮಾನಸಿಕ ಶಾರೀರಿಕವಾದ ಕಠಿಣ ಶಿಕ್ಷೆಯನ್ನು ನೀಡಬಾರದು. ಒಂದು ವೇಳೆ ನಿಮ್ಮ ಶಿಕ್ಷೆ ವಿಕೃತ, ಅತೀ ಕಠಿಣವಾಗಿದ್ದರೆ ನಿಮ್ಮ ಈ ಗುಣ ಮಕ್ಕಳನ್ನ ಭವಿಷ್ಯದಲ್ಲಿ ಹಿಂಸಕರನ್ನಾಗಿ ಮಾಡಬಹುದು. ಮುಂದೆ ಅವರು ಕೂಡ ಹೊಡಿಯೋದು ಬಡಿಯೋದು ಕೆಟ್ಟದಾಗಿ ಮಾತನಾಡುವದು ಮಾಡಬಹುದು ಅದಕ್ಕೆ ಶಿಕ್ಷೆ ನೀಡುವಾಗ ಸ್ವಲ್ಪ ಹುಷಾರು.
- ಬೇರೆಯವರ ಸಲಹೆ ಬೇಡ : ಯಾವುದೇ ಕಾರಣಕ್ಕೂ ನಿಮ್ಮ ಮಕ್ಕಳ ಸಮಸ್ಯೆಗಳಿಗೆ ಬೇರೆಯವರ ಸಲಹೆ ಪಡೆಯಬೇಡಿ. ಏಕೆಂದರೆ ಎಲ್ಲರ ಮನೆ ಕಥೆಗಳು ಹಾಗೂ ಪರಿಸ್ಥಿತಿಗಳು ಬೇರೆ ಬೇರೆಯಾಗಿರುತ್ತದೆ. ನಿಮ್ಮ ಮನೆಯ ಬಗ್ಗೆ ನಿಮ್ಮ ಮಕ್ಕಳ ಬಗ್ಗೆ ನಿಮ್ಮಷ್ಟು ಚನ್ನಾಗಿ ಬೇರೆ ಯಾರಿಗೂ ಗೊತ್ತಿರಲ್ಲ ನಿಮಗೆ ಮಾತ್ರ ಗೊತ್ತು ನಿಮ್ಮ ಮಕ್ಕಳಿಗೆ ಏನು ಸರಿ ಏನು ತಪ್ಪು ಅಂತ.
- ನಿಮ್ಮ ಕಾರ್ಯಗಳು (ನಡುವಳಿಕೆ ) ನಿಮ್ಮ ಮಾತಿಗಿಂತ ಜಾಸ್ತಿ ಹೇಳುತ್ತದೆ : ಬಹಳಷ್ಟು ಪಾಲಕರು ತಮ್ಮ ಮಕ್ಕಳಿಗೆ ಹಾಗಿರಬೇಕು ಹೀಗಿರಬೇಕು ಅನ್ನೋ ವೇದಾಂತಗಳು ಏನೇನೊ ಹೇಳ್ತಾ ಇರ್ತಾರೆ ಆದರೆ ಸ್ವತಃ ತಾವೇ ಹಾಗಿರಲ್ಲ. ಇದೆ ಪಾಲಕರು ಮಾಡೋ ದೊಡ್ಡ ತಪ್ಪು. ಮಕ್ಕಳು ನೀವು ಹೇಳಿದನ್ನು ಕೇಳಿ ಕಲಿಯೋದು ಕಡಿಮೆ ಆದರೆ ನಿಮ್ಮನ್ನ ನೋಡಿ ನಿಮ್ಮನ್ನ ಅನುಕರಣೆ ಮಾಡಿ ಕಲಿಯೋದು ತುಂಬಾ ಬೇಗ ಅದಕ್ಕೆ ನಾವು ಕೂಡ ಮಕ್ಕಳ ಮುಂದೆ ಚನ್ನಾಗಿ ಇರುವದು ಬಹಳ ಮುಖ್ಯ.
- ಮಿತಿಮೀರಿದ ಪ್ರೀತಿ, ಮಮತೆ, ಬೇಡ : ಪ್ರಪಂಚದಲ್ಲಿ ಎಲ್ಲಾ ಪಾಲಕರಲ್ಲಿ ಒಂದು ವಿಶೇಷವಾದ ಪ್ರೀತಿ, ಸ್ನೇಹ, ಭಾವನೆ ಇರುತ್ತದೆ. ಅವರಿಗೆ ಅವರ ಮಕ್ಕಳೇ ಪ್ರಪಂಚ ಎಲ್ಲಾ ಆದರೂ ಇವೆಲ್ಲ ಒಂದು ಹಂತದವರೆಗೆ ಒಂದು ಮಿತಿಯೊಳಗೆ ಇರಬೇಕು. ನೀವು ಇವೆಲ್ಲ ಅಳತೆ ಮೀರಿ ಕೊಟ್ರೆ ನಿಮ್ಮ ಮಕ್ಕಳನ್ನು ನೀವೇ ಸ್ವತಃ ದಾರಿ ತಪ್ಪಿಸಿದ ಹಾಗೆ ಅದಕ್ಕೆ ನಿಮ್ಮ ಭಾವನೆಗಳ ಮೇಲೆ ಸ್ವಲ್ಪ ನಿಯಂತ್ರಣವಿಡಿ.
- ಒಳ್ಳೆಯ ಸಂಸ್ಕಾರ ನೀಡಿ : ನಿಮ್ಮ ಮಕ್ಕಳಿಗೆ ಮೊದಲನೇದಾಗಿ ಒಳ್ಳೆಯ ಉತ್ತಮ ಸಂಸ್ಕಾರಗಳನ್ನ ಮೌಲ್ಯಗಳನ್ನು ನೀಡಿ. ಸಮಾಜದಲ್ಲಿ ಹೇಗೆ ಬಾಳಬೇಕು ಗುರು ಹಿರಿಯನ್ನ ಹಾಗೂ ಮಹಿಳೆಯನ್ನು ಹೇಗೆ ಗೌರವಿಸಬೇಕು ಅನ್ನೋದನ್ನ ಕಲಿಸಿಕೊಡಿ. ಯಾವ ಮಗುವಿನಲ್ಲಿ ಉತ್ತಮ ಸಂಸ್ಕಾರ ಹಾಗೂ ಮೌಲ್ಯಗಳು ಇರುತ್ತವೆಯೋ ಆ ಮಗುವು ತುಂಬಾ ಉನ್ನತ ಮಟ್ಟಕ್ಕೆ ಬೆಳೆಯುತ್ತದೆ.
ಮಕ್ಕಳು ತಂದೆ ತಾಯಿ ಹಾಗೂ ಮನೆಯ ಹವ್ಯಾಸ ಸಹಾಯ ಮನೋಭಾವನೆ, ಮಾತುಗಾರಿಕೆ ಇತ್ಯಾದಿ ಪ್ರತಿ ಮಕ್ಕಳಿಗೂ ಅವರ ಪಾಲಕರು ಹಾಗೂ ಮನೆಯ ಬಾಕಿ ಸದಸ್ಯರು ಆದರ್ಶವಾಗಿರುತ್ತಾರೆ. ಅದಕ್ಕೆ ಪಾಲಕರು ಮನೆಯಲ್ಲಿನ ಸದಸ್ಯರು ಮಕ್ಕಳಿರುವ ಮನೆಯಲ್ಲಿ ಉತ್ತಮ ಪರಿಸರ ವಾತಾವರಣ ನಿರ್ಮಿಸಬೇಕು… “ಮರವಿದ್ದಂತೆ ಹಣ್ಣುಗಳು… ಬಿತ್ತಿದಂತೆ ಬೆಳೆ”

ನವೀನ ಗೋಪಾಲಸಾ ಹಬೀಬ
ಶಿಕ್ಷಕರು ಪರ್ಲ್ ರೆಸಿಡೆನ್ಸಿಯಲ್ ಶಾಲೆ ಹರಪನಹಳ್ಳಿ
