ಮಂಗಳೂರು: ನಗರದ ಕದ್ರಿ ಉದ್ಯಾನವನದ ಬಳಿಯಲ್ಲಿ ಚಿಪ್ಪು ಹಂದಿಯ ಚಿಪ್ಪುಗಳನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಬೆಂಗಳೂರಿನ ಹೆಚ್ ಆರ್ ಜಗದೀಶ(50), ಕನಕಪುರ ನಿವಾಸಿ ಸಿದ್ದು ನಾಯ್ಕ (38), ಬನಶಂಕರಿ ನಿವಾಸಿ ಬಾಬು (48) ಎಂಬ ಆರೋಪಿಗಳನ್ನು ಮಂಗಳವಾರ ಮಂಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಆರೋಪಿಗಳಿಂದ ಚಿಪ್ಪು ಹಂದಿಯ 5.200 ಕಿ.ಗ್ರಾಂ ತೂಕದ ಚಿಪ್ಪು ಹಾಗೂ ಅಂದಾಜು ಮೌಲ್ಯ 3 ಲಕ್ಷ ಮೌಲ್ಯದ ಕೆ.ಎ 05 ಎಂ.ಎಸ್ 1049 ಬಿಳಿ ಬಣ್ಣದ ಮಾರುತಿ ಸ್ವೀಫ್ಟ್ ಕಾರನ್ನು ವಶಪಡಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಬೆಂಗಳೂರು, ಮತ್ತು ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಪವನ್‍ನೆಜ್ಜೂರು ಐ.ಪಿ.ಎಸ್ ಅವರ ಮಾರ್ಗದರ್ಶನದಲ್ಲಿ ಮಂಗಳೂರು ಸಿ.ಐ.ಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಉಪನಿರೀಕ್ಷಕ ದಿಲೀಪ್ ಜಿ.ಆರ್ ಹಾಗೂ ಸಿಬ್ಬಂದಿಗಳಾದ ತಾರನಾಥ ಎಸ್ ಮತ್ತು ಅಬ್ದುಲ್ ರವೂಫ್ ಭಾಗವಹಿಸಿದ್ದರು.
ಅರಣ್ಯ ಕಾಯ್ದೆ ಮತು ವನ್ಯಜೀವಿಗಳ ಸಂರಕ್ಷಣಾ ಕಾಯ್ದೆ ಸಂಬಂಧಪಟ್ಟ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ಮಡಿಕೇರಿ ಸಿಐಡಿ ಅರಣ್ಯ ಘಟಕ ಪೊಲೀಸ್ ಅಧೀಕ್ಷಕರ ಕಛೇರಿ ಫೋನ್ ನಂ: 9480800220 ಅಥವಾ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಮಂಗಳೂರು ಕಛೇರಿ ಫೋನ್ ನಂ: 8277949810 ಸಂಪರ್ಕಿಸಬಹುದು ಎಂದು ಮಡಿಕೇರಿ ಸಿ.ಐ.ಡಿ ಅರಣ್ಯ ಘಟಕದ ಪೋಲಿಸ್ ಅಧೀಕ್ಷಕ ಪ್ರಕಣೆಯಲ್ಲಿ ತಿಳಿಸಿದ್ದಾರೆ.
