ಮೇ 28 ಮತ್ತು 29ರಂದು ಮಂಗಳೂರಿನಲ್ಲಿ ಅಮೃತಸಂಗಮ 2026: ಏಳು ವರ್ಷಗಳ ಬಳಿಕ ಅಮ್ಮನ ಆಗಮನ

ಮಂಗಳೂರು, ಮೇ 25: ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ “ಅಮೃತಸಂಗಮ 2026” ಕಾರ್ಯಕ್ರಮವು ಮೇ 28 ಮತ್ತು 29ರಂದು ಮಂಗಳೂರಿನ ಬೋಳೂರಿನ ಅಮೃತ ವಿದ್ಯಾಲಯಂ ಶಾಲಾ ಮೈದಾನದಲ್ಲಿ ನಡೆಯಲಿದೆ.

ಏಳು ವರ್ಷಗಳ ಬಳಿಕ ಅಮ್ಮನವರು ಮಂಗಳೂರಿಗೆ ಆಗಮಿಸುತ್ತಿದ್ದು, ಈ ಬಾರಿ ಕೇರಳದ ಹೊರಗೆ ಕರ್ನಾಟಕದಲ್ಲಿ ಆಯ್ಕೆಯಾದ ಏಕೈಕ ಸ್ಥಳ ಮಂಗಳೂರು ಎಂಬುದು ವಿಶೇಷವಾಗಿದೆ. ಅಮ್ಮನವರ ಆಗಮನದ ಹಿನ್ನೆಲೆ ಭಕ್ತರು ಭವ್ಯ ಸ್ವಾಗತಕ್ಕೆ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.

ಅಮ್ಮನವರ ಕಾರ್ಯಕ್ರಮವು 25ನೇ ವರ್ಷದ ಸಂಭ್ರಮಾಚರಣೆಯ ವಿಶೇಷತೆಯನ್ನು ಹೊಂದಿದ್ದು, ಸಮಾಜಮುಖಿ ಹಾಗೂ ಮಾನವೀಯ ಸೇವಾ ಯೋಜನೆಗಳ ಅನಾವರಣಕ್ಕೂ ವೇದಿಕೆಯಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಜಾತಿ, ಮತ, ಧರ್ಮ ಭೇದವಿಲ್ಲದೆ ಎಲ್ಲರಿಗೂ ಪ್ರೀತಿ, ಮಮತೆ ಮತ್ತು ಮಾನವೀಯತೆಯ ಸಂದೇಶ ಸಾರುತ್ತಿರುವ ಅಮ್ಮನವರು ವಿಶ್ವದಾದ್ಯಂತ ಭಕ್ತರ ಆರಾಧ್ಯ ಮಾತೆಯಾಗಿದ್ದಾರೆ. ಆಧ್ಯಾತ್ಮಿಕ ಮಾರ್ಗದರ್ಶನದ ಜೊತೆಗೆ ಸಮಾಜಮುಖಿ ಸೇವಾ ಕಾರ್ಯಗಳ ಮೂಲಕವೂ ಜನಮನ ಗೆದ್ದಿದ್ದಾರೆ.

ಕಾರ್ಯಕ್ರಮದ ಅಂಗವಾಗಿ ಎರಡು ದಿನಗಳ ಕಾಲ ಲಲಿತಾ ಸಹಸ್ರನಾಮ ಅರ್ಚನೆ, ರಾಹು ದೋಷ ನಿವಾರಣಾ ಪೂಜೆ, ಶನಿ ದೋಷ ನಿವಾರಣಾ ಪೂಜೆ, ಸತ್ಸಂಗ, ಭಜನೆ, ಧ್ಯಾನ, ಅಮೃತಾಲಿಂಗನ ದರ್ಶನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ ಮಹಾ ಗಣಪತಿ ಹೋಮ, ನವಗ್ರಹ ಶಾಂತಿ ಹೋಮ, ಮಹಾ ಮೃತ್ಯುಂಜಯ ಹೋಮ, ಮಹಾ ಧನ್ವಂತರಿ ಹೋಮ, ಮಹಾ ಸುದರ್ಶನ ಹೋಮ, ದೇವಿ ಪೂಜೆ ಹಾಗೂ ದುರ್ಗಾ ಪೂಜೆಗಳು ಜರುಗಲಿವೆ.

ಮೇ 28ರಂದು ಬೆಳಿಗ್ಗೆ 10.30ಕ್ಕೆ ಅಮ್ಮನವರ ದಿವ್ಯ ಉಪಸ್ಥಿತಿಯಲ್ಲಿ ಸಮಾಜಮುಖಿ ಮಾನವೀಯ ಸೇವಾ ಯೋಜನೆಗಳ ಅನಾವರಣ ನಡೆಯಲಿದೆ.

ಕಾರ್ಯಕ್ರಮದಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಶ್ರೀಪಾದ್ ಯೆಸ್ಸೋ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಫರೀದ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ, ಶಾಸಕ ಡಿ.ವೇದವ್ಯಾಸ ಕಾಮತ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಅಮ್ಮನವರ ದರ್ಶನಕ್ಕೆ ಯಾವುದೇ ಶುಲ್ಕವಿರುವುದಿಲ್ಲ. ಭಕ್ತರ ಅನುಕೂಲಕ್ಕಾಗಿ ಟೋಕನ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಬೆಳಗ್ಗೆ 9.30ರೊಳಗೆ ಆಗಮಿಸುವವರಿಗೆ ಟೈಮ್ ಕಾರ್ಡ್ ನೀಡಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.

ಭಾರತ ಸೇರಿದಂತೆ ವಿದೇಶಗಳಿಂದಲೂ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ವಸತಿ ವ್ಯವಸ್ಥೆ, ಅನ್ನಸಂತರ್ಪಣೆ, ಕುಡಿಯುವ ನೀರು, ಮಜ್ಜಿಗೆ ಹಾಗೂ ಸಾರಿಗೆ ವ್ಯವಸ್ಥೆಗಳನ್ನು ಮಾಡಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಸುರೇಶ್ ಅಮೀನ್, ಡಾ. ಜೀವರಾಜ್ ಸೊರಕೆ, ಸಿ.ಎ. ವಾಮನ್ ಕಾಮತ್, ಡಾ. ವಸಂತಕುಮಾರ ಪೆರ್ಲ, ಸಿ.ಎ. ರಾಮನಾಥ್ ಹಾಗೂ ಡಾ. ದೇವದಾಸ್ ಪುತ್ರನ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *