ಮಾಳ: ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನ. 14 ಶನಿವಾರದಂದು ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮವು ಶಾಲಾ ಶಿಕ್ಷಕರಿಂದ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ನಂತರ ದೀಪ ಬೆಳಗಿಸಿ, ಪಂಡಿತ್ ಜವಾಹರಲಾಲ್ ನೆಹರೂರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಪೂರ್ಣಿಮಾ ಶೆಣೈ ಮಕ್ಕಳಿಗೆ ಶುಭಾಶಯಗಳನ್ನು ತಿಳಿಸಿ, ಶಿಕ್ಷಣದ ಮಹತ್ವ ಹಾಗೂ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಕುರಿತು ಮಾತನಾಡಿದರು.

LKG ಮತ್ತು UKG ಮಕ್ಕಳಿಗಾಗಿ ಆಟಿಕೆಗಳನ್ನು ಕೊಡುಗೆಯಾಗಿ ನೀಡಿದ ಮತ್ತು ಅಶೋಕ್ ನಾಯ್ಕ ಮತ್ತು ಅವರ ಮನೆಯ ಹಿರಿಯರಾದ ಹೇಮಾವತಿ ಮತ್ತು ವಿದ್ಯಾ ಇವರನ್ನು ಅಭಿನಂದಿಸಲಾಯಿತು. ಶಿಕ್ಷಕರು ಮಕ್ಕಳಿಗಾಗಿ ವಿವಿಧ ಮನೋರಂಜನಾ ಆಟಗಳನ್ನು ನಡೆಸಿ, ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಕೊನೆಯಲ್ಲಿ ಮಕ್ಕಳಿಗೆ ಸಿಹಿತಿಂಡಿಯನ್ನು ಹಂಚಲಾಯಿತು.
ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಪೂರ್ಣಿಮಾ ಶೆಣೈ, ಶಾಲಾ ನಾಯಕಿಯಾಗಿರುವ ಶರಣ್ಯ ಜೋಶಿ, ಉಪನಾಯಕಿಯಾಗಿರುವ ಶಾಂಭವಿ ಹಿರಿಯರಾದ ಹೇಮಾವತಿ ಶ್ರೀಮತಿ ವಿದ್ಯಾ ಇವರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಅನುಪಮ ಜಾಯ್ ನಿರೂಪಿಸಿ ವಸಂತಿ ಸ್ವಾಗತಿಸಿ ಸುನೀತಾ ವಂದನಾರ್ಪಣೆ ಗೈದರು.
