ಪುತ್ತೂರು: ಆಹಾರವನ್ನು ಕೇವಲ ರುಚಿಯ ಅನುಭವಕ್ಕೆ ಸೀಮಿತಗೊಳಿಸದೆ, ಸೃಜನಶೀಲತೆ, ನವೀನತೆ ಹಾಗೂ ಉದ್ಯಮಶೀಲತೆಯ ಅವಕಾಶವಾಗಿ ಪರಿವರ್ತಿಸುವ ಉದ್ದೇಶದಿಂದ ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರಿನ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಮತ್ತು ಪ್ರೊಫೆಷನಲ್ ಸ್ಟಡೀಸ್ ವಿಭಾಗ ಹಾಗೂ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ವತಿಯಿಂದ ‘ಫುಡೀಪ್ರಿನಿಯರ್–ಟೇಸ್ಟ್ ದಿ ಫ್ಯೂಚರ್’ ಎಂಬ ವಿಶಿಷ್ಟ ಉದ್ಯಮಶೀಲತಾ ಕಾರ್ಯಕ್ರಮವನ್ನು ಅ. 6 ರಂದು ಎಸ್ಜೆಎಂ ಸಭಾಂಗಣದಲ್ಲಿ ಆಯೋಜಿಸಲಾಯಿತು.





ಆಹಾರ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಉದ್ಯಮಾವಕಾಶಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದರೊಂದಿಗೆ, ಸಣ್ಣ ಆಲೋಚನೆಯನ್ನು ಉತ್ಪನ್ನವಾಗಿ, ಉತ್ಪನ್ನವನ್ನು ಬ್ರ್ಯಾಂಡ್ ಆಗಿ ಹಾಗೂ ಬ್ರ್ಯಾಂಡ್ ಅನ್ನು ಯಶಸ್ವಿ ಉದ್ಯಮವಾಗಿ ರೂಪಿಸುವ ಚಿಂತನೆ ಬೆಳೆಸುವ ಉದ್ದೇಶದಿಂದ. ಆಹಾರ ತಯಾರಿಕೆ, ಪ್ರಸ್ತುತಿ, ಗ್ರಾಹಕರ ಆಕರ್ಷಣೆ, ಮಾರುಕಟ್ಟೆ ಹಾಗೂ ಉದ್ಯಮದ ಸಾಧ್ಯತೆಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವವನ್ನು ಒದಗಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ರೆ. ಡಾ. ಆಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಉದ್ಯೋಗಕ್ಕಾಗಿ ಕಾಯದೆ, ತಮ್ಮ ಜ್ಞಾನ ಮತ್ತು ಸೃಜನಶೀಲತೆಯನ್ನು ಬಳಸಿಕೊಂಡು ಉದ್ಯೋಗ ಸೃಷ್ಟಿಸುವ ಉದ್ಯಮಿಗಳಾಗಬೇಕು ಎಂದು ಕರೆ ನೀಡಿ, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣ ಹಾಗೂ ಉದ್ಯಮಶೀಲ ಮನೋಭಾವ ಬೆಳೆಸಲು ಸಹಕಾರಿಯಾಗುತ್ತವೆ ಎಂದರು.
ಮುಖ್ಯ ಅತಿಥಿಯಾಗಿದ್ದ ದಕ್ಷಿಣ ಕನ್ನಡ ಮ್ಯೂಚುವಲ್ ಬೆನಿಫಿಟ್ ನಿಧಿ ಲಿಮಿಟೆಡ್ನ ಅಧ್ಯಕ್ಷ ಹಾಗೂ ಪುತ್ತೂರಿನ ಹೋಟೆಲ್ ವಿಶ್ವ ರಂಜಿನಿಯ ವ್ಯವಸ್ಥಾಪಕ ಪಾಲುದಾರ ವಿ.ಜೆ. ಪುನೀತ್ ಮಾತನಾಡಿ, ಆಹಾರ ಮತ್ತು ಆತಿಥ್ಯ ಕ್ಷೇತ್ರದಲ್ಲಿ ಯುವಜನರಿಗೆ ಲಭ್ಯವಿರುವ ವಿವಿಧ ಉದ್ಯಮಾವಕಾಶಗಳ ಕುರಿತು ಮಾಹಿತಿ ನೀಡಿದರು. ಸ್ಥಳೀಯ ಸಂಪನ್ಮೂಲಗಳು, ಹೊಸ ಆಲೋಚನೆಗಳು ಹಾಗೂ ಗುಣಮಟ್ಟದ ಉತ್ಪನ್ನಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ಸಣ್ಣ ಪ್ರಯತ್ನವನ್ನೂ ಯಶಸ್ವಿ ಉದ್ಯಮವನ್ನಾಗಿ ಬೆಳೆಸಬಹುದು ಎಂದು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
‘ಫುಡೀಪ್ರಿನಿಯರ್’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆ, ತಂಡಕಾರ್ಯ, ವ್ಯವಹಾರಿಕ ಚಿಂತನೆ, ಸಂವಹನ ಕೌಶಲ ಹಾಗೂ ಮಾರುಕಟ್ಟೆ ಅರಿವನ್ನು ಪ್ರದರ್ಶಿಸಲು ಅವಕಾಶ ಪಡೆದು ,ಆಹಾರವನ್ನು ಕೇಂದ್ರವಾಗಿಟ್ಟುಕೊಂಡು ಹೊಸ ಆಲೋಚನೆಗಳನ್ನು ರೂಪಿಸುವ ಮೂಲಕ ಭವಿಷ್ಯದಲ್ಲಿ ಸ್ವಂತ ಉದ್ಯಮ ಆರಂಭಿಸುವ ಸಾಧ್ಯತೆಗಳ ಬಗ್ಗೆಯೂ ಅರಿವು ಪಡೆದರು.
ಕಾರ್ಯಕ್ರಮದ ಪ್ರಸ್ತಾವಿಕ ಮಾತುಗಳನ್ನು ಪ್ರಶಾಂತ್ ರೈ ಪಿ. ನೆರವೇರಿಸಿ, ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ತೃತೀಯ ಬಿಬಿಎ ವಿದ್ಯಾರ್ಥಿ ಪ್ರಕೃತ್ ಜಿ.ಕೆ. ಅತಿಥಿಗಳನ್ನು ಸ್ವಾಗತಿಸಿ, ತೃತೀಯ ಬಿಬಿಎ ವಿದ್ಯಾರ್ಥಿ ಭವತ್ ಬಿ.ಎಲ್. ವಂದನಾರ್ಪಣೆ ಸಲ್ಲಿಸಿ, ದ್ವಿತೀಯ ಬಿಬಿಎ (ಬಿಸಿನೆಸ್ ಅನಾಲಿಟಿಕ್ಸ್) ವಿದ್ಯಾರ್ಥಿನಿ ಸಮೃದ್ಧಿ ಚೌಟಾ ಕಾರ್ಯಕ್ರಮ ನಿರೂಪಿಸಿದರು. ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಮತ್ತು ಪ್ರೊಫೆಷನಲ್ ಸ್ಟಡೀಸ್ ವಿಭಾಗದ ಡೀನ್ ಹಾಗೂ ಮುಖ್ಯಸ್ಥ ಡಾ. ರಾಧಾಕೃಷ್ಣ ಗೌಡ ವಿ. ಉಪಸ್ಥಿತರಿದ್ದರು.
‘ಟೇಸ್ಟ್ ದಿ ಫ್ಯೂಚರ್’ ಆಶಯದೊಂದಿಗೆ ನಡೆದ ‘ಫುಡೀಪ್ರಿನಿಯರ್’ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಆಹಾರದ ರುಚಿಯೊಂದಿಗೆ ಉದ್ಯಮದ ರುಚಿಯನ್ನೂ ಪರಿಚಯಿಸಿ, “ಒಂದು ಆಲೋಚನೆ, ಒಂದು ಪ್ರಯತ್ನ, ಒಂದು ಉದ್ಯಮ” ಎಂಬ ಮನೋಭಾವವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವಲ್ಲಿ ಯಶಸ್ವಿಯಾಯಿತು.
