ಮೂಡುಬಿದಿರೆ: ಕೃಷಿಯನ್ನು ಲಾಭದಾಯಕ ಹಾಗೂ ನವೀನ ಉದ್ಯಮವಾಗಿ ರೂಪಿಸುವ ಮೂಲಕ ಉದ್ಯೋಗ ಸೃಷ್ಟಿಗೆ ಯುವಜನರು ಮುಂದಾಗಬೇಕು. ಕೃಷಿ ಮತ್ತು ಆಹಾರ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯಮಶೀಲತೆಗೆ ವಿಪುಲ ಅವಕಾಶಗಳಿದ್ದು, ಅವುಗಳನ್ನು ಬಳಸಿಕೊಂಡು ಗ್ರಾಮೀಣ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಕರ್ನಾಟಕ ಸರ್ಕಾರದ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹಾಗೂ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ. ಅಶೋಕ್ ದಳವಾಯಿ ಹೇಳಿದರು.



ಮಿಜಾರ್ ನ ಆಳ್ವಾಸ್ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ ನಡೆದ ಪ್ರಥಮ ವರ್ಷದ ಬಿ.ಎಸ್ಸಿ. (ಆನರ್ಸ್) ಕೃಷಿ ಹಾಗೂ ಬಿ.ಟೆಕ್. ಆಹಾರ ತಂತ್ರಜ್ಞಾನ ವಿದ್ಯಾರ್ಥಿಗಳ ಆಗಮನ ಕಾರ್ಯಕ್ರಮ ‘ದೀಕ್ಷಾರಂಭ 2026–27’ರಲ್ಲಿ ಮಾತನಾಡಿದರು.
ವಿದ್ಯಾರ್ಥಿ ಜೀವನದ ಈ ಹಂತ ಮಹತ್ವದ್ದಾಗಿದ್ದು, ಚಂಚಲ ಮನಸ್ಸನ್ನು ನಿಯಂತ್ರಿಸಿಕೊಂಡು ಏಕಾಗ್ರತೆ, ಶಿಸ್ತು ಹಾಗೂ ಬದ್ಧತೆಯಿಂದ ಅಧ್ಯಯನ ಮಾಡಬೇಕು. ಸ್ಪಷ್ಟ ಗುರಿಗಳನ್ನು ರೂಪಿಸಿಕೊಂಡು ಅವುಗಳ ಸಾಧನೆಗೆ ನಿರಂತರ ಪರಿಶ್ರಮ ಪಡಬೇಕು ಎಂದರು.
ಕೃಷಿ ವಿಜ್ಞಾನಿ ನಾರ್ಮನ್ ಬೋರ್ಲಾಗ್, ಡಾ. ಎಂ.ಎಸ್. ಸ್ವಾಮಿನಾಥನ್ ಹಾಗೂ ಡಾ. ವರ್ಗೀಸ್ ಕುರಿಯನ್ ಅವರ ಸಾಧನೆಗಳನ್ನು ಸ್ಮರಿಸಿದ ಅವರು, ಅವರ ಕೊಡುಗೆಗಳಿಂದ ಪ್ರೇರಣೆ ಪಡೆದು ಕೃಷಿ ಕ್ಷೇತ್ರದ ಆಧುನೀಕರಣ ಹಾಗೂ ಗ್ರಾಮೀಣ ಅಭಿವೃದ್ಧಿಗೆ ವಿದ್ಯಾರ್ಥಿಗಳು ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ನಿರ್ವಹಣಾ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಲಭ್ಯವಿರುವ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಇತರ ಅವಕಾಶಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು. ತಮ್ಮ ಗುರಿ ಸಾಧನೆಗೆ ಶಿಸ್ತು, ನಿರಂತರ ಪರಿಶ್ರಮ ಹಾಗೂ ಬದ್ಧತೆ ಮುಖ್ಯ ಎಂದರು. ಡಾ. ಮೋಹನ್ ಆಳ್ವ ಅವರ ಕನಸಿನಂತೆ ಮೂಡುಬಿದಿರೆಯನ್ನು ಕೃಷಿ ಕಾಶಿಯನ್ನಾಗಿಸುವ ಉದ್ದೇಶದಿಂದ ಕೃಷಿ ಮಹಾವಿದ್ಯಾಲಯವನ್ನು ಸ್ಥಾಪಿಸಲಾಗಿದೆ. ಕೃಷಿಕರ ಬದುಕನ್ನು ಸುಧಾರಿಸುವುದು ಹಾಗೂ ಕೃಷಿ ಕ್ಷೇತ್ರದ ಪ್ರಗತಿಗೆ ನೆರವಾಗುವುದು ಸಂಸ್ಥೆಯ ಪ್ರಮುಖ ಆಶಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಗಣ್ಯರು ಜ್ಯೋತಿ ಬೆಳಗಿಸಿ, ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಕೃಷಿ ಕಾಲೇಜಿನ ಡೀನ್ ಡಾ. ಎಸ್.ಎನ್. ವಾಸುದೇವನ್ ಸ್ವಾಗತಿಸಿದರು. ದ್ವಿತೀಯ ವರ್ಷದ ಕೃಷಿ ವಿದ್ಯಾರ್ಥಿಗಳು ಪ್ರಾರ್ಥನೆ ಹಾಗೂ ರೈತಗೀತೆ ಪ್ರಸ್ತುತಪಡಿಸಿದರು. ಕೃಷಿ ವಿಸ್ತರಣಾ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಪೂಜಾ ವಿ. ವಂದಿಸಿದರು. ಕೃಷಿ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಗುಣಭಾಗ್ಯ ಕಾರ್ಯಕ್ರಮ ನಿರೂಪಿಸಿದರು. ಕೃಷಿ ತಂತ್ರಜ್ಞಾನ ವಿಭಾಗದ ಡಾ ಕೆವಿ ಸುರೇಶ್ ಇದ್ದರು. ಕಾರ್ಯಕ್ರಮದಲ್ಲಿ ಡಾ. ಅಶೋಕ್ ದಳವಾಯಿಯವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ದೀಕ್ಷಾರಂಭ ಕಾರ್ಯಕ್ರಮವು ಅಕ್ಟೋಬರ್ 31ರ ವರೆಗೆ ನಡೆಯಲಿದ್ದು, ಕೃಷಿ ಹಾಗೂ ಆಹಾರ ವಿಜ್ಞಾನದ ವಿವಿಧ ವಿಷಯಗಳು ಮತ್ತು ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದಂತೆ ಸಂಪನ್ಮೂಲ ವ್ಯಕ್ತಿಗಳ ಉಪನ್ಯಾಸಗಳನ್ನು ಆಯೋಜಿಸಲಾಗಿದೆ.
