ಕಾರ್ಕಳ: ಕ್ರೈಸ್ಟ್ ಕಿಂಗ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ನೂತನ ಇಂಟರ್ಯಾಕ್ಟ್ ಕ್ಲಬ್ನ ಪದಗ್ರಹಣ ಸಮಾರಂಭ ಕಾರ್ಯಕ್ರಮ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.



ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾರ್ಕಳದ ಖ್ಯಾತ ನ್ಯಾಯವಾದಿ ಹಾಗೂ ಕಾರ್ಕಳ ರೋಟರಿ ಕ್ಲಬ್ನ ಅಧ್ಯಕ್ಷರಾದ ರೋ. ವಿಜೇಂದ್ರ ಕುಮಾರ್ ಅವರು ಮಾತನಾಡಿ, “ಇಂದಿನ ಆಧುನಿಕ ಯುಗದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದರೂ, ಮಾದಕ ವಸ್ತುಗಳ ದುರುಪಯೋಗವು ಸಮಾಜದ ಮುಂದೆ ದೊಡ್ಡ ಸವಲಾಗಿ ನಿಂತಿದೆ. ಯುವಜನರು ಇಂತಹ ಘಟನೆಗಳನ್ನು ಕಂಡಲ್ಲಿ ಅದಕ್ಕೆ ಸಂಬಂಧಪಟ್ಟವರಲ್ಲಿ ಗೌಪ್ಯವಾಗಿ ಮಾಹಿತಿಯನ್ನು ತಿಳಿಸಿ, ಸಮಾಜದಲ್ಲಿ ಉತ್ತಮ ಪ್ರಜೆಯಾಗಬೇಕು”. ಎಂದು ಹೇಳಿದರು. ಇಂಟರ್ಯಾಕ್ಟ್ ಕ್ಲಬ್ನ ಅಧ್ಯಕ್ಷರಾದ ರೊ. ಶೇಖರ್ ಎಚ್. ಅವರು ಮಾತನಾಡಿ, ಇಂಟರ್ಯಾಕ್ಟ್ ಕ್ಲಬ್ನ ಸ್ಥಾಪನೆ, ಅದರ ಬೇರೆ ಬೇರೆ ವಿಭಾಗಗಳು ಮತ್ತು ಸಂಘದ ಕಾರ್ಯ ವೈಖರಿಯ ಬಗ್ಗೆ ಮಾಹಿತಿ ನೀಡಿದರು. ಕಾರ್ಕಳದ ರೋಟರಿ ಕ್ಲಬ್ನ ಕಾರ್ಯದರ್ಶಿಯಾದ ರೊ. ಉದಯ ಕಡಂಬರವರು ಸಂಸ್ಥೆಯ ಇಂಟರ್ಯಾಕ್ಟ್ ಕ್ಲಬ್ನ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಕಾರ್ಕಳ ರೋಟರಿ ಕ್ಲಬ್ನ ಸದಸ್ಯರಾದ ಸುರೇಶ್ ನಾಯಕ್ರವರು ಮಾತನಾಡಿ, “ನಾಯಕತ್ವ ಎನ್ನುವುದು ಶಾಲೆಯಲ್ಲಿ ಕಲಿಸುವ ಒಂದು ಪಾಠವಲ್ಲ ಅದು ಮನೆಯಲ್ಲಿ ಬೆಳೆಸುವ ಒಂದು ಗುಣವಾಗಿದೆ. ಪೋಷಕರು ಮಕ್ಕಳಿಗೆ ಜವಾಬ್ದಾರಿ ನೀಡಿದಾಗ, ಅವರ ಮಾತನ್ನು ಆಲಿಸಿದಾಗ, ಇತರರಿಗೆ ಸಹಾಯ ಮಾಡುವ ಮನೋಭಾವ ಬೆಳೆಸಿದಾಗ ನಾಯಕತ್ವದ ಗುಣ ಬೆಳೆಯುತ್ತದೆ”. ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಡಾ. ಪೀಟರ್ ಫೆರ್ನಾಂಡಿಸ್ರವರು “ಪೋಲಿಯೋ ನಿರ್ಮೂಲನೆ ಮಾಡುವುದರಲ್ಲಿ ಭಾರತ ಹಾಗೂ ಜಗತ್ತಿನಾದ್ಯಂತ ಮಾದರಿಯಾಗುವಂತಹ ಕೆಲಸವನ್ನು ರೋಟರಿ ಕ್ಲಬ್ ಮಾಡಿದೆ ಹಾಗೂ ವಿದ್ಯಾರ್ಥಿಗಳನ್ನು ವಿದ್ಯಾವಂತರನ್ನಾಗಿ ಮಾಡುವುದು ಮಾತ್ರ ನಮ್ಮ ಗುರಿಯಾಗಬಾರದು, ಪ್ರಜ್ಞಾವಂತರನ್ನಾಗಿ ಮಾಡುವುದು ನಮ್ಮ ಕರ್ತವ್ಯವಾಗಿದೆ. ಪುಸ್ತಕದ ಜ್ಞಾನವು ಅವರಿಗೆ ಪರೀಕ್ಷೆಯಲ್ಲಿ ಯಶಸ್ಸನ್ನು ನೀಡಬಹುದು ಆದರೆ ಸೇವೆಯ ಅನುಭವವು ಅವರನ್ನು ಜೀವನದಲ್ಲಿ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುತ್ತದೆ”. ಎಂದು ತಿಳಿಸಿದರು. ಸಂಸ್ಥೆಯ ಪದವಿ ಪೂರ್ವ ವಿಭಾಗದ ಪ್ರಾಂಶುಪಾಲರಾಗಿರುವ ಲಕ್ಷ್ಮೀ ನಾರಾಯಣ ಕಾಮತ್, ಸಂಸ್ಥೆಯ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಜೋಸ್ನಾ ಸ್ನೇಹಲತಾ, ಹಿರಿಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕರಾದ ಐ ಕ್ರಿಸ್ಟೋಫರ್ ಕೋಟ್ಯಾನ್, ಕಿರಿಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಸಿಸ್ಟರ್ ಜಾಲಿ ಜೇಕಬ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಇಂಟರ್ಯಾಕ್ಟ್ ಕ್ಲಬ್ನ ಸಂಯೋಜಕಿ ಶೈಲಿ ಹೆಗ್ಡೆ ಸ್ವಾಗತಿಸಿ,ಲಕ್ಷಣ್ಯ ವರದಿ ವಾಚನ ಮಾಡಿದರು ಹಾಗೂ ಸಂಸ್ಥೆಯ ಇಂಟರ್ಯಾಕ್ಟ್ ಕ್ಲಬ್ನ ಅಧ್ಯಕ್ಷೆ ಹತ್ತನೇ ತರಗತಿಯ ಸಾನ್ವಿ ಎಸ್ ಕೋಟ್ಯಾನ್ ಕಾರ್ಯಯೋಜನೆಯ ಬಗ್ಗೆ ತಿಳಿಸಿದರು. ಸಂಸ್ಥೆಯ ಇಂಟರ್ಯಾಕ್ಟ್ ಕ್ಲಬ್ನ ಕಾರ್ಯದರ್ಶಿಯಾದ ಜುವೆಲ್ ಕುಟೀನ್ಹೊ ವಂದಿಸಿ, ಶಿಕ್ಷಕಿ ಶಿವಾನಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
