ಕಾರ್ಕಳ, ಜೂ. 30: ಜು.9 ರಂದು ‘ವಿಕಾಸ ಉದ್ಯೋಗ ಸೇತು ಅಭಿಯಾನ’ ವಿಕಾಸ ಜನಸೇವಾ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ವಿ. ಸುನಿಲ್ ಕುಮಾರ್ ತಿಳಿಸಿದರು. ಕಾರ್ಕಳ ಮತ್ತು ಉಡುಪಿ ಜಿಲ್ಲೆಯ ವಿದ್ಯಾವಂತ ಯುವಕ, ಯುವತಿಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಈ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅವರು ಜೂ. 30 ರ ಮಂಗಳವಾರ ಶಾಸಕರ ಜನಸೇವಾ ಕಚೇರಿ ವಿಕಾಸದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಈ ಉದ್ಯೋಗ ಮೇಳದಲ್ಲಿ 20 ಕ್ಕೂ ಹೆಚ್ಚು ಕಂಪೆನಿಗಳು ಭಾಗವಹಿಸಲಿದ್ದು, ಸುಮಾರು 400ಕ್ಕೂ ಹೆಚ್ಚು ಯುವಕ/ಯುವತಿಯರಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದೆ. ಜುಲೈ. 09 ಗುರುವಾರ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ನೇರ ಸಂದರ್ಶನ ನಡೆಯಲಿದೆ ಎಂದರು.
ಎಸ್ಎಸ್ಎಲ್ಸಿ, ಪಿಯುಸಿ, ಪದವಿ, ಐಟಿಐ, ಪಾಲಿಟೆಕ್ನಿಕ್ ವಿದ್ಯಾಭ್ಯಾಸ ಹೊಂದಿರುವ ಯುವಕ, ಯುವತಿಯರು ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಯುವಕ, ಯುವತಿಯರು ನೇರವಾಗಿ ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಮಂಗಳೂರು, ಉಡುಪಿ ಮತ್ತು ಬೆಂಗಳೂರಿನ ಆಯ್ದ ಕಂಪೆನಿಗಳು ಭಾಗವಹಿಸಲಿದ್ದು, ಅಭ್ಯರ್ಥಿಗಳ ನೇರ ಸಂದರ್ಶನ ನಡೆಸಿ ನೇಮಕಾತಿ ಮಾಡಿಕೊಳ್ಳಲಿದ್ದಾರೆ.
ಕಾರ್ಕಳದ ಯುವಕರಿಗೆ ಅನುಕೂಲ ಆಗಬೇಕು ಎನ್ನುನ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಉದ್ಯೋಗ ಮೇಳದಲ್ಲಿ ಉದ್ಯೋಗಾಕಾಂಕ್ಷಿಗಳಿಂದ ಒಟ್ಟು 1 ಸಾವಿರ ಅರ್ಜಿಗಳನ್ನು ಮಿತಿಗೊಳಿಸಲಾಗಿದ್ದು, QR ಕೋಡ್ ಸ್ಕ್ಯಾನ್ ಮಾಡಿ ಆನ್ ಲೈನ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬಹುದು. ಮೊದಲು ಬಂದ 1000 ಆರ್ಜಿಗಳಿಗೆ ಆದ್ಯತೆ ನೀಡಿ ವಿಶೇಷ ನೊಂದಣಿ ಮಾಡಲಾಗುವುದು ಎಂದರು. 300, 400 ಜನರಿಗೆ ಉದ್ಯೋಗ ಸಿಗಬಹುದೆಂದು ನೀರೀಕ್ಷೆ ಮಾಡಿದ್ದೇವೆ ಎಂದರು. ಅರ್ಜಿ ಸಲ್ಲಿಸಿದವರು ಜು.9 ರಂದು ನೇರ ಸಂದರ್ಶನಕ್ಕೆ ಹಾಜರಾಗಬೇಕು ಎಂದರು.
MNC ಕಂಪನಿಗಳಲ್ಲಿ ಪ್ಲೇಸ್ ಮೆಂಟ್ ಆದ ಮಹಿಳೆಯರಿಗೆ ವಿಶೇಷವಾಗಿ ಅವರ ಸುರಕ್ಷತೆ ದೃಷ್ಟಿಯಿಂದ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಆದ್ದರಿಂದ ಅರ್ಹ ಅಭ್ಯರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಸುನಿಲ್ ಕುಮಾರ್ ತಿಳಿಸಿದರು.
