ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿ ವೇದಿಕೆ ‘ಅಭಿವ್ಯಕ್ತಿ’ಯ 2026–27ನೇ ಸಾಲಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಶುಕ್ರವಾರ ಕಾಲೇಜಿನ ಮಲ್ಟಿಮೀಡಿಯಾ ಸ್ಟುಡಿಯೋದಲ್ಲಿ ನಡೆಯಿತು.




ನಿರೂಪಕ ನಿತೇಶ್ ಪೂಜಾರಿ ಮಾರ್ನಾಡ್ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಿರೂಪಣೆ ಎನ್ನುವುದು ಕೇವಲ ಮಾತಿನ ಕಲೆಯಲ್ಲ, ಅದಕ್ಕೆ ಜ್ಞಾನ, ಆತ್ಮವಿಶ್ವಾಸ, ಪೂರ್ವಸಿದ್ಧತೆ, ವಿಷಯದ ಮೇಲಿನ ಆಸಕ್ತಿ, ಧ್ವನಿಯ ಏರಿಳಿತ ಮತ್ತು ಬದ್ಧತೆ ಅತ್ಯಗತ್ಯ ಎಂದರು. ನಿರೂಪಣೆ ಸುಲಭದ ಕೆಲಸವಲ್ಲ. ಪ್ರತಿಯೊಂದು ಕಾರ್ಯಕ್ರಮಕ್ಕೂ ಅದರ ಸ್ವರೂಪಕ್ಕೆ ತಕ್ಕ ಸಿದ್ಧತೆ ಅಗತ್ಯ. ಕಾರ್ಯಕ್ರಮದ ಕುರಿತು ಮೂಲಭೂತ ಮಾಹಿತಿಯನ್ನಾದರೂ ನಿರೂಪಕರು ತಿಳಿದುಕೊಂಡಿರಬೇಕು. ವಿಷಯದ ಬಗ್ಗೆ ಆಳವಾದ ಜ್ಞಾನ ಇರಲೇಬೇಕೆಂದಿಲ್ಲವಾದರೂ, ಕಾರ್ಯಕ್ರಮದ ಹಿನ್ನೆಲೆ ಮತ್ತು ಸಂದರ್ಭವನ್ನು ಅರ್ಥಮಾಡಿಕೊಂಡಿರಬೇಕು. ನಿರೂಪಣೆಯ ಸ್ಕ್ರಿಪ್ಟ್ ಅನ್ನು ಕಂಠಪಾಠ ಮಾಡುವುದಕ್ಕಿಂತ ಅದರ ಆಶಯವನ್ನು ಮನಸ್ಸಿನಲ್ಲಿ ಅರ್ಥಮಾಡಿಕೊಂಡು ಸಹಜವಾಗಿ ಪ್ರಸ್ತುತಪಡಿಸುವುದು ಮುಖ್ಯ. ಧ್ವನಿಯ ವಿಭಿನ್ನ ಭಾವಗಳು, ಸೂಕ್ತ ಏರಿಳಿತ ಮತ್ತು ಮಾತಿನ ಶೈಲಿ ಕಾರ್ಯಕ್ರಮಕ್ಕೆ ಮೆರುಗು ನೀಡುತ್ತವೆ. ನಿರೂಪಕರು ತಮ್ಮ ಜ್ಞಾನವನ್ನು ನಿರಂತರವಾಗಿ ನವೀಕರಿಸಿಕೊಳ್ಳಬೇಕು ಹಾಗೂ ಕಾಲಕ್ಕೆ ತಕ್ಕಂತೆ ಬೆಳವಣಿಗೆ ಹೊಂದಬೇಕು ಎಂದು ಸಲಹೆ ನೀಡಿದರು.
ತಮ್ಮ ವೃತ್ತಿಜೀವನದ ಆರಂಭವನ್ನು ಸ್ಮರಿಸಿದ ಅವರು, ಆಳ್ವಾಸ್ ವಿರಾಸತ್ ತಮ್ಮ ನಿರೂಪಣಾ ಬದುಕಿಗೆ ವೇದಿಕೆಯಾಯಿತು ಎಂದು ಹೇಳಿದರು. ನಿರೂಪಣೆಯಲ್ಲಿ ಇತರರನ್ನು ಗಮನಿಸಿ ಕಲಿಯುವುದು ಉತ್ತಮವಾದರೂ, ಅವರನ್ನೇ ಅನುಕರಿಸುವ ಬದಲು ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ರೂಪಿಸಿಕೊಳ್ಳಬೇಕು. ಯಶಸ್ಸು ಅಲ್ಪಾವಧಿಯಲ್ಲಿ ದೊರೆಯುವುದಿಲ್ಲ. ಸಣ್ಣಪುಟ್ಟ ಅವಕಾಶಗಳನ್ನು ಕಡೆಗಣಿಸದೆ, ಅವುಗಳನ್ನು ಬೆಳವಣಿಗೆಯ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಮಾತನಾಡಿದರು.
‘ಅಭಿವ್ಯಕ್ತಿ’ ವಿದ್ಯಾರ್ಥಿ ವೇದಿಕೆಯ ಕಾರ್ಯದರ್ಶಿಯಾಗಿ ರವಿ ಕೊಪ್ಪಳ, ಉಪಕಾರ್ಯದರ್ಶಿಯಾಗಿ ಕಾವ್ಯ ಎನ್.ವಿ. ಹಾಗೂ ಖಜಾಂಚಿಯಾಗಿ ವಿಧಿಶಾ ಜವಾಬ್ದಾರಿ ವಹಿಸಿಕೊಂಡರು. ಪ್ರಚಾರ ವಿಭಾಗದ ಜವಾಬ್ದಾರಿಯನ್ನು ಸಾಮ್ಯುಲ್, ಅಲಕನಂದಾ, ಮಹೇಶ್ ಡಿ.ಎನ್. ಮತ್ತು ರೋಬಿನ್ ಬೆಳ್ಳಿಯಪ್ಪ ನಿರ್ವಹಿಸಲಿದ್ದಾರೆ.
