ಕಾರ್ಕಳ: ಸೈಬರ್ ಅಪರಾಧ ಪ್ರಕರಣಗಳನ್ನು ತಡೆಗಟ್ಟುವಲ್ಲಿ ಸಾರ್ವಜನಿಕರ ಜಾಗೃತಿ ಅತ್ಯಂತ ಮುಖ್ಯವಾಗಿದೆ. ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಸುದ್ದಿಗಳು ಅಥವಾ ಪೋಸ್ಟ್‌ಗಳು ಮತ್ತು ಸಂದೇಶಗಳನ್ನು ಪ್ರಸಾರ ಮಾಡುವುದು ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಕಾರ್ಕಳ ಗ್ರಾಮಾಂತರ ಠಾಣೆಯ ಪಿಎಸ್‌ಐ ಪ್ರಸನ್ನ ಎಂ.ಎಸ್ ಹೇಳಿದರು.


ಅವರು ಜು.25 ರಂದು ಪತ್ರಿಕಾ ಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು. ಅಪರಿಚಿತ ವ್ಯಕ್ತಿಗಳು ಕಳುಹಿಸುವ ಎಪಿಕೆ ಫೈಲ್‌ಗಳು, ಅನುಮಾನಾಸ್ಪದ ಲಿಂಕ್‌ಗಳು ಹಾಗೂ ಅಪರಿಚಿತ ಮೊಬೈಲ್ ಅಪ್ಲಿಕೇಷನ್ ಯಾವುದೇ ಕಾರಣಕ್ಕೂ ಡೌನ್‌ಲೋಡ್ ಮಾಡಬಾರದು ಎಂದು ಸಲಹೆ ನೀಡಿದರು. ನಂತರ ಮಾತನಾಡಿದ ಅವರು, “ಹಿಂದಿನ ಅವಧಿಗೆ ಹೋಲಿಸಿದರೆ ಸೈಬರ್ ಅಪರಾಧ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿವೆ. ದಾಖಲಾದ ಪ್ರಕರಣಗಳಲ್ಲಿ ಸುಮಾರು ಶೇ.80ರಷ್ಟು ಪತ್ತೆ ಕಾರ್ಯ ಯಶಸ್ವಿಯಾಗಿ ನಡೆಸಲಾಗಿದೆ. ಆದರೂ ಸಾರ್ವಜನಿಕರು ಎಚ್ಚರಿಕೆಯಿಂದ ವರ್ತಿಸುವುದು ಅಗತ್ಯ. ಅಪರಿಚಿತರು ಕಳುಹಿಸುವ ಎಪಿಕೆ ಫೈಲ್‌ಗಳನ್ನು ಮಾಡುವುದರಿಂದ ಮೊಬೈಲ್‌ನಲ್ಲಿರುವ ವೈಯಕ್ತಿಕ ಮಾಹಿತಿ, ಬ್ಯಾಂಕ್ ಖಾತೆ ವಿವರಗಳು ಹಾಗೂ ಒಟಿಪಿ ಮಾಹಿತಿಗಳು ದುರುಪಯೋಗವಾಗುವ ಸಾಧ್ಯತೆ ಇದೆ” ಎಂದು ಹೇಳಿದರು.
ಪೋಕ್ಸೋ ಪ್ರಕರಣಗಳಲ್ಲಿ ಸಂತ್ರಸ್ತರ ಗುರುತು ಬಹಿರಂಗಪಡಿಸುವುದು ಕಾನೂನುಬಾಹಿರವಾಗಿದೆ. ಸಂತ್ರಸ್ತರ ಹೆಸರು, ವಿಳಾಸ, ಛಾಯಾಚಿತ್ರ ಅಥವಾ ಗುರುತು ಪತ್ತೆಯಾಗುವ ಯಾವುದೇ ಮಾಹಿತಿಯನ್ನು ಪ್ರಕಟಿಸಬಾರದು. ಈ ಕುರಿತು ಸುಪ್ರೀಂ ಕೋರ್ಟ್ ಹಾಗೂ ನ್ಯಾಯಾಲಯಗಳು ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿದ್ದು, ಮಾಧ್ಯಮಗಳು ಹಾಗೂ ಸಾರ್ವಜನಿಕರು ಅವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಲಹೆ ನೀಡಿದರು.
ಮೂಡಬಿದಿರೆ ಸಂಘದ ಅಧ್ಯಕ್ಷ ನವೀನ್ ಸಾಲ್ಯಾನ್ ಮಾತನಾಡಿ, ಅಪರಾಧ ವರದಿಗಳನ್ನು ಮಾಡುವಾಗ ಪ್ರಕರಣದ ಪೂರ್ವಾಪರವನ್ನು ತಿಳಿದು ಸುದ್ದಿ ಬರೆಯಬೇಕು. ಪತ್ರಕರ್ತರಿಗೆ ಅಕ್ಷರ ಜ್ಞಾನ ಇದ್ದರೆ ಸಾಲದು ಸುದ್ದಿಗಳನ್ನು ವಿಶ್ಲೇಷಿಸುವ ಸಾಮರ್ಥ್ಯವನ್ನು ಹೊಂದಿರಬೇಕು. ಪತ್ರಕರ್ತರು ತಂತ್ರಜ್ಞಾನಕ್ಕೆ ಹೊಂದಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್ ವಹಿಸಿದ್ದರು.
ಈ ಸಂದರ್ಭದಲ್ಲಿ ಸುಕುಮಾರ್ ಮುನಿಯಾಲು, ಹರೀಶ್ ಸಚ್ಚರಿಪೇಟೆ, ಹರೀಶ್ ಮುಂಡೂರು, ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.
