ಧರ್ಮಸ್ಥಳದಲ್ಲಿ “ನಲಿಯೋಣ ಬಾ” ರಂಗಶಿಬಿರ ಉದ್ಘಾಟನೆ

ಧರ್ಮಸ್ಥಳ: ಬೆಂಗಳೂರಿನ ಕ್ಷೇಮವನದ ಸಿ.ಇ.ಒ. ಶ್ರದ್ಧಾ ಅಮಿತ್ ಗುರುವಾರ ಧರ್ಮಸ್ಥಳದಲ್ಲಿ “ನಲಿಯೋಣ ಬಾ” ರಂಗಶಿಬಿರ ಉದ್ಘಾಟಿಸಿದರು.
ಶಿಕ್ಷಣದಲ್ಲಿ ರಂಗಭೂಮಿಯನ್ನು ಅಳವಡಿಸುವುದರಿಂದ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಸರ್ವತೋಮುಖ ಅಭಿವೃದ್ಧಿಗೆ ರಂಗಮಾದ್ಯಮ ಸಹಕಾರಿಯಾಗಿದೆ ಎಂಬುದನ್ನು ಮನಗಂಡ ಹೇಮಾವತಿ ವೀ. ಹೆಗ್ಗಡೆಯವರು ಈಗಾಗಲೇ ರಂಗ ಶಿಕ್ಷಣದಲ್ಲಿ ಪದವಿ ಪಡೆದ ನೀನಾಸಂ ನ ನುರಿತ ರಂಗ ನಿರ್ದೇಶಕರಿಂದ ತರಬೇತಿಯನ್ನು ನೀಡುವುದರ ಮುಖಾಂತರ ಹಲವಾರು ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡಿ ಕಲಾವಿದರನ್ನಾಗಿ ಮಾಡಿದ್ದಾರೆ.

ಸದಾಕಾಲ ಹೊಸ ಯೋಜನೆ, ಯೋಚನೆಗಳ ಮೂಲಕ ಕ್ರಿಯಾಶೀಲರಾಗಿರುವ ಹೇಮಾವತಿ ವೀ. ಹೆಗ್ಗಡೆಯವರು ಅವರೊಡನೆ  ಇರುವ ಎಲ್ಲರನ್ನು ಕ್ರಿಯಾಶೀಲರನ್ನಾಗಿಸುತ್ತಾರೆ. ಎಂಬುದಂತು ಸತ್ಯ ಇದಕ್ಕೆ ನಿದರ್ಶನವೆಂಬಂತೆ  ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ ಹೇಮಾವತಿ ವೀ. ಹೆಗ್ಗಡೆಯವರ ಪರಿಕಲ್ಪನೆ ಮಾರ್ಗದರ್ಶನದಲ್ಲಿ ಸುನಿಲ್‌ಶೆಟ್ಟಿ ಕಲ್ಲೊಪ್ಪ ಇವರ ಸಾರಥ್ಯದಲ್ಲಿ ರಂಗಶಿವ ಕಲಾಬಳಗ ಶ್ರೀ ಕ್ಷೇತ್ರ ಧರ್ಮಸ್ಥಳ ಅರ್ಪಿಸುವ ಐದನೇ ವರ್ಷದ ಮಕ್ಕಳ ಬೇಸಿಗೆ ಶಿಬಿರವನ್ನು ದಿನಾಂಕ 16-04-2026 ರಿಂದ 24-24-2026 ರ ವೆರೆಗೆ ನಡೆಸಲಾಗುತ್ತದೆ. ಈ ಕಾರ್ಯಕ್ರಮವನ್ನು ಬೆಂಗಳೂರಿನ ಕ್ಷೇಮವನದ ಸಿ.ಇ.ಒ. ಶ್ರದ್ಧಾಅಮಿತ್ ಇವರು ದೀಪಬೆಳಗಿಸಿ, ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿದರು.

ಉದ್ಘಾಟನೆಯನ್ನು ಮಾಡಿದ ಶ್ರದ್ಧಾಅಮಿತ್ ಅವರು ಮಕ್ಕಳನ್ನು ಶಿಬಿರದಲ್ಲಿ ಉತ್ತಮ ರೀತಿಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿದರು. ಮತ್ತು ತಮ್ಮ ಬಾಲ್ಯದ ಸವಿನೆನಪುಗಳನ್ನು ಮೆಲುಕು ಹಾಕುತ್ತ ತಾನು ಸಣ್ಣವಳಿದ್ದಾಗ ಅಮ್ಮನವರು ನಾಟಕದ ಶಿಬಿರಗಳನ್ನು ಪ್ರಾರಂಭಿಸಿದರು. ಈ ಪರಂಪರೆ ಮುಂದುವರಿಯುತ್ತಾ ಇರುವುದು ತುಂಬಾ ಸಂತೋಷದಾಯಕವಾಗಿದೆ, ಅಲ್ಲದೆ ಶಾಲೆಯಿಂದ ಹೊರಬಂದು ಬೇರೆ ಬೇರೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಈಗಿನ ವಿದ್ಯಾಮಾನದಲ್ಲಿ ತುಂಬಾ ಮುಖ್ಯವಾಗಿದೆ ಇನ್ನಷ್ಟು ಬೇರೆ ಬೇರೆ ಚಟುವಟಿಕೆಗಳಲ್ಲಿ ಬೆರೆತುಕೊಳ್ಳುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು, ಕ್ಷೇತ್ರದಲ್ಲಿ ಹಲವಾರು ಅವಕಾಶಗಳಿವೆ ಬೇರೆ ಬೇರೆ ಕಾರ್ಯಕ್ರಮಗಳು ನಡೆಯುತ್ತದೆ ಈ ಸಂದರ್ಭವನ್ನು ಉತ್ತಮವಾಗಿ ಉಪಯೋಗಿಸಿಕೊಳ್ಳಬೇಕು ಎಂದು ಹಿತನುಡಿಗಳನ್ನು ನುಡಿದರು.

ಜೀವನದಲ್ಲಿ ಬಾಲ್ಯದಿಂದ ದೊಡ್ಡವರಾಗುವವರೆಗೆ ಮುಖ್ಯವಾಗಿ ಮೂರು ಹವ್ಯಾಸಗಳು ಬೇಕು. ಮೊದಲನೆಯದಾಗಿ ಹಣಗಳಿಸುವ ಗುಣ ಜೀವನದಲ್ಲಿ ಮುಂದೆಬರುವುದಕ್ಕಾಗಿ, ಎರಡನೆಯದಾಗಿ ದೈಹಿಕವಾಗಿ ಸದೃಢರಾಗಿರಬೇಕು ಆರೋಗ್ಯವರ್ಧನೆಗೆ ಹಾಗೆಯೇ ಮೂರನೆಯದಾಗಿ ಸೃಜನಶೀಲತೆ ನಮ್ಮ ಬುದ್ದಿಗೆ ಕೆಲಸಕೊಡುವಂತ ಮೂರು ಹವ್ಯಾಸಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ತಮಗೆ ಯಾವ ಯಾವ ಹವ್ಯಾಸಗಳಿವೆ ಎಂದು ಪ್ರಶ್ನೆಮಾಡಿಕೊಳ್ಳಿ ಎಂದು ಮಕ್ಕಳಿಗೆ ಸವಾಲು ನೀಡಿದರು. ತಾವು ಮಾಡಿಕೊಳ್ಳುವ ಸಣ್ಣ ಹವ್ಯಾಸವು ಕೂಡ ತಮ್ಮ ಬುದ್ದಿಗೆ ಕೆಲಸವನ್ನು ನೀಡುತ್ತದೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಹಳೆವಿದ್ಯಾರ್ಥಿಯಾದ ವಿಲಾಸ್‌ನಾಯಕ್ ಅವರ ಪುಟ್ಟಹವ್ಯಾಸ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುಮಾಡಿರುವ ಕುರಿತು ಶ್ಲಾಘಿಸಿದರು. ಶಿಬಿರದ ಮೊದಲನೇ ಸವಾಲಾಗಿ ಕೆಲವೊಂದು ಒಗಟುಗಳನ್ನು ಕೇಳುವ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸಿದರು. ಶಿಬಿರದಲ್ಲಿ ಹೊಸ ಹೊಸ ಸ್ನೇಹಿತರನ್ನು ಮಾಡಿಕೊಂಡು ಶಿಬಿರದಲ್ಲಿ ಹೊಸ ಅನುಭವಗಳನ್ನುಗಳಿಸಿಕೊಳ್ಳಿ ಎಂದು ಶುಭ ಹಾರೈಸಿದರು.

ರಂಗಶಿವದ ಅಧ್ಯಕ್ಷರಾದ ರಾಜೇಂದ್ರದಾಸ್ ಪ್ರಾಸ್ತಾವಿಕ ಮಾತನಾಡಿ ಸೇರಿದ ಸರ್ವರನ್ನು ಸ್ವಾಗತಿಸಿದರು, ಸಂಚಾಲಕರಾದ ಸಂದೇಶ ವಂದನೆಯನ್ನಿತ್ತರು ಡಾ| ಅನನ್ಯ ಕಾರ್ಯಕ್ರಮ ನಿರೂಪಿಸಿದರು ಈ ಸಮಯದಲ್ಲಿ ರಂಗಶಿವದ ಸದಸ್ಯರಾದ ಪದ್ಮರೇಖಾ ಶ್ರದ್ಧಾ ಅಮಿತ್‌ರವರನ್ನು ಹೂಗುಚ್ಛ ನೀಡುವ ಮುಖಾಂತರ ಸ್ವಾಗತಿಸಿದರು.  ಜಗದೀಶ್, ಅಭಿಲಾಷ್, ಅಭಿಷೇಕ್‌ರಾವ್, ಸುಬ್ರಹ್ಮಣ್ಯ ಲಿಂಗಪ್ಪ, ಮಧುಶ್ರೀ ಯಶವಂತ್ ಹಾಗೂ ಮಕ್ಕಳ ಪೋಷಕರು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಧನಂಜಯ್ ಮತ್ತು ಸಂಗಡಿಗರು ಸಹಕರಿಸಿದರು.

Leave a Reply

Your email address will not be published. Required fields are marked *