ಕಾರ್ಕಳ, ಅ. 3: ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ಖಂಡಿಸಿ ಭಾರತೀಯ ಜನತಾ ಪಾರ್ಟಿ ಕಾರ್ಕಳ ಮಂಡಲದ ವತಿಯಿಂದ ಅಕ್ಟೋಬರ್ 5, ಸೋಮವಾರ ಬೆಳಗ್ಗೆ 10 ಗಂಟೆಗೆ ಕಾರ್ಕಳ ತಾಲೂಕು ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಬಿಜೆಪಿ ಕ್ಷೇತ್ರಾದ್ಯಕ್ಷ ನವೀನ್ ನಾಯಕ್ ತಿಳಿಸಿದ್ದಾರೆ.

ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವರಾದ ವಿ. ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಪ್ರತಿಭಟನೆಯಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಬಿಜೆಪಿ ಶಾಸಕರು, ಪಕ್ಷದ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದು, ರಾಜ್ಯ ಸರ್ಕಾರದ ಆಡಳಿತದಲ್ಲಿ ಬಡವರು, ರೈತರು ಹಾಗೂ ಮಧ್ಯಮ ವರ್ಗದ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿಶೇಷವಾಗಿ BPL ಪಡಿತರ ಚೀಟಿಗಳ ರದ್ದು, ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶದ ಕೊರತೆ, 94C ಹಾಗೂ ಬಗರ್‌ಹುಕುಂ ಅಕ್ರಮ-ಸಕ್ರಮ ಅರ್ಜಿಗಳ ತಿರಸ್ಕಾರ, ಸಾಮಾಜಿಕ ಭದ್ರತಾ ಪಿಂಚಣಿಗಳ ಕಡಿತ, ಇ-ಸ್ವತ್ತು, ಖಾತಾ ಹಾಗೂ ಏಕವಿನ್ಯಾಸ ಅನುಮೋದನೆಗೆ ಸಂಬಂಧಿಸಿದ ಸಮಸ್ಯೆಗಳು, ವಿದ್ಯುತ್ ದರ ಏರಿಕೆ ಮತ್ತು ಅಘೋಷಿತ ವಿದ್ಯುತ್ ಕಡಿತ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲಾಗುತ್ತಿದೆ.
ಕಾರ್ಕಳ ತಾಲೂಕಿನಲ್ಲಿ 1,000ಕ್ಕೂ ಅಧಿಕ BPL ಕಾರ್ಡ್‌ಗಳು ರದ್ದಾಗಿರುವುದು, 10,090ಕ್ಕೂ ಅಧಿಕ ಅಕ್ರಮ-ಸಕ್ರಮ ಅರ್ಜಿಗಳು ತಿರಸ್ಕೃತವಾಗಿರುವುದು ಹಾಗೂ 10,732ಕ್ಕೂ ಅಧಿಕ ಸಾಮಾಜಿಕ ಭದ್ರತಾ ಪಿಂಚಣಿಗಳ ವಿಚಾರ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇದರ ಜೊತೆಗೆ ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿ, ಮೂಲಸೌಕರ್ಯ, ಬಡವರ ವಸತಿ ಹಾಗೂ ಸಾರ್ವಜನಿಕರ ವಿವಿಧ ಸರ್ಕಾರಿ ಸೇವೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆಯೂ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ನವೀನ್ ನಾಯಕ್ ತಿಳಿಸಿದ್ದಾರೆ.
ಇದು ಕೇವಲ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆಯಲ್ಲ. ಸರ್ಕಾರದ ವಿವಿಧ ನಿರ್ಧಾರಗಳಿಂದ ಸಮಸ್ಯೆ ಎದುರಿಸುತ್ತಿರುವ ಬಡವರು, ರೈತರು, ಫಲಾನುಭವಿಗಳು ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಹೋರಾಟವಾಗಿದೆ. ಜಿಲ್ಲೆಯ ಬಿಜೆಪಿ ಶಾಸಕರು ಹಾಗೂ ಪ್ರಮುಖ ಮುಖಂಡರು ಭಾಗವಹಿಸುವ ಈ ಪ್ರತಿಭಟನೆಗೆ ಕಾರ್ಕಳ ತಾಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಸಮಸ್ಯೆಗಳಿಗೆ ಧ್ವನಿಯಾಗಬೇಕು ಎಂದು ನವೀನ್ ನಾಯಕ್ ತಿಳಿಸಿದ್ದಾರೆ.
