ಮೂಡುಬಿದಿರೆ: ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಮೇ 29 ರಂದು ಸಂಜೆ 6.30 ರಿಂದ ರಾತ್ರಿ 9.30ರವರೆಗೆ ವಿದ್ಯಾಗಿರಿಯ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನೀನಾಸಂ ನಟರಾಜ ಹೊನ್ನವಳ್ಳಿ ನಿರ್ದೇಶನದ ರಂಗಾಯಣ ಶಿವಮೊಗ್ಗ ಪ್ರಸ್ತುತ ಪಡಿಸುವ ಸ್ವಾತಂತ್ರ್ಯದ ಓಟ ಎಂಬ ನಾಟಕವನ್ನು ಏರ್ಪಡಿಸಲಾಗಿದೆ.


ತನ್ನ ಸೃಜನಶೀಲ ಗದ್ಯಕೃತಿಗಳಿಗಾಗಿ ಎರಡು ಬಾರಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ಬೊಳುವಾರು ಮಹಮ್ಮದ್ ಕುಂಞ ಇವರ ಕಾದಂಬರಿಯನ್ನು ಆಧರಿಸಿದ ಈ ನಾಟಕವು ವಿಭಜನೆಯ ಕರಾಳ ದಿನಗಳನ್ನು ಅನಾವರಣಗೊಳಿಸುತ್ತದೆ. ನೆಲೆ ಕಳೆದುಕೊಂಡ ಜನರ ನೋವು, ನಿರಾಶ್ರಿತ ಜೀವನ, ಪರಸ್ಪರ ಸೋದರರಂತೆ ಬದುಕುತ್ತಿದ್ದ ಜನಗಳಲ್ಲಿ ಎದುರಾಗುವ ಜನ್ಮಭೂಮಿ ಮತ್ತು ಕರ್ಮಭೂಮಿಯ ನಡುವಿನ ಅಂತರಂಗದ ಸಂಘರ್ಷವನ್ನು ಆಳವಾಗಿ ಬಿಂಬಿಸುತ್ತದೆ. ಭಿನ್ನತೆಗಳ ನಡುವೆ ಸಾಮರಸ್ಯ ಸಹಬಾಳ್ವೆ ಮತ್ತು ಮಾನವೀಯತೆ ಹೇಗೆ ಸೇತುವೆಯಾಗುತ್ತದೆ ಎಂಬ ಸಂದೇಶವನ್ನು ಈ ನಾಟಕ ತೋರಿಸುತ್ತದೆ
ಸರ್ವ ಜಾತಿ ಧರ್ಮದ ಪ್ರತಿಯೊಬ್ಬರೂ ನೋಡಬೇಕಾದ ವಿಶೇಷ ನಾಟಕವಾಗಿದ್ದು, 1111 ಪುಟಗಳ ಈ ಬೃಹತ್ ಕಾದಂಬರಿಯನ್ನು 3 ಗಂಟೆಯ ಪ್ರಯೋಗವನ್ನಾಗಿ ಮಾಡಲಾಗಿದೆ. ಕಲಾವಿದರ ಭಾವನಾತ್ಮಕ ಅಭಿನಯ, ಕವ್ವಾಲಿ, ಗಝಲ್ ಮುಂತಾಗಿ ಭಾರತೀಯ ಸಂಗೀತದಿಂದ ಕೂಡಿದ ಸ್ವಾತಂತ್ರ‍್ಯದ ಓಟವು ಪ್ರತಿಕ್ಷಣವೂ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ.
ಪ್ರವೇಶ ಉಚಿತವಾಗಿರುವ ಈ ಕರ‍್ಯಕ್ರಮದಲ್ಲಿ ಯಾವುದೇ ಸಭಾ ಕಾರ್ಯಕ್ರಮ ಇರದೆ ಸಮಯಕ್ಕೆ ಸರಿಯಾಗಿ ನಾಟಕ ಆರಂಭವಾಗಲಿದೆ ಎಂದು ಆಳ್ವಾಸ್ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
