ಕಾರ್ಕಳ: ಕರಾವಳಿ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ತುಂಬಾ ಗಂಭೀರವಾಗಿದ್ದು ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಯೋಜನೆಗಳಿಗೆ ಸರಕಾರ ಪ್ರಮುಖ ಆದ್ಯತೆ ನೀಡಬೇಕು. ನಿಟ್ಟೆ ಜವಳಿ ಪಾರ್ಕ್ ಯೋಜನೆ ಕಾಮಗಾರಿ ಕೂಡಲೆ ಆರಂಭಿಸಬೇಕು ಎಂದು ನಿಟ್ಟೆ ಜವಳಿ ಪಾರ್ಕ್ ಹೋರಾಟ ಸಮಿತಿ ಅಧ್ಯಕ್ಷ ನೇಮಿರಾಜ ರೈ ಅಗ್ರಹಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿರುವ ಸಂದರ್ಭದಲ್ಲಿ ಕರಾವಳಿಯ ಪ್ರಮುಖ ಹಾಗೂ ಉದ್ಯೋಗ ಸಂಬಂಧಿತ ವಿಚಾರಗಳ ಕುರಿತು ಸರಕಾರ ಸಮರ್ಪಕವಾಗಿ ಚರ್ಚಿಸಬೇಕು ವಿಶೇಷವಾಗಿ ಯುವ ಜನರಿಗೆ ಸ್ಥಳೀಯವಾಗಿಯೇ ಉದ್ಯೋಗ ಸೃಷ್ಟಿಸುವ ಯೋಜನೆಗಳ ಅನುಷ್ಠಾನಕ್ಕೆ ವೇಗ ನೀಡಬೇಕಾಗಿದೆ. ನಿಟ್ಟೆಯಲ್ಲಿ ಸುಮಾರು 4 ಸಾವಿರ ಉದ್ಯೋಗ ಸೃಷ್ಟಿ ಮಾಡುವ ಸಾಮರ್ಥ್ಯ ಹೊಂದಿರುವ ಜವಳಿ ಪಾರ್ಕ್ ಯೋಜನೆಗೆ ಮಂಜೂರಾತಿ ದೊರೆತು ಸುಮಾರು 6 ವರ್ಷ ಕಳೆದಿದ್ದರು ಇದುವರೆಗೆ ಯೋಜನೆ ಕಾರ್ಯಗತಗೊಂಡಿಲ್ಲ.
ಸರಕಾರದಿಂದ 15 ಎಕರೆ ಜಾಗ ಮಂಜೂರಾಗಿದ್ದು 27.97 ಕೋಟಿ ರೂ, ಅನುದಾನವಿದೆ ಎನ್ನ ಲಾಗುತ್ತಿದೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ ಯೋಜನೆಯನ್ನು ಅನುಷ್ಠಾನಗೊಳಿಸಿದರೆ ನಿಟ್ಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮಾತ್ರವಲ್ಲದೆ ತಾಲೂಕಿನ ಯುವ ಜನರಿಗೂ ಉದ್ಯೋಗಾವಕಾಶ ದೊರೆಯಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಆನಂದ, ಜೋಸೆಫ್ ಪೀಟರ್ ಸಲ್ದಾನ, ಶೋಭಾ ಮೂಲ್ಯ, ಒಪಿಲಿಯಾ ಡಿಸೋಜಾ ಉಪಸ್ಥಿತರಿದ್ದರು.
