ಆಳ್ವಾಸ್‍ನಲ್ಲಿ ‘‘ಎನ್‍ಕ್ಯೂಎಎಸ್ ಎಕ್ಸ್ಪ್ಲೋರೇಷನ್–2026’ ಪ್ರಾದೇಶಿಕ ಸಮ್ಮೇಳನ

ಮೂಡುಬಿದಿರೆ: ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಗುಣಮಟ್ಟದ ಸೇವೆ ಒದಗಿಸುವುದು ಕೇವಲ ನಿಯಮಗಳ ಪಾಲನೆಯಲ್ಲ, ಅದು ಪ್ರತಿಯೊಬ್ಬ ಆರೋಗ್ಯ ಕಾರ್ಯಕರ್ತನ ವೃತ್ತಿಪರ ಜವಾಬ್ದಾರಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಹೇಳಿದರು.

ಆಳ್ವಾಸ್ ಕಾಲೇಜ್ ಆಫ್ ನರ್ಸಿಂಗ್ ನ ಸಮುದಾಯ ಆರೋಗ್ಯ ನರ್ಸಿಂಗ್ ವಿಭಾಗದ ವತಿಯಿಂದ ಡಾ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾದ ‘ಎನ್‍ಕ್ಯೂಎಎಸ್ ಎಕ್ಸ್ಪ್ಲೋರೇಷನ್–2026’ ಪ್ರಾದೇಶಿಕ ಸಮ್ಮೇಳನವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರೀಯ ಗುಣಮಟ್ಟದ ಭರವಸೆ ಮಾನದಂಡಗಳು (ಎನ್‍ಕ್ಯೂಎಎಸ್) ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಗುಣಮಟ್ಟದ ಸೇವೆಯನ್ನು ಖಚಿತಪಡಿಸಿಕೊಳ್ಳಲು ರೂಪಿಸಲಾದ ಮಹತ್ವದ ಚೌಕಟ್ಟಾಗಿವೆ. ಇವುಗಳ ಪರಿಣಾಮಕಾರಿ ಅನುಷ್ಠಾನದಿಂದ ರೋಗಿಗಳಿಗೆ ಸುರಕ್ಷಿತ ಮತ್ತು ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಸಾಧ್ಯ. ಆದರೆ ಗುಣಮಟ್ಟವನ್ನು ಕೇವಲ ದಾಖಲೆಗಳು ಮತ್ತು ಪರಿಶೀಲನೆಗಳಿಗೆ ಸೀಮಿತಗೊಳಿಸದೆ, ಪ್ರತಿದಿನದ ಕೆಲಸದ ಭಾಗವಾಗಿಸಿಕೊಳ್ಳಬೇಕು. ಆಸ್ಪತ್ರೆಯ ಪ್ರತಿಯೊಂದು ವಿಭಾಗದಲ್ಲಿಯೂ ಗುಣಮಟ್ಟದ ಸೇವೆಯ ಬಗ್ಗೆ ಅರಿವು ಮತ್ತು ಜವಾಬ್ದಾರಿ ಇರಬೇಕು.

ರೋಗಿಗಳಿಗೆ ಉತ್ತಮ ಸೇವೆ ನೀಡುವುದು, ಆಸ್ಪತ್ರೆಯ ಪರಿಸರವನ್ನು ಸ್ವಚ್ಛವಾಗಿರಿಸುವುದು ಮತ್ತು ನಿಗದಿತ ಕಾರ್ಯವಿಧಾನಗಳನ್ನು ಶಿಸ್ತುಬದ್ಧವಾಗಿ ಅನುಸರಿಸುವುದು ಪ್ರತಿಯೊಬ್ಬ ಸಿಬ್ಬಂದಿಯ ಕರ್ತವ್ಯವಾಗಿದೆ. ಸಂಸ್ಥೆಯ ಮುಖ್ಯಸ್ಥರು ಮತ್ತು ಹಿರಿಯ ಅಧಿಕಾರಿಗಳು ನೀಡುವ ಮಾರ್ಗದರ್ಶನವನ್ನು ಪ್ರಾಮಾಣಿಕವಾಗಿ ಅನುಸರಿಸಿ, ವೈಯಕ್ತಿಕ ಸ್ವಾರ್ಥವನ್ನು ಬದಿಗಿಟ್ಟು ಸಾಮೂಹಿಕ ಗುರಿಯೊಂದಿಗೆ ಕಾರ್ಯನಿರ್ವಹಿಸಬೇಕು. ನಿರಂತರ ಪರಿಶ್ರಮ ಮತ್ತು ಕಾರ್ಯವೈಖರಿಯಲ್ಲಿ ಸಕಾರಾತ್ಮಕ ಬದಲಾವಣೆ ತರುವ ಮೂಲಕ ಗುಣಮಟ್ಟದ ಸೇವೆಯನ್ನು ಮತ್ತಷ್ಟು ಉತ್ತಮಪಡಿಸಬಹುದು ಎಂದರು.

ಆಳ್ವಾಸ್ ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರದ ಡೀನ್ ಡಾ. ಮಹಾಬಲೇಶ್ ಶೆಟ್ಟಿ ಮಾತನಾಡಿ, ಆರೋಗ್ಯ ಸೇವೆಯಲ್ಲಿ ಗುಣಮಟ್ಟವೇ ಮೂಲಾಧಾರವಾಗಿದೆ. ರೋಗನಿರ್ಣಯ ಮಾಡುವುದು, ಚಿಕಿತ್ಸೆ ನೀಡುವುದು ಅಥವಾ ಔಷಧಿಗಳನ್ನು ಸೂಚಿಸುವುದಕ್ಕೆ ಮಾತ್ರ ಆರೋಗ್ಯ ಸೇವೆ ಸೀಮಿತವಾಗಬಾರದು. ಪ್ರತಿಯೊಬ್ಬ ರೋಗಿಗೂ ಸುರಕ್ಷಿತ, ಪರಿಣಾಮಕಾರಿ, ಸಮಯೋಚಿತ ಮತ್ತು ಸಹಾನುಭೂತಿಯಿಂದ ಕೂಡಿದ ಆರೈಕೆಯನ್ನು ಒದಗಿಸುವುದು ಆರೋಗ್ಯ ವ್ಯವಸ್ಥೆಯ ಪ್ರಮುಖ ಉದ್ದೇಶವಾಗಬೇಕು ಎಂದರು. ರಾಷ್ಟ್ರೀಯ ಗುಣಮಟ್ಟದ ಭರವಸೆ ಮಾನದಂಡಗಳು ಸಾರ್ವಜನಿಕ ಆರೋಗ್ಯ ಸಂಸ್ಥೆಗಳ ಸೇವೆಯ ಗುಣಮಟ್ಟವನ್ನು ಮೌಲ್ಯಮಾಪನ ಮಾಡಲು ಮತ್ತು ನಿರಂತರವಾಗಿ ಸುಧಾರಿಸಲು ಮಾರ್ಗದರ್ಶನ ನೀಡುತ್ತವೆ. ಈ ಮಾನದಂಡಗಳನ್ನು ಕೇವಲ ಪರಿಶೀಲನಾ ಪಟ್ಟಿ ಅಥವಾ ದಾಖಲೆಗಳ ನಿರ್ವಹಣೆಗೆ ಸೀಮಿತಗೊಳಿಸದೆ, ದೈನಂದಿನ ವೈದ್ಯಕೀಯ ಕಾರ್ಯವೈಖರಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಗುಣಮಟ್ಟವನ್ನು ಕಾಪಾಡಿಕೊಳ್ಳಲು ನಿರಂತರ ಮೇಲ್ವಿಚಾರಣೆ, ನಿಯಮಿತ ಮೌಲ್ಯಮಾಪನ ಮತ್ತು ಸುಧಾರಣಾ ಕ್ರಮಗಳು ಅತ್ಯಗತ್ಯ. ಈ ನಿಟ್ಟಿನಲ್ಲಿ ವೈದ್ಯಕೀಯ ಮತ್ತು ನರ್ಸಿಂಗ್ ಶಿಕ್ಷಣ ಸಂಸ್ಥೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ತರಗತಿಯ ಬೋಧನೆ ಮತ್ತು ಕ್ಲಿನಿಕಲ್ ತರಬೇತಿಯ ಹಂತದಿಂದಲೇ ಗುಣಮಟ್ಟದ ಅರಿವು ಬೆಳೆಸಿದಾಗ, ಭವಿಷ್ಯದ ಆರೋಗ್ಯ ವೃತ್ತಿಪರರಲ್ಲಿ ರೋಗಿಗಳ ಸುರಕ್ಷತೆ ಮತ್ತು ಸೇವೆಯ ಗುಣಮಟ್ಟದ ಬಗ್ಗೆ ಬದ್ಧತೆ ಮೂಡಿಸಲು ಸಾಧ್ಯ ಎಂದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಕಾಲೇಜ್ ಆಫ್ ನರ್ಸಿಂಗ್ ನ ಪ್ರಾಂಶುಪಾಲ ಡಾ. ಬಿ.ಎ. ಯತಿಕುಮಾರ ಸ್ವಾಮಿ ಗೌಡ ಮಾತನಾಡಿ, ಗುಣಮಟ್ಟದ ಆರೋಗ್ಯ ಸೇವೆಯ ಸಂಸ್ಕೃತಿ ತರಗತಿಯಿಂದಲೇ ಆರಂಭವಾಗಬೇಕು. ನರ್ಸಿಂಗ್ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಹಂತದಿಂದಲೇ ರೋಗಿಗಳ ಸುರಕ್ಷತೆ, ನಿಖರವಾದ ದಾಖಲೀಕರಣ, ಸೋಂಕು ನಿಯಂತ್ರಣ ಮತ್ತು ರೋಗಿಗಳ ಹಕ್ಕುಗಳ ಗೌರವಕ್ಕೆ ಸಂಬಂಧಿಸಿದ ವೃತ್ತಿಪರ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಇವು ಆರೋಗ್ಯ ವೃತ್ತಿಪರರ ಮೂಲ ಜವಾಬ್ದಾರಿಗಳಾಗಿದ್ದು, ನಿರಂತರ ಅಭ್ಯಾಸದ ಮೂಲಕ ಕಾರ್ಯಕ್ಷೇತ್ರದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ತಾಂತ್ರಿಕ ಗೋಷ್ಠಿ, ಸಂವಾದ
ಸಮ್ಮೇಳನದ ಅಂಗವಾಗಿ ರಾಷ್ಟ್ರೀಯ ಗುಣಮಟ್ಟದ ಭರವಸೆ ಮಾನದಂಡಗಳ ವಿವಿಧ ಆಯಾಮಗಳ ಕುರಿತು ತಜ್ಞರಿಂದ ಉಪನ್ಯಾಸಗಳು ಮತ್ತು ಸಂವಾದ ಕಾರ್ಯಕ್ರಮ ನಡೆಯಿತು. ಮಂಗಳೂರಿನ ಫಾದರ್ ಮುಲ್ಲರ್ ಕಾಲೇಜ್ ಆಫ್ ನರ್ಸಿಂಗ್ ನ ಸಮುದಾಯ ಆರೋಗ್ಯ ನರ್ಸಿಂಗ್ ವಿಭಾಗದ ಪ್ರಾಧ್ಯಾಪಕಿ ಡಾ. ಶಿಜಿ ಪಿ.ಜೆ.ಯವರು ‘ಎನ್‍ಕ್ಯೂಎಎಸ್:ಗುಣಮಟ್ಟದ ಚೌಕಟ್ಟಿನ ಅರಿವು’ ವಿಷಯದ ಕುರಿತು ಮಾತನಾಡಿದರು.
ಮಂಗಳೂರಿನ ಕೆಎಎಂಸಿಯ ಸ್ವಾಸ್ಥವೃತ್ತ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ರಾಘವೇಂದ್ರ ರಾವ್ ಎಸ್‍ರವರು ಎನ್‍ಕ್ಯೂಎಎಸ್: ಗುಣಮಟ್ಟದ ಎಂಟು ಆಯಾಮಗಳು–ಭಾಗ 1’ ಕುರಿತು, ಆಳ್ವಾಸ್ ಆಯುರ್ವೇದ ಕಾಲೇಜಿನ ಕಾಯಚಿಕಿತ್ಸಾ ವಿಭಾಗದ ಪ್ರಾಧ್ಯಾಪಕಿ ಹಾಗೂ ಮುಖ್ಯಸ್ಥೆ ಡಾ. ಸುರೇಖಾ ಪೈ ಎನ್‍ಕ್ಯೂಎಎಸ್: ಗುಣಮಟ್ಟದ ಎಂಟು ಆಯಾಮಗಳು–ಭಾಗ 2’ ಕುರಿತು ಉಪನ್ಯಾಸ ನೀಡಿದರು.
‘ಪರಿಶೀಲನಾ ಪಟ್ಟಿಯನ್ನು ಮೀರಿ: ಮೌಲ್ಯಮಾಪಕರು ಮತ್ತು ಮೌಲ್ಯಮಾಪನಕ್ಕೊಳಗಾಗುವವರ ದೃಷ್ಟಿಕೋನ’ ಎಂಬ ವಿಷಯದ ಕುರಿತು ನಡೆದ ಗೋಷ್ಠಿಯಲ್ಲಿ ಕಾಟಿಪಳ್ಳ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ಯಶಸ್ವಿನಿ ಕೆ.ಎಸ್., ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ಲೆನಿಟಾ ಡಿಸೋಜಾ ಹಾಗೂ ಆಳ್ವಾಸ್ ಕಾಲೇಜ್ ಆಫ್ ನರ್ಸಿಂಗ್ ನ ಸಮುದಾಯ ಆರೋಗ್ಯ ನರ್ಸಿಂಗ್ ವಿಭಾಗದ ಮುಖ್ಯಸ್ಥೆ ಪ್ರೊ. ನಿಕ್ಸಿ ಎನ್.ಎಂ. ಭಾಗವಹಿಸಿದರು. ಎನ್‍ಕ್ಯೂಎಎಸ್ ಮೌಲ್ಯಮಾಪನದ ಪ್ರಕ್ರಿಯೆ, ಅನುಷ್ಠಾನದಲ್ಲಿನ ಅನುಭವಗಳು ಮತ್ತು ಗುಣಮಟ್ಟದ ಮಾನದಂಡಗಳನ್ನು ದೈನಂದಿನ ಆರೋಗ್ಯ ಸೇವೆಯಲ್ಲಿ ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವ ಕುರಿತು ಚರ್ಚಿಸಲಾಯಿತು.

ಈ ಸಮ್ಮೇಳನದಲ್ಲಿ ದೇಶದ ವಿವಿಧ ಭಾಗಗಳಿಂದ 600ಕ್ಕೂ ಅಧಿಕ ಸಮೂದಾಯ ಆರೋಗ್ಯ ಅಧಿಕಾರಿಗಳು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಆರೋಗ್ಯ ಕಾರ್ಯಕರ್ತರು ಭಾಗವಹಿಸಿದರು.
ವೇದಿಕೆಯಲ್ಲಿ ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್ ವೀಕ್ಷಕ ಕೆ. ಅನಿಲ್ ಕುಮಾರ್, ಕಾಲೇಜಿನ ಪ್ರಾಚಾರ್ಯ ಡಾ. ಬಿ.ಎ. ಯತಿಕುಮಾರ ಸ್ವಾಮಿ ಗೌಡ ಹಾಗೂ ಉಪಪ್ರಾಂಶುಪಾಲೆ ಪ್ರೊ. ರೇಣುಕಾ, ಕಾರ್ಯಕ್ರಮದ ಸಂಯೋಜಕಿ ಪ್ರೊ. ನಿಕ್ಸಿ ಎನ್. ಇದ್ದರು.
ಕಾರ್ಯಕ್ರಮದ ಸಂಯೋಜಕಿ ಪ್ರೊ. ನಿಕ್ಸಿ ಎನ್. ಸ್ವಾಗತಿಸಿ, ಉಪಪ್ರಾಂಶುಪಾಲೆ ಪ್ರೊ. ರೇಣುಕಾ ವಂದಿಸಿ, ಉಪನ್ಯಾಸಕ ರಾಜೇಶ್ ಡಿಸೋಜಾ ನಿರೂಪಿಸಿದರು.

Leave a Reply

Your email address will not be published. Required fields are marked *